ಬಳ್ಳಾರಿ: ಬ್ಯಾನರ್ ಗಲಭೆ (Ballari Clash) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಲ್ಲಿ ಮೂರನೇ ವಿಕೆಟ್ ಪತನವಾಗಿದೆ. ಬಳ್ಳಾರಿ ಡಿವೈಎಸ್ಪಿ ಚಂದ್ರಕಾಂತ್ ನಂದಾರೆಡ್ಡಿ (DySP Chandrakant Nandareddy) ಅವರನ್ನ ಸ್ಥಳ ನಿಯೋಜನೆ ಮಾಡದೇ ವರ್ಗಾವಣೆ ಮಾಡಲಾಗಿದೆ.
ಚಂದ್ರಕಾಂತ ನಂದಾರೆಡ್ಡಿ ಜಾಗಕ್ಕೆ 2023ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮಾ (Yash Kumar Sharma) ಅವರನ್ನು ನೇಮಕ ಮಾಡಲಾಗಿದೆ. ಬ್ಯಾನರ್ ಗಲಭೆಯನ್ನ ಸಿಟಿ ಡಿವೈಎಸ್ಪಿ ಆಗಿದ್ದ ಚಂದ್ರಕಾಂತ ನಂದಾರೆಡ್ಡಿ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದ್ದರ ಕುರಿತು ಎಡಿಜಿಪಿ ಹೀತೇಂದ್ರ ಅವರು ಸರ್ಕಾರಕ್ಕೆ ವರದಿ ಕೊಟ್ಟಿದ್ದರು. ಹೀಗಾಗಿ ಇಂದು ಸ್ಥಳ ನಿಯೋಜನೆ ಮಾಡದೇ ವರ್ಗಾವಣೆ ಮಾಡಲಾಗಿದೆ.
ಘಟನೆಯ ಎರಡನೇ ದಿನವೇ ಎಸ್ಪಿ ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಲಾಗಿತ್ತು. ಆ ಬಳಿಕ ಡಿಐಜಿ ವರ್ತಿಕಾ ಕಟಿಯಾರ್ ಅವರ ವರ್ಗಾವಣೆಯೂ ಆಗಿತ್ತು. ಇಂದು ಡಿವೈಎಸ್ಪಿ ಚಂದ್ರಕಾಂತ ನಂದಾರೆಡ್ಡಿ ಅವರ ವರ್ಗಾವಣೆಯಾಗಿದೆ. ಈ ಮೂಲಕ ಬಳ್ಳಾರಿ ಬ್ಯಾನರ್ ಗಲಭೆಯಲ್ಲಿ ಮೂರನೇ ಪೊಲೀಸ್ ಅಧಿಕಾರಿಯ ತಲೆದಂಡ ಆದಂತಾಗಿದೆ.
ಡಿವೈಎಸ್ಪಿ ಚಂದ್ರಕಾಂತ ನಂದಾರೆಡ್ಡಿ ಹಾಗೂ ಅಡಿಷನಲ್ ಎಸ್ಪಿ ರವಿಕುಮಾರ್ ತಲೆದಂಡಕ್ಕೆ ಬಿಜೆಪಿ ನಾಯಕರು ಆಗ್ರಹಿಸಿದ್ದರು. ಘಟನೆಯನ್ನು ನಿಯಂತ್ರಣ ಮಾಡಲು ವಿಫಲರಾಗಿ, ಶಾಸಕರಿಗೆ ಬೆಂಬಲ ನೀಡಿದ್ರು ಎಂದು ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಆರೋಪಿಸಿದರು. ಇದರ ನಡುವೆ ಎಡಿಜಿಪಿ ಹೀತೇಂದ್ರ ವರದಿ ಆಧಾರದ ಮೇಲೆ ಇನ್ನಷ್ಟು ಅಧಿಕಾರಿಗಳ ತಲೆದಂಡ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

