ಬೆಂಗಳೂರು: ಸಿ.ಜೆ ರಾಯ್ ನನ್ನ ತಂದೆ ಸ್ಥಾನದಲ್ಲಿ, ಸ್ನೇಹಿತನ ಸ್ಥಾನದಲ್ಲಿದ್ರು ಎಂದು ಕಾಂಗ್ರೆಸ್ ನಾಯಕ ಮಹಮ್ಮದ್ ನಲಪಾಡ್ ಭಾವುಕರಾಗಿದ್ದಾರೆ.
ಅಗಲಿದ ಕಾನ್ಫಿಡೆಂಟ್ ಗ್ರೂಪ್ ಸಿಇಓ ಸಿ.ಜೆ ರಾಯ್ ಅವರ ಬಗ್ಗೆ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಅವರು ಯಾವಾಗಲೂ ನಗುನಗುತ್ತ ಇದ್ರು. ನನಗೆ ಸಂಕಟ ಬಂದಾಗ ಅವರ ಹತ್ರ ಮಾತಾಡ್ತಿದ್ದೆ. ಅವರು ನನಗೆ ಧೈರ್ಯ ಹೇಳ್ತಿದ್ರು. ಅವರು ಅಗಲಿರುವುದು ನಂಬಲು ಸಾಧ್ಯವಿಲ್ಲ. ಇದನ್ನು ಸುಮ್ಮನೆ ಬಿಡುವ ಮಾತಿಲ್ಲ, ಪೊಲೀಸರ ಬಗ್ಗೆ ನನಗೆ ನಂಬಿಕೆ ಇದೆ. ಈ ಬಗ್ಗೆ ತನಿಖೆ ನಡೆಯಲಿ. ರಾಯ್ ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ ಎಂದಿದ್ದಾರೆ. ಇದನ್ನೂ ಓದಿ: ಸಿನಿ ರಂಗದೊಂದಿಗೆ ಸಿಜೆ ರಾಯ್ ನಂಟು ಅಪಾರ – ಕನ್ನಡ, ಮಲಯಾಳಂ ನಲ್ಲಿ 11 ಸಿನಿಮಾ ನಿರ್ಮಾಣ

ಕೇರಳ ಮೂಲದ ಖ್ಯಾತ ಉದ್ಯಮಿ ಕಾನ್ಫಿಡೆಂಟ್ ಗ್ರೂಪ್ ಸಿಇಓ ಸಿ.ಜೆ ರಾಯ್ (Confident Group CEO CJ Roy) ಅವರು ಶುಕ್ರವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆಯಿಂದ ಪದೇ ಪದೇ ಆದ ದಾಳಿಗೆ ಹೆದರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ನಗರದಲ್ಲಿ ಇವರ ಹೆಸರಿನಲ್ಲಿ ಹಲವು ದೊಡ್ಡ ಹೋಟೆಲ್‌ಗಳು (Hotel) ಮತ್ತು ರೆಸಾರ್ಟ್‌ಗಳು ಇದ್ದವು. ಈ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸಿ.ಜೆ. ರಾಯ್ ಅವರು ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಮತ್ತು ಸಂಸ್ಥಾಪಕರಾಗಿದ್ದರು. ಅವರು ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದು, ಹಲವು ಕ್ಷೇತ್ರಗಳಲ್ಲಿ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನ ವಿಸ್ತರಿಸಿದ್ದಾರೆ. ಅಲ್ಲದೇ, ಅವರು ಸ್ಲೋವಾಕ್ ಗಣರಾಜ್ಯದ ಗೌರವ ಕಾನ್ಸಲ್ ಆಗಿಯೂ ಕರ್ನಾಟಕ ಮತ್ತು ಕೇರಳದಲ್ಲಿ (Kerala) ಸೇವೆ ಸಲ್ಲಿಸಿದ್ದರು.
ಕಾರುಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ರಾಯ್, ದುಬೈ ಮತ್ತು ಭಾರತದಲ್ಲಿ ಹಲವು ದುಬಾರಿ ಐಷಾರಾಮಿ ಮತ್ತು ಸ್ಪೋರ್ಟ್ಸ್ ಕಾರುಗಳನ್ನೂ (Sports Car) ಹೊಂದಿದ್ದರು. ರೋಲ್ಸ್ ರಾಯ್ಸ್‌ಗಳು, ಲ್ಯಾಂಬೋರ್ಗಿನಿಗಳು, ಮತ್ತು ಬಗ್ಗಾಟಿ ವೆರಾನ್‌ನಂತಹ ಕಾರುಗಳು ಅವರ ಗ್ಯಾರೇಜ್‌ನಲ್ಲಿವೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ರಾಯ್ – 1 ಗಂಟೆ ಐಟಿ ವಿಚಾರಣೆ ಬಳಿಕ ಆತ್ಮಹತ್ಯೆ; ಆಗಿದ್ದೇನು?

