ಶಿವಮೊಗ್ಗ: ತಾಳಗುಪ್ಪದಿಂದ (Talaguppa) ಬೆಂಗಳೂರಿಗೆ (Bengaluru) ತೆರಳುತ್ತಿದ್ದ ರೈಲಿನಲ್ಲಿ (Train) ದರೋಡೆಕೋರನೊಬ್ಬ ತಲ್ವಾರ್ ಹಿಡಿದು ಬೋಗಿಯೊಳಗೆ ನುಗ್ಗಿ ದಾಂಧಲೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಶಿವಮೊಗ್ಗದ ವಿದ್ಯಾನಗರದಲ್ಲಿರುವ (ಮಹಾದೇವಿ ಟಾಕೀಸ್) ಹಳೆ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ರಾತ್ರಿ (ಫೆ.10) ರಾತ್ರಿ 11 ಗಂಟೆ 50 ನಿಮಿಷಕ್ಕೆ ಶಿವಮೊಗ್ಗದಿಂದ ಹೊರಡಬೇಕಿದ್ದ ರೈಲು ತಡವಾಗಿ ಆಗಮಿಸಿತ್ತು. ರೈಲು ವಿದ್ಯಾನಗರದ ಹಳೆ ನಿಲ್ದಾಣಕ್ಕೆ ಬರುತ್ತಿದ್ದಂತೆ ಬೋಗಿಯೊಳಗೆ ನುಗ್ಗಿದ ಆಗಂತುಕ, ಕೈಯಲ್ಲಿ ಮಾರಕಾಸ್ತ್ರ ಹಿಡಿದು ಪ್ರಯಾಣಿಕರನ್ನು ಹೆದರಿಸಿದ್ದಾನೆ. ಇದನ್ನೂ ಓದಿ: ರಾಯಚೂರು | ಖಾಸಗಿ ಬಸ್ – ಕಾರಿನ ನಡುವೆ ಮುಖಾಮುಖಿ ಡಿಕ್ಕಿ; ಚಾಲಕ ಗಂಭೀರ
ತಲ್ವಾರ್ ಬೀಸಿದ್ದರಿಂದ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿವೆ ಎನ್ನಲಾಗಿದೆ. ಈ ಮಧ್ಯೆ ದುಷ್ಕರ್ಮಿ ಓರ್ವನ ಮೊಬೈಲ್ ಹಾಗೂ ದುಡ್ಡನ್ನು ಎಗರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಶಿವಮೊಗ್ಗ ಟೌನ್ ರೈಲು ಸ್ಟೇಷನ್ನಿಂದ ಕೇವಲ 1 ಕಿಲೋಮೀಟರ್ ದೂರದಲ್ಲಿರುವ ಈ ನಿಲ್ದಾಣದಲ್ಲಿ ಘಟನೆ ನಡೆದಿದೆ. ರೈಲಿನಲ್ಲಿ ನಡೆದ ದರೋಡೆ ಯತ್ನ ಮತ್ತು ಹಲ್ಲೆ ಪ್ರಕರಣವನ್ನು ರೈಲ್ವೇ ಇಲಾಖೆ (Indian Railway) ಅಧಿಕೃತವಾಗಿ ದೃಢಪಡಿಸಿದೆ.
ಪ್ರಯಾಣಿಕರೊಬ್ಬರು ರೈಲ್ ಮದದ್ (RailMadad) ಪೋರ್ಟಲ್‌ನಲ್ಲಿ ನೀಡಿದ ದೂರಿಗೆ ಇಲಾಖೆ ಉತ್ತರ ನೀಡಿದೆ. ಉತ್ತರದಲ್ಲಿ ರೈಲು ಸಂಖ್ಯೆ 16582 (SMET-YPR) ಎಕ್ಸ್‌ಪ್ರೆಸ್ ರೈಲಿನ ಎಸ್-9 (S-9) ಬೋಗಿಯಲ್ಲಿ ನಡೆದ ಘಟನೆ ಬಗ್ಗೆ ಪ್ರಯಾಣಿಕೊಬ್ಬರು ದೂರು ನೀಡಿದ್ದು, ಅವರ ದೂರಿನಂತೆ ರೈಲ್ವೆ ಬೋಗಿಯೊಳಗೆ ನುಗ್ಗಿದ್ದ ದುಷ್ಕರ್ಮಿ ದೂರುದಾರರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಲು ಯುತ್ನಿಸಿದ. ಅದೇ ಬೋಗಿಯಲ್ಲಿದ್ದ ಇನ್ನೊಬ್ಬ ಪ್ರಯಾಣಿಕರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ ಅವರ ಬಳಿ ಇದ್ದ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ರೈಲ್ವೇ ಇಲಾಖೆಯು ತಕ್ಷಣವೇ ಕರ್ತವ್ಯದಲ್ಲಿದ್ದ ಶಿವಮೊಗ್ಗ ರೈಲ್ವೆ ಪೊಲೀಸ್ (PC/SMET) ಮತ್ತು ಬೆಂಗಳೂರು ಜಿಆರ್‌ಪಿ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಅಪಘಾತ – ಸಾವಿಗೀಡಾಗಿದ್ದ ಭಾರತದ ವಿದ್ಯಾರ್ಥಿನಿ ಕುಟುಂಬಕ್ಕೆ 260 ಕೋಟಿ ಪರಿಹಾರ

