– ವಿಕೆಟ್ ನಷ್ಟವಿಲ್ಲದೇ ಪಂದ್ಯ ಗೆದ್ದ ಕಿವೀಸ್
ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯುಎಇ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿ 2026 ರ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದೆ.
ಟಿಮ್ ಸೀಫರ್ಟ್ (42 ಎಸೆತಗಳಲ್ಲಿ 89*) ಮತ್ತು ಫಿನ್ ಅಲೆನ್ (50 ಎಸೆತಗಳಲ್ಲಿ 84*) ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಯುಎಇ ಬೌಲರ್‌ಗಳನ್ನು ಚೆಂಡಾಡಿದರು. ಕೇವಲ 15.2 ಓವರ್‌ಗಳಲ್ಲಿ ಪ್ರಬಲ ಪ್ರದರ್ಶನ ನೀಡುವ ಮೂಲಕ ತಂಡವನ್ನು ಗೆಲ್ಲಿಸಿದರು. ವಿಕೆಟ್ ನಷ್ಟವಿಲ್ಲದೇ ನ್ಯೂಜಿಲೆಂಡ್ ನಿರಾಯಾಸ ಗೆಲುವು ಸಾಧಿಸಿತು. ಟಿಮ್ ಮತ್ತು ಫಿನ್ 175 ರನ್‌ಗಳ ಜೊತೆಯಾಟ ದಾಖಲೆ ಬರೆದಿದೆ.
ಯುಎಇ ನೀಡಿದ 175 ರನ್‌ಗಳ ಗುರಿಯನ್ನು ಬೆನ್ನಟ್ಟಲು ನ್ಯೂಜಿಲೆಂಡ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಎಡಗೈ ಸ್ಪಿನ್ನರ್ ಹೈದರ್ ಅಲಿ ಮೊದಲ ಎರಡು ಓವರ್‌ಗಳಲ್ಲಿ ಕೇವಲ ಎಂಟು ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು. ನಂತರದಲ್ಲಿ ಬೌಲರ್‌ಗಳು ರನ್‌ಗಳ ಹರಿವನ್ನು ತಡೆಯುವಲ್ಲಿ ವಿಫಲರಾದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇನ್ನಿಂಗ್ಸ್‌ನ ಆರಂಭದಲ್ಲಿ ಅಲೆನ್ ಪ್ರಮುಖ ಆಕ್ರಮಣಕಾರಿ ಆಟಗಾರರಾಗಿದ್ದರು. ಕೇವಲ 23 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
ಟಿಮ್ ಸೀಫರ್ಟ್ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ಜೋಡಿ ನಿರ್ಭೀತ ಸ್ಟ್ರೋಕ್‌ಪ್ಲೇ ಮತ್ತು ಕ್ಲೀನ್ ಹಿಟ್ಟಿಂಗ್ ಮೂಲಕ ಯುಎಇ ಬೌಲರ್‌ಗಳನ್ನು ಚೆಂಡಾಡಿತು. ಕೇವಲ 51 ಎಸೆತಗಳಲ್ಲಿ ಶತಕದ ಜೊತೆಯಾಟವಾಡಿದರು. ನ್ಯೂಜಿಲೆಂಡ್ ತಂಡವು ಅಂತಿಮವಾಗಿ ಒಂದೇ ಒಂದು ವಿಕೆಟ್ ಕಳೆದುಕೊಳ್ಳದೇ ಜಯ ದಾಖಲಿಸಿತು. ಸೀಫರ್ಟ್ ಮತ್ತು ಅಲೆನ್ ಟಿ20ಐ ಇತಿಹಾಸದಲ್ಲಿ ನ್ಯೂಜಿಲೆಂಡ್ ಪರ ಅತ್ಯಧಿಕ ಆರಂಭಿಕ ಜೊತೆಯಾಟವನ್ನು ದಾಖಲಿಸಿದರು. 2016 ರಿಂದ ಮಾರ್ಟಿನ್ ಗುಪ್ಟಿಲ್ ಮತ್ತು ಕೇನ್ ವಿಲಿಯಮ್ಸನ್ ಅವರ ದೀರ್ಘಕಾಲೀನ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
2016 ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಗುಪ್ಟಿಲ್ ಮತ್ತು ವಿಲಿಯಮ್ಸನ್ ಮೊದಲ ವಿಕೆಟ್‌ಗೆ 106 ಎಸೆತಗಳಲ್ಲಿ 171 ರನ್ ಸೇರಿಸಿದ್ದರು. ಈಗ ಸೀಫರ್ಟ್ ಮತ್ತು ಅಲೆನ್ ಕೇವಲ 92 ಎಸೆತಗಳಲ್ಲಿ 175 ರನ್‌ಗಳ ಬೃಹತ್ ಜೊತೆಯಾಟ ನಡೆಸಿ ನ್ಯೂಜಿಲೆಂಡ್ ತಂಡವನ್ನು ಗ್ರೂಪ್ ಡಿ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ದರು.
ಇದಕ್ಕೂ ಮೊದಲು, ಮುಹಮ್ಮದ್ ವಸೀಮ್ (45 ಎಸೆತಗಳಲ್ಲಿ 66*) ಮತ್ತು ಅಲಿಶಾನ್ ಶರಫು (47 ಎಸೆತಗಳಲ್ಲಿ 55) ಅವರ ಅರ್ಧಶತಕಗಳ ನೆರವಿನಿಂದ ಯುಎಇ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 173 ರನ್ ಗಳಿಸಿತು. ಜಾಕೋಬ್ ಡಫಿ ಆರ್ಯನ್ಶ್ ಶರ್ಮಾ (6 ಎಸೆತಗಳಲ್ಲಿ 8) ಔಟ್ ಮಾಡಿದ ನಂತರ, ಈ ಜೋಡಿ ಎರಡನೇ ವಿಕೆಟ್‌ಗೆ 77 ಎಸೆತಗಳಲ್ಲಿ 107 ರನ್‌ಗಳ ಬೃಹತ್ ಜೊತೆಯಾಟವನ್ನು ನೀಡಿತು.
ಶರಫು, ಮಿಚೆಲ್ ಸ್ಯಾಂಟ್ನರ್ ಬೌಲಿಂಗ್‌ಗೆ ಔಟಾದ ನಂತರ, ಮಯಾಂಕ್ ಕುಮಾರ್ (13 ಎಸೆತಗಳಲ್ಲಿ 21) ಕೂಡ ಅಮೂಲ್ಯವಾದ ಕೊಡುಗೆ ನೀಡಿದರು. ನಾಯಕ ವಸೀಮ್ ಜೊತೆಗೆ ತಂಡದ ಆಟಗಾರರು 170 ರನ್‌ಗಳ ಗಡಿ ದಾಟಲು ಸಹಾಯ ಮಾಡಿದರು.

