– ಬರೋಬ್ಬರಿ 36 ಸಿಕ್ಸರ್, 36 ಬೌಂಡರಿ ದಾಖಲು
ತಿರುವನಂತಪುರಂ: ಇಶಾನ್ ಕಿಶನ್ (Ishan Kishan), ಸೂರ್ಯಕುಮಾರ್ ಯಾದವ್ (Suryakumar Yadav) ಸಿಡಿಲಬ್ಬರದ ಬ್ಯಾಟಿಂಗ್, ಅರ್ಷ್‌ದೀಪ್ ಸಿಂಗ್ ಬೆಂಕಿ ಬೌಲಿಂಗ್ ದಾಳಿ ನೆರವಿನಿಂದ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 46 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯನ್ನ 4-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.
ತಿರುವನಂತಪುರಂ ಕ್ರೀಡಾಂಗಣದಲ್ಲಿ ನಡೆದ ಟಿ20 ಸರಣಿಯ ಕೊನೇ ಪಂದ್ಯವು ವೀಕೆಂಡ್‌ನಲ್ಲಿ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು. ಸಿಕ್ಸರ್, ಬೌಂಡರಿ ಆಟದಲ್ಲಿ ಬರೋಬ್ಬರಿ 36 ಸಿಕ್ಸ್, 36 ಬೌಂಡರಿಗಳು ಸಿಡಿದವು. ಭಾರತದ ಪರ 23 ಸಿಕ್ಸರ್, 17 ಬೌಂಡರಿ ದಾಖಲಾದ್ರೆ, ಕಿವೀಸ್ ಪರ 13 ಸಿಕ್ಸರ್, 19 ಬೌಂಡರಿಗಳು ದಾಖಲಾದವು.
ಕಿವೀಸ್ ಎಡವಿದ್ದೆಲ್ಲಿ?
ಗೆಲುವಿಗೆ 272 ರನ್‌ಗಳ ಬೃಹತ್ ಗುರಿ ಪಡೆದಿದ್ದ ನ್ಯೂಜಿಲೆಂಡ್ 17 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡರೂ ಬಳಿಕ ಅಬ್ಬರಿಸಲು ಶುರು ಮಾಡಿತು. ಫಿನ್ ಅಲೆನ್, ರಚಿನ್ ರವೀಂದ್ರ ಸ್ಫೋಟಕ ಬ್ಯಾಟಿಂಗ್ ನಿಂದ 8 ಓವರ್‌ಗಳಲ್ಲೇ ಶತಕ ಬಾರಿಸಿತ್ತು. ಒಂದಂತದಲ್ಲಿ ಈ ಜೋಡಿಯ ಬ್ಯಾಟಿಂಗ್ ಮುಂದುವರಿದರೆ, ಪಂದ್ಯದ ಫಲಿತಾಂಶವೇ ಬದಲಾಗುವ ಸಾಧ್ಯತೆಯಿತ್ತು. ಆದ್ರೆ ಫಿನ್ ಅಲ್ಲೆನ್ ಆರ್ಭಟಕ್ಕೆ ಅಕ್ಷರ್ ಪಟೇಲ್ ಬ್ರೇಕ್ ಹಾಕಿದ್ರು.
9ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ಅಕ್ಷರ್ ಪಟೇಲ್ ಮೊದಲ ಎಸೆತದಲ್ಲೇ ಸ್ಟಂಪ್ ಔಟ್‌ಗೆ ಅವಕಾಶ ಮಾಡಿಕೊಟ್ರು, ಆದ್ರೆ ಇಶಾನ್ ಕಿಶನ್ ಅವರ ವೈಫಲ್ಯದಿಂದ ಫಿನ್ ಅಲ್ಲೆನ್ ಬಚಾವ್ ಆಗಿದ್ದರು. ಅದೇ ಓವರ್‌ನ ಕೊನೆ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಅಲ್ಲೆನ್ ಬೌಂಡರಿ ಲೈನ್ ಬಳಿ ಕ್ಯಾಚ್‌ಕೊಟ್ಟು ಪೆವಿಲಿಯನ್‌ಗೆ ಮರಳಿದ್ರು. ಇಲ್ಲಿಂದೀಚೆಗೆ ಭಾರತೀಯ ಬೌಲರ್‌ಗಳ ಪರಾಕ್ರಮವೇ ಸದ್ದು ಮಾಡಿತು. ಕಿವೀಸ್ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಲು ಶುರು ಮಾಡಿದ್ರು. ಹೀಗಾಗಿ ನ್ಯೂಜಿಲೆಂಡ್ 19.4 ಓವರ್‌ಗಳಲ್ಲಿ 225 ರನ್‌ಗಳಿಗೆ ಆಲೌಟ್ ಆಯಿತು.
ಕಿವೀಸ್ ಪರ ಫಿನ್ ಅಲ್ಲೆನ್ 38 ಎಸೆತಗಳಲ್ಲಿ ಸ್ಫೋಟಕ 80 ರನ್ (6 ಸಿಕ್ಸರ್, 8 ಬೌಂಡರಿ) ಚಚ್ಚಿದ್ರೆ, ರಚಿನ್ ರವೀಂದ್ರ 30 ರನ್, ಡೇರಿಲ್ ಮಿಚೆಲ್ 12 ಎಸೆತಗಳಲ್ಲಿ 26 ರನ್, ಐಶ್ ಸೋಡಿ 15 ಎಸೆತಗಳಲ್ಲಿ 33 ರನ್ ಬಾರಿಸಿದ್ರು. ಉಳಿದೆಲ್ಲರೂ ಅಲ್ಪಮೊತ್ತಕ್ಕೆ ಔಟಾಗಿ ತಂಡದ ಸೋಲಿಗೆ ಕಾರಣವಾದರು.
ಟೀಂ ಇಂಡಿಯಾ ಪರ ಅರ್ಷ್‌ದೀಪ್ 5 ವಿಕೆಟ್, ಅಕ್ಷರ್ ಪಟೇಲ್ 3 ವಿಕೆಟ್ ಕಿತ್ತರೆ, ರಿಂಕು ಸಿಂಗ್, ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಕಿತ್ತರು. ಇನ್ನೂ ಕಿವೀಸ್ ಪರ ಲಾಕಿ ಫರ್ಗೂಸನ್ 2 ವಿಕೆಟ್ ಕಿತ್ತರೆ, ಮಿಚೆಲ್ ಸ್ಯಾಂಟ್ನರ್, ಕೈಲ್ ಜೇಮಿಸನ್, ಜಾಕೋಬ್ ಡಫ್ಫಿ ತಲಾ ಒಂದೊಂದು ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಇಶಾನ್ ಕಿಶನ್ 103 ರನ್, ಸೂರ್ಯಕುಮಾರ್ ಯಾದವ್ 63 ರನ್, ಹಾರ್ದಿಕ್ ಪಾಂಡ್ಯ 42 ರನ್, ಅಭಿಷೇಕ್ ಶರ್ಮಾ 30 ರನ್ ಬಾರಿಸಿದ್ರು.




