ದುಬೈ: ಐಸಿಸಿ ಟಿ20 ವಿಶ್ವಕಪ್ (T20 World Cup) ಟೂರ್ನಿಯನ್ನು ಬಹಿಷ್ಕರಿಸಿರುವ ಬಾಂಗ್ಲಾದೇಶಕ್ಕೆ (Bangladesh) ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ.
ಹೌದು. ಈಗ ಪಾಕಿಸ್ತಾನ (Pakistan) ಬಾಂಗ್ಲಾದೇಶಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿ ಟೂರ್ನಿಯನ್ನು ಬಹಿಷ್ಕರಿಸುವ ಮಾತನ್ನು ಆಡುತ್ತಿದೆ. ಒಂದು ವೇಳೆ ಪಾಕ್ ಬಹಿಷ್ಕರಿಸಿದರೆ ಪಾಕ್ ಜಾಗದಲ್ಲಿ ಬಾಂಗ್ಲಾವನ್ನು ಆಡಿಸಲು ಐಸಿಸಿ (ICC) ಮುಂದಾಗಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಭದ್ರತೆಯ ಕಾರಣ ನೀಡಿ ಬಾಂಗ್ಲಾ ತನ್ನ ಕ್ರಿಕೆಟ್ ಪಂದ್ಯಗಳನ್ನು ಶ್ರೀಲಂಕಾಗೆ (Sri Lanka) ಶಿಫ್ಟ್ ಮಾಡುವಂತೆ ಕೇಳಿಕೊಂಡಿತ್ತು. ಆದರೆ ಈಗಾಗಲೇ ಹೋಟೆಲ್, ಕ್ರೀಡಾಂಗಣವನ್ನು ಅಂತಿಮಗೊಳಿಸಿದ್ದರಿಂದ ಶಿಫ್ಟ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಬಾಂಗ್ಲಾದ ಮನವಿಯನ್ನು ಐಸಿಸಿ ತಿರಸ್ಕರಿಸಿತ್ತು.
ತನ್ನ ಮನವಿ ತಿರಸ್ಕಾರವಾದ ಬೆನ್ನಲ್ಲೇ ಬಾಂಗ್ಲಾ ಟೂರ್ನಿಯನ್ನೇ ಬಹಿಷ್ಕರಿಸಿದ್ದರಿಂದ ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಲಾಗಿದೆ. ಈಗ ಪಾಕಿಸ್ತಾನ ಟೂರ್ನಿಗೆ ಆಗಮಿಸದೇ ಇದ್ದರೆ ಆ ಜಾಗದಲ್ಲಿ ಬಾಂಗ್ಲಾವನ್ನು ಆಡಿಸಲು ಐಸಿಸಿ ಚಿಂತನೆ ನಡೆಸಿದೆ. ಇದನ್ನೂ ಓದಿ: NOC ಇಲ್ಲ, ಯಾವುದೇ ಟೂರ್ನಿಯಿಲ್ಲ – ಬಾಂಗ್ಲಾಗೆ ಬೆಂಬಲ ನೀಡಲು ಹೋಗಿ ಅಡಕತ್ತರಿಯಲ್ಲಿ ಸಿಲುಕಿದ ಪಾಕ್

ಪಾಕಿಸ್ತಾನ ತಂಡದಿಂದ ಹಿಂದೆ ಸರಿಯಲು ನಿರ್ಧರಿಸಿದರೆ, ಬಾಂಗ್ಲಾದೇಶ ತಂಡಕ್ಕೆ ಗ್ರೂಪ್ ಎ ನಲ್ಲಿ ಸ್ಥಾನ ಪಡೆಯಲು ಅವಕಾಶ ನೀಡಲಾಗುವುದು ಮತ್ತು ಬಿಸಿಬಿಯ ಮೂಲ ಕೋರಿಕೆಯಂತೆ ಶ್ರೀಲಂಕಾದಲ್ಲಿ ತಮ್ಮ ಎಲ್ಲಾ ಪಂದ್ಯಗಳನ್ನು ಆಡಲು ಅವಕಾಶ ನೀಡಲಾಗುವುದು. ಇದರಿಂದ ಯಾವುದೇ ದೊಡ್ಡ ಲಾಜಿಸ್ಟಿಕ್ ಸಮಸ್ಯೆ ಇಲ್ಲ ಎಂದು ಐಸಿಸಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಮಾಧ್ಯಮ ವರದಿ ಮಾಡಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಜನವರಿ 26 ರಂದು ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಶೀಘ್ರದಲ್ಲೇ ಟೂರ್ನಿಯಲ್ಲಿ ಭಾಗಿಯಾಗಬೇಕೋ? ಬೇಡವೋ ಎಂಬುದರ ಬಗ್ಗೆ ಈ ಶುಕ್ರವಾರ ಅಥವಾ ಸೋಮವಾರದ ಒಳಗಡೆ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ತನ್ನ ಜಾಗದಲ್ಲಿ ಬಾಂಗ್ಲಾಗೆ ಅವಕಾಶ ಸಿಗುವ ವಿಚಾರ ತಿಳಿಯುತ್ತಿದ್ದಂತೆ ಪಾಕಿಸ್ತಾನ ಭಾರತದ ಒಂದು ಪಂದ್ಯವನ್ನು ಮಾತ್ರ ಬಹಿಷ್ಕರಿಸುವ ಬಗ್ಗೆ ಚರ್ಚೆ ನಡೆಸುತ್ತಿದೆ ಎಂದು ವರದಿಯಾಗಿದೆ. ಹೀಗಾಗಿ ಮುಂದೆ ಪಾಕ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ.

