ಮಂಗಳೂರು: ಪರಮಪವಿತ್ರ ಕ್ಷೇತ್ರ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ (Sarantaya Garodi Sasihitlu Sri Sarantaya Garodi Ullaya Deivasthana) ಸಸಿಹಿತ್ಲು ಜೀರ್ಣೋದ್ಧಾರದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವಕ್ಕೆ ಕ್ಷೇತ್ರ ಸಜ್ಜಾಗಿದೆ.
ಫೆ.4 ರಿಂದ 10 ರ ತನಕ ನಿರಂತರ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಶ್ರೀ ಕ್ಷೇತ್ರದಲ್ಲಿ ಜರುಗಲಿದೆ. ಕ್ಷೇತ್ರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿ.ಬಿ.ಕರ್ಕೇರ ಅವರು ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಇದನ್ನೂ ಓದಿ: ಆಡಳಿತ-ವಿಪಕ್ಷಗಳ ಪ್ರತಿಷ್ಠೆಗೆ ಬಲಿಯಾದ ವಿಧಾನ ಪರಿಷತ್ ಕಲಾಪ
ಬಡವರೇ ತುಂಬಿರುವ ಸಸಿಹಿತ್ಲು ಎಂಬ ಇಷ್ಟು ಸಣ್ಣ ಗ್ರಾಮದಲ್ಲಿ ನಾಲ್ಕು ಕರೆ ಸಮಾಜ ಒಟ್ಟಾಗಿ ಸುಮಾರು 3.5 ಕೋಟಿ ರೂ. ವೆಚ್ಚದ ಬೃಹತ್ ಯೋಜನೆಯನ್ನು ಸಿದ್ಧಪಡಿಸಬೇಕಿದ್ದರೆ ಇದು ಉಳ್ಳಾಯ ಮತ್ತು ಪರಿವಾರ ಶಕ್ತಿಗಳ ಕಾರ್ನಿಕವಲ್ಲದೆ ನಮ್ಮಿಂದ ಆದದ್ದು ಏನೂ ಇಲ್ಲ. ಎರಡು ವರ್ಷಗಳ ಹಿಂದೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವಾಗ ತುಂಬಾ ಹೆದರಿಕೆ ಇತ್ತು. ಅದೆಷ್ಟೋ ವರ್ಷಗಳಿಂದ ಕನಸಾಗಿಯೇ ಉಳಿದಿದ್ದ ಈ ಯೋಜನೆ ಕೈಗೂಡಲು ಸಾಧ್ಯವೇ ಎಂಬ ಭಯ ಆವರಿಸಿದ್ದ ಸಂದರ್ಭದಲ್ಲಿ ಕ್ಷೇತ್ರದ ಶಕ್ತಿಗಳು ಹಿಂದಿನಿಂದ ನಿಂತು ಸಮಸ್ತ ಭಕ್ತರಿಗೆ ಅಭಯ ಕೊಟ್ಟ ಪರಿಣಾವಾಗಿ ಇಷ್ಟು ದೊಡ್ಡ ಯೋಜನೆ ಸಿದ್ಧವಾಗಿ ನಿಂತಿದೆ ಎಂದು ತಿಳಿಸಿದರು.
ನಮ್ಮ ಹೃದಯಂತರಾಳದ ಮನವಿಗೆ ದಾನಿಗಳು ಸಕಾರಾತ್ಮವಾಗಿ ಸ್ಪಂದಿಸಿದ ಫಲವಿದು. ದೈವಸ್ಥಾನ ಇಡೀ ಶಿಲಾಮಯವಾಗಿ ಆಗಬೇಕೆಂಬುದು ನಮ್ಮ ಹೆಬ್ಬಯಕೆ ಆಗಿತ್ತು. ನಾವು ನಿರೀಕ್ಷಿಸಿದಂತೆ ಎಲ್ಲ ಕಡೆಯಿಂದ ಹಣಕಾಸಿನ ನೆರವು ಬಂದಿದ್ದರಿಂದ ಈ ಯೋಜನೆ ಯಶಸ್ವಿ ಆಯಿತು. ದೈವಸ್ಥಾನದ ಒಳಾಂಗಣದಲ್ಲಿ ಫೆ.4 ರಿಂದ 8 ರ ತನಕ ನಿರಂತರ ವೈದಿಕ ವಿಧಿವಿಧಾನಗಳು, ಋತ್ವಿಜರ ನೇತೃತ್ವದಲ್ಲಿ ನಡೆಯುತ್ತಿದ್ದರೆ, ಹೊರಾಂಗಣದಲ್ಲಿ ಹಾಕಿರುವ ಎರಡು ವೇದಿಕೆಯಲ್ಲಿ ಪ್ರತ್ಯೇಕವಾಗಿ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಒಂದು ವೇದಿಕೆಗೆ ‘ಉಳ್ಳಾಯ ಮದಿಪು ಚಾವಡಿ’ ಹೆಸರಲಿಡಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ವೇದಿಕೆಗೆ ಕಾಂತುಲಕಣ ಗಡಿಪ್ರದಾನ ಯಾನೆ ಪಠೇಲ್ ಯಾದವ ಜಿ. ಬಂಗೇರ ಸಾಂಸ್ಕೃತಿಕ ವೇದಿಕೆ ಎಂದು ಹೆಸರಿಡಲಾಗಿದೆ. ಫೆ.4ರಿಂದ 8 ರ ತನಕ ನಿರಂತರ ಭಜನಾ ಕಾರ್ಯಕ್ರಮ ನಡೆಯಲಿದೆ. ಈ ವೇದಿಕೆಗೆ ‘ಕಾಂತಾಬಾರೆ ಬುಧಾಬಾರೆ ಭಜಕ ವೇದಿಕೆ’ ಎಂದು ಹೆಸರಿಡಲಾಗಿದೆ. ಇತಿಹಾಸ ಪುರುಷರಾದ ಕಾಂತಾಬಾರೆ ಬುದಾಬಾರೆಯರು ಸುಮಾರು 800 ವರ್ಷಗಳ ಹಿಂದೆ ಸ್ಥಾಪಿಸಿದ ಈ ಗರೋಡಿಯನ್ನು ಸದ್ಯೋಭವಿಷ್ಯದಲ್ಲಿ ಅವಿಸ್ಮರಣೀಯವಾಗಿ ಉಳಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಈ ಯೋಜನೆಗಳೆಲ್ಲ ಸಾಕಾರಗೊಳ್ಳುವ ಭರವಸೆ ಇದೆ ಎಂದರು.
ಈ ದೈವಸ್ಥಾನ ಸಸಿಹಿತ್ಲಿನ ಕಡಲಕಿನಾರೆಗೆ ಹೊಂದಿಕೊಂಡಿರುವುದರಿಂದ ಮಾತ್ರವಲ್ಲದೆ ಪ್ರವಾಸಿ ತಾಣ ಈ ಜಾಗದಲ್ಲೇ ಇರುವುದರಿಂದ ಸದ್ಯೋಭವಿಷ್ಯದಲ್ಲಿ ಇದನ್ನು ಒಂದು ವಿಶಿಷ್ಟ ಕಲ್ಪನೆಯಲ್ಲಿ ಅಭಿವೃದ್ಧಿಪಡಿಸಿ ಆ ಮೂಲಕ ಧಾರ್ಮಿಕ ದತ್ತಿ ಇಲಾಖೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುವ ಆಶಯ ನಮ್ಮದು. ಈಗಾಗಲೇ ಆಮಂತ್ರಣ ಪತ್ರಿಕೆಯನ್ನು ವಿತರಿಸಿದ ಪ್ರಕಾರ ಅಗಾಧ ಸಂಖ್ಯೆಯಲ್ಲಿ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಈ ನಿಟ್ಟಿನಲ್ಲಿ ಪಾರ್ಕಿಂಗ್ ವ್ಯವಸ್ಥೆ, ಸುರಕ್ಷತಾ ವ್ಯವಸ್ಥೆ ಎಲ್ಲ ಸಿದ್ಧತೆಗಳನ್ನು ಅರ್ಥಪೂರ್ಣವಾಗಿ ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಮುದಾಯದ ಹಿತಕ್ಕಾಗಿ ಲಿಂಗಾಯತ ಕಾಂಗ್ರೆಸ್ ಪಕ್ಷದ ಶಾಸಕರ ಸಭೆ: ಎಂ.ಬಿ.ಪಾಟೀಲ್
ಶ್ರೀ ಉಳ್ಳಾಯ ಮತ್ತು ಪರಿವಾರ ಶಕ್ತಿಗಳಿಗೆ ಪ್ರಧಾನಗೊಂಡ ಕಾಂತಾಬಾರೆ ಬುದಾಬಾರೆ ಮತ್ತು ಮಾಯಂದಾಲ್ ದೈವಕ್ಕೆ ಪ್ರತ್ಯೇಕ ಗುಡಿ ನಿರ್ಮಿಸಲಾಗಿದ್ದು, ಎದುರಿನ ಗೋಪುರವನ್ನು ನವೀಕರಿಸಲಾಗಿದೆಯಲ್ಲದೆ ಪ್ರವೇಶದ್ವಾರವನ್ನು ಉದ್ಘಾಟಿಸಲಾಗುವುದು. ಈ ಜೀರ್ಣೋದ್ಧಾರ ಯಶಸ್ವಿ ಆಗುವ ನಿಟ್ಟಿನಲ್ಲಿ ಊರಿನ ಜೀರ್ಣೋದ್ಧಾರ ಸಮಿತಿ, ಆಡಳಿತ ಸಮಿತಿ, ಮಹಿಳಾ ಸಮಿತಿ ಮಾತ್ರವಲ್ಲದೇ ಮುಂಬೈ, ಬೆಂಗಳೂರು ಮತ್ತು ಹೊರನಾಡಿನಲ್ಲಿ ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಅವರೆಲ್ಲರ ಒಟ್ಟು ಪ್ರಯತ್ನದ ಫಲವೇ ಇಷ್ಟು ದೊಡ್ಡ ಯೋಜನೆಯನ್ನು ಯಶಸ್ವಿಗೊಳಿಸಲು ಕಾರಣವಾಗಿದೆ. ಈ ಬೃಹತ್ ಯೋಜನೆ ಯಶಸ್ವಿಯಾಗಿ ನಡೆಸಲು ವಿವಿಧ ಉಪಸಮಿತಿಗಳನ್ನು ರಚಿಸಲಾಗಿದೆ. ಎಲ್ಲ ಸಮಿತಿಗಳು ಅತ್ಯಂತ ಯಶಸ್ವಿಯಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಿವೆ ಎಂದರು.

