ರಾಯಚೂರು: ಶಾಲಾ ಬಸ್ ಹರಿದು ಸಾವನ್ನಪ್ಪಿದ್ದ ಇಬ್ಬರು ಮಕ್ಕಳ ಅಂತ್ಯಕ್ರಿಯೆ ಗುರುವಾರ (ಫೆ.12) ರಾಯಚೂರಿನ ಸ್ವಗ್ರಾಮದಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಬುಧವಾರ (ಫೆ.11) ದ್ವಿಚಕ್ರ ವಾಹನಕ್ಕೆ ಸ್ಕೂಲ್ ಬಸ್ ಡಿಕ್ಕಿ ಹೊಡೆದು 2 ವರ್ಷದ ವರ್ಷಾ ಹಾಗೂ 4 ವರ್ಷದ ಭಾನು ಸಾವನ್ನಪ್ಪಿದ್ದರು. ಇದನ್ನೂ ಓದಿ: ಸ್ಕೂಟರ್ ಮೇಲೆ ಹರಿದ ಶಾಲಾ ಬಸ್ – ಇಬ್ಬರು ಪುಟ್ಟ ಕಂದಮ್ಮಗಳು ಸಾವು
ಗುರುವಾರ (ಫೆ.12) ಸ್ವಗ್ರಾಮ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಒಂದಾಲಿ ಗ್ರಾಮದಲ್ಲಿ ಎರಡು ಮಕ್ಕಳ ಅಂತ್ಯಕ್ರಿಯೆ ನೆರವೇರಿತು. ಮೃತದೇಹಗಳನ್ನು ಬೆಳಗಿನ ಜಾವ ಗ್ರಾಮಕ್ಕೆ ತರಲಾಯಿತು. ಈ ವೇಳೆ, ನಾಗನಗೌಡ ಮಾಲಿ ಪಾಟೀಲ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಆಗಿದ್ದೇನು?
ಗುರುವಾರ (ಫೆ.12) ಬೆಳಗ್ಗೆ ಸಿಎಆರ್ ಹೆಡ್ ಕಾನ್ಸ್ಟೇಬಲ್ ನಾಗನಗೌಡ ಮಾಲಿಪಾಟೀಲ್ ಅವರು ತಮ್ಮ ಡಿಯೋ ಸ್ಕೂಟರ್‌ನಲ್ಲಿ ತನ್ನ ಮಗಳಾದ ವರ್ಷಾ ಮತ್ತು ಅಣ್ಣನ ಮಗಳು ಬಾನು ಅವರನ್ನು ನಿಲ್ಲಿಸಿಕೊಂಡು ಹೊರಟಿದ್ದರು. ಥಣಿಸಂದ್ರದ ಪಿಟಿಎಸ್ ಕಡೆಯಿಂದ ಹೆಗಡೆನಗರದ ಕಡೆಗೆ ಹೋಗಲು ಸೆಂಟ್ರಲ್ ರೆವನ್ಯೂ ಲೇಔಟ್ ಮೈನ್ ರೋಡ್‌ನಲ್ಲಿ ಹೋಗುವಾಗ, 3ನೇ ಕ್ರಾಸ್ ಕಡೆಯಿಂದ ಹಜ್ ಮೋನಿ ಸ್ಕೂಲ್ ಬಸ್ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ.
ಮಕ್ಕಳ ಮೇಲೆ ಖಾಸಗಿ ಶಾಲಾ ಬಸ್ ಹರಿದ ಪರಿಣಾಮ ಇಬ್ಬರೂ ಸಾವಿಗೀಡಾಗಿದ್ದಾರೆ. ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹೆಣ್ಣೂರು ಸಂಚಾರಿ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಲಾ ಬಸ್ ಹರಿದ ಪರಿಣಾಮ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಾನ್‌ಸ್ಟೇಬಲ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ಚಾಲಕ ಮಾರೇಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.ಇದನ್ನೂ ಓದಿ: ಹಣಕಾಸಿನ ವಿಚಾರಕ್ಕಾಗಿ ಡಬಲ್ ಮರ್ಡರ್ – ತಂದೆ, ತಾಯಿಯನ್ನೇ ಕೊಂದ ಟೆಕ್ಕಿ ಅರೆಸ್ಟ್

