ಬೆಂಗಳೂರು: ಪಬ್ಲಿಕ್ ಟಿವಿಯ (PUBLiC TV) 14ನೇ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಪಬ್ಲಿಕ್ ಟಿವಿ ಸಹೋದ್ಯೋಗಿಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಬ್ಲಿಕ್ ವಾರಿಯರ್ಸ್ ತಂಡ ಫೈನಲ್ ನಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸತತ ಎರಡನೇ ವರ್ಷವು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ವಿಜಯನಗರ ಬಿಜಿಎಸ್ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಪಂದ್ಯದಲ್ಲಿ ನರಸಿಂಹ ಮೂರ್ತಿ ನಾಯಕತ್ವದ ಪಬ್ಲಿಕ್ ಕ್ಯಾಪ್ಟನ್ ತಂಡದ ವಿರುದ್ಧ ಲೋಕೇಶ್ ನಾಯಕತ್ವದ ಪಬ್ಲಿಕ್ ವಾರಿಯರ್ಸ್ ತಂಡ 1 ರನ್ ಗಳ ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಾರಿಯರ್ಸ್ ತಂಡ ನಾಲ್ಕು ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿತು. 36 ರನ್ ಗುರಿ ಬೆನ್ನತ್ತಿದ ಪಬ್ಲಿಕ್ ಕ್ಯಾಪ್ಟನ್ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದಿದ್ದರೂ 34 ರನ್ ಗಳಿಸಲಷ್ಟೇ ಶಕ್ತವಾಯಿತು.
ಈ ಮೂಲಕ ಫೈನಲ್ ಪಂದ್ಯದಲ್ಲಿ ಪಬ್ಲಿಕ್ ಕ್ಯಾಪ್ಟನ್ ತಂಡ 1 ರನ್ ಗಳಿಂದ ಸೋಲು ಕಂಡಿತು. ವಿಜೇತ ತಂಡಕ್ಕೆ ಫೆಬ್ರವರಿ 12 ರಂದು ನಡೆಯಲಿರುವ ಪಬ್ಲಿಕ್ ಟಿವಿಯ 14 ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ, ಸಂಸ್ಥೆಯ ಮುಖ್ಯಸ್ಥರಾದ ಹೆಚ್.ಆರ್. ರಂಗನಾಥ್ (HR Ranganath) ಟ್ರೋಫಿ ವಿತರಣೆ ಮಾಡಲಿದ್ದಾರೆ.

