– ಟ್ರಯಲ್‌ಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ಬೆಂಗಳೂರು: ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದಂತೆ, ಹೈಕೋರ್ಟ್ ಆದೇಶ ಪ್ರಶ್ನಿಸಿ ಜಯನಗರ ಶಾಸಕ ಸಿ.ಕೆ ರಾಮಮೂರ್ತಿ (CK Ramamurthy) ಸಲ್ಲಿಸಿದ್ದ ಮೇಲ್ಮನವಿಯನ್ನ ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ.
ಪ್ರಕರಣದ ಟ್ರಯಲ್‌ಗೆ (ವಿಚಾರಣೆ) ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಹಾಗೂ ಎನ್ವಿ ಅಂಜಾರಿಯಾ ಅವರಿದ್ದ ತ್ರಿಸದಸ್ಯ ಪೀಠವು ವಜಾಗೊಳಿಸಿದೆ.
ಏನಿದು ವಿವಾದ?
2023ರಲ್ಲಿ ನಡೆದಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ, ಜಯನಗರ ಕ್ಷೇತ್ರದಿಂದ (Jayanagar Constituency) ಸಿ.ಕೆ. ರಾಮಮೂರ್ತಿ ಬಿಜೆಪಿ ಅಭ್ಯರ್ಥಿಯಾಗಿ ಮತ್ತು ಸೌಮ್ಯ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ () ಕೇವಲ 16 ಮತಗಳಿಂದ ಪರಾಭವಗೊಂಡಿದ್ದರು. ಆದರೆ ಸಿ.ಕೆ ರಾಮಮೂರ್ತಿ ಅವರ ಆಯ್ಕೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಸೌಮ್ಯ ರೆಡ್ಡಿ, ಮತಎಣಿಕೆ ಪ್ರಕ್ರಿಯೆಯಲ್ಲಿ ಏನೋ ವ್ಯತ್ಯಾಸವಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.
ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಮತ ಎಣಿಕೆಯಲ್ಲಿ ನಾನು ಮುನ್ನಡೆ ಸಾಧಿಸಿದ್ದೆ. ಆದರೆ ಅಂಚೆ ಮತಗಳ ಎಣಿಕೆಯಲ್ಲಿ ವ್ಯತ್ಯಾಸವಾಗಿದೆ. ಒಟ್ಟು 827 ಅಂಚೆ ಮತಗಳಲ್ಲಿ ವ್ಯತ್ಯಾಸವಾಗಿದ್ದು, ಪ್ರತಿ ಬಾರಿ ಮರು ಎಣಿಕೆ ಮಾಡಿದಾಗಲೂ ಪ್ರತ್ಯೇಕ ಅಂಕಿ-ಅಂಶ ಬಂದಿದೆ. ಮತ ಎಣಿಕೆ ಆರಂಭವಾದ ನಂತರವೂ ಅಂಚೆ ಮೂಲಕ ಬಂದಿದ್ದ ಮತ ಪತ್ರಗಳನ್ನ ಎಣಿಕೆಗೆ ಪರಿಗಣಿಸಲಾಗಿದೆ ಎಂದು ಸೌಮ್ಯಾರೆಡ್ಡಿ ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ವಿಜೇತ ಅಭ್ಯರ್ಥಿ ಸಿ.ಕೆ ರಾಮಮೂರ್ತಿ ಅವರ ಆಯ್ಕೆಯನ್ನ ಅಸಿಂಧುಗೊಳಿಸಬೇಕೆಂದು ಕೋರಿ, ಸೌಮ್ಯಾರೆಡ್ಡಿ ಅವರು ಹೈಕೋರ್ಟ್‌ಗೆ ಸಲ್ಲಿಸಿದ ಚುನಾವಣಾ ತಕರಾರು ಅರ್ಜಿಯಲ್ಲಿ ಮನವಿ ಮಾಡಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಕೇವಲ 16 ಮತಗಳಿಂದ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ, ಚುನಾವಣೆಯಲ್ಲಿ ಗೆದ್ದಿದ್ದ ಬಿಜೆಪಿಯ ಸಿ.ಕೆ.ರಾಮಮೂರ್ತಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಸೌಮ್ಯ ರೆಡ್ಡಿ ಅವರಿಗೆ ಹೈಕೋರ್ಟ್ ಸೂಚನೆ ನೀಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿ.ಕೆ ರಾಮಮೂರ್ತಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಅಲ್ಲದೇ ಪ್ರಕರಣದ ವಿಚಾರಣೆಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿ ವಜಾಗೊಂಡಿದ್ದು, ಸಿ.ಕೆ ರಾಮಮೂರ್ತಿ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನಡೆಯಾಗಿದೆ.



