ಹಾಸನ: ಸಕಲೇಶಪುರ (Sakleshpura) ತಾಲೂಕಿನ ದೋಣಿಗಾಲ್ ಪ್ರದೇಶದಲ್ಲಿ ನಡೆಯುತ್ತಿರುವ ರಸ್ತೆ (Road) ಕಾಮಗಾರಿಗೆ ಅಡ್ಡಿಪಡಿಸಿ ಪಕ್ಕದ ಭೂಮಾಲೀಕರು ಪ್ರತಿಭಟನೆ ನಡೆಸಿದ್ದು, ಕಾಮಗಾರಿಗೆ ಅಡ್ಡಿ ಉಂಟಾಗಿದೆ. ಇದರಿಂದ ಜಿಲ್ಲಾಡಳಿತ ಆ ಪ್ರದೇಶದಲ್ಲಿ ನಿಷೇದಾಜ್ಞೆ ವಿಧಿಸಿದೆ.

ದೋಣಿಗಾಲ್ ವಿಭಾಗದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಸಲುವಾಗಿ ಪೊಲೀಸ್ ರಕ್ಷಣೆ ಒದಗಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಪ್ರಚಲಿತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ – 2023ರ ಸೆಕ್ಷನ್ 163 (Section 163) ಹಾಗೂ ಕರ್ನಾಟಕ ಪೊಲೀಸ್ ಅಧಿನಿಯಮ-1963ರ ಕಲಂ 35ರಡಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದೆ. ಫೆಬ್ರವರಿ 9 ರಿಂದ ಮಾರ್ಚ್ 7, 2026 ರವರೆಗೆ NH – 75 ದೋಣಿಗಾಲ್ ರಸ್ತೆ-ಕೆಸಗನಹಳ್ಳಿ ರಸ್ತೆ ನಡುವಿನ ಕಾಮಗಾರಿ ನಡೆಯಲಿದ್ದು, ಸದರಿ ಕಾಮಗಾರಿ ಪ್ರದೇಶದ ಸುತ್ತಲೂ 100 ಮೀಟರ್ ವ್ಯಾಪ್ತಿಯಲ್ಲಿ ನಿಬಂಧನೆಗಳನ್ನು ವಿಧಿಸಲಾಗಿದೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಉದ್ಯಮಿಯ ಬರ್ಬರ ಹತ್ಯೆ
ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಐದು ಜನರಿಗಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಜೊತೆಗೆ ಆಯುಧಗಳು ಅಥವಾ ಮಾರಕಾಸ್ತ್ರಗಳನ್ನು ಹೊತ್ತುಕೊಂಡು ಸಂಚರಿಸುವುದು, ಯಾವುದೇ ರೀತಿಯ ಪ್ರಚಾರ ಸಾಮಗ್ರಿಗಳನ್ನು ಹಿಡಿದು ಘೋಷಣೆ ಕೂಗಿ ಪ್ರಚಾರ ನಡೆಸುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕುರಿತು ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಚಕ್ರ ತುಂಡಾಗಿ ತೋಟಕ್ಕೆ ನುಗ್ಗಿದ ಬಸ್ – ಪ್ರಯಾಣಿಕರು ಪಾರು

