ಢಾಕಾ: ಬಾಂಗ್ಲಾದೇಶದಲ್ಲಿ (Bangladesh) ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆಯಾಗಿದೆ. ದೇಶದ ರಾಷ್ಟ್ರೀಯ ಸಂಸತ್ತಿನ ಚುನಾವಣೆಗೆ ಮತದಾನಕ್ಕೆ ಇನ್ನೆರಡು ದಿನ ಬಾಕಿ ಇರುವಾಗಲೇ ಅಪರಿಚಿತ ದಾಳಿಕೋರರು ಹಿಂದೂ ಉದ್ಯಮಿಯೊಬ್ಬರನ್ನು (Hindu Businessman) ಕ್ರೂರವಾಗಿ ಹತ್ಯೆ ಮಾಡಿದ್ದಾರೆ.
ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 62 ವರ್ಷದ ಸುಶೇನ್ ಚಂದ್ರ ಸರ್ಕಾರ್ ಕೊಲೆಯಾದವರು. ಇವರು ದಕ್ಷಿಣಕಂದ ಗ್ರಾಮದ ನಿವಾಸಿಯಾಗಿದ್ದು, ಅಕ್ಕಿ ವ್ಯಾಪಾರಿಯಾಗಿದ್ದರು. ಉಪ ಜಿಲ್ಲೆಯ ಬೋಗರ್ ಬಜಾರ್ ಬಳಿ ‘ಭಾಯ್ ಭಾಯ್ ಎಂಟರ್‌ಪ್ರೈಸ್’ ಅನ್ನು ಹೊಂದಿದ್ದರು. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕನ ಮನೆಗೆ ಬೆಂಕಿ
ರಾತ್ರಿ 11 ಗಂಟೆಗೆ ಮಾರುಕಟ್ಟೆ ಬಳಿ ಕೊಲೆ ನಡೆದಿದೆ. ಅಪರಿಚಿತ ದುಷ್ಕರ್ಮಿಗಳು ಸರ್ಕಾರ್ ಅವರನ್ನು ಹರಿತವಾದ ಆಯುಧದಿಂದ ಹೊಡೆದು, ಅಂಗಡಿಯೊಳಗೆ ಹಾಕಿ ಬಾಗಿಲು ಮುಚ್ಚಿದ್ದಾರೆ. ಸರ್ಕಾರ್ ಅವರನ್ನು ಕೊಲೆ ಮಾಡಿದ ನಂತರ ಅಂಗಡಿಯಿಂದ ಲಕ್ಷಾಂತರ ರೂಪಾಯಿ ಹಣವನ್ನು ಕದ್ದಿದ್ದಾರೆ.
ಕುಟುಂಬವು ಅಂಗಡಿಯೊಳಗೆ ಹುಡುಕುತ್ತಿದ್ದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸರ್ಕಾರ್ ಮೃತದೇಹ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ಮೈಮೆನ್ಸಿಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು. ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಬಲಿ – ಕಿಡಿಗೇಡಿಗಳಿಂದ ಪಾರಾಗಿದ್ದ ಉದ್ಯಮಿ ಚಿಕಿತ್ಸೆ ಫಲಕಾರಿಯಾಗದೇ ಸಾವು
ಕೊಲೆಗಾರರು ನನ್ನ ತಂದೆಯನ್ನು ಕೊಂದ ನಂತರ ಅಂಗಡಿಯಿಂದ ಹಣವನ್ನು ಕದ್ದಿದ್ದಾರೆ. ಬಹಳ ವರ್ಷಗಳಿಂದ ಅಕ್ಕಿ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ಯಾರಿಗೂ ನಮ್ಮ ಮೇಲೆ ದ್ವೇಷವಿರಲಿಲ್ಲ. ನನ್ನ ತಂದೆಯನ್ನು ಕ್ರೂರವಾಗಿ ಕೊಂದ ನಂತರ ಅಪರಾಧಿಗಳು ಅಂಗಡಿಯಿಂದ ಲಕ್ಷಾಂತರ ಟಾಕಾಗಳನ್ನು ಕದ್ದಿದ್ದಾರೆ ಎಂದು ಕೊಲೆಯಾದ ವ್ಯಕ್ತಿಯ ಮಗ ಸುಜನ್ ಸರ್ಕಾರ್ ಆರೋಪಿಸಿದ್ದಾರೆ.

