ನವದೆಹಲಿ: 77ನೇ ಗಣರಾಜ್ಯೋತ್ಸವ (Republic Day Parade) ಪ್ರಯುಕ್ತ ಕರ್ಥವ್ಯ ಪಥದಲ್ಲಿ ನಡೆಯುತ್ತಿರುವ ಇಂದಿನ ಪರೇಡ್ ಹಲವು ವಿಶೇಷತೆಗಳಿಂದಲೇ ಗಮನ ಸೆಳೆಯುತ್ತಿದೆ. ಪರೇಡ್‌ನ ಆರಂಭದಲ್ಲೇ ಬ್ಯಾಕ್ಟ್ರಿಯನ್ ಒಂಟೆ, ಶಿಕಾರಿ ಪಕ್ಷಿಯಾದ ಬ್ಲ್ಯಾಕ್ ಕೈಟ್ಸ್, ಶ್ವಾನಗಳು ಸೇರಿದಂತೆ ರಕ್ಷಣಾ ವಲಯದ ವಿವಿಧ ವಿಭಾಗಗಳು ಭಾರತದ ಮಿಲಿಟರಿ (Indian Military) ಪರಾಕ್ರಮವನ್ನ ಎತ್ತಿ ತೋರಿಸಿವೆ.
ಭಾರತೀಯ ಸೇನೆಯಲ್ಲಿ ಪ್ರಾಣಿಗಳ ಪಾತ್ರ ಹಾಗೂ ಕಠಿಣ ಭೂಪ್ರದೇಶಗಳಲ್ಲಿ ಅವುಗಳ ಸೇವೆಯನ್ನ ಅನಾವರಣಗೊಳಿಸಲೆಂದೇ ಭಾರತೀಯ ಸೇನೆಯ ರಿಮೌಂಟ್ ಮತ್ತು ಪಶುವೈದ್ಯಕೀಯ ದಳದ (RVC) ಸಮರ್ಪಿತ ಪ್ರಾಣಿ ತುಕಡಿಯು, ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶಿಸಿದೆ. ಇದನ್ನೂ ಓದಿ: ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಮೋದಿ ಗೌರವ; ರಾಷ್ಟ್ರಪತಿಗಳಿಂದ ಧ್ವಜಾರೋಹಣ

ʻಸೈಲೆಂಟ್ ವಾರಿಯರ್ಸ್ʼ ಅಂತಲೇ ಸೇನೆಯಲ್ಲಿ ಗುರುತಿಸಿಕೊಂಡಿರುವ ಪ್ರಾಣಿಗಳು ಕಠಿಣ ಭೂಪ್ರದೇಶಗಳಲ್ಲೂ ಕಾರ್ಯನಿರ್ವಹಿಸುತ್ತಾ ಶತ್ರುಗಳ ಮೇಲೆ ನಿಗಾ ವಹಿಸಲು ಸಹಾಯ ಮಾಡುತ್ತಾ ಬರುತ್ತಿವೆ. ಹೀಗಾಗಿ ಈ ಬಾರಿ ಪರೇಡ್‌ನಲ್ಲಿ ಈ ತಂಡವು ಬ್ಯಾಕ್ಟ್ರಿಯನ್ ಒಂಟೆಗಳು, ಜನ್ಸ್ಕಾರ್ ಪೋನಿಗಳು, ಬ್ಲ್ಯಾಕ್ ಕೈಟ್ಸ್ (ರ‍್ಯಾಪ್ಟರ್ ಅಥವಾ ಶಿಕಾರಿ ಪಕ್ಷಿ), ವಿಜಿಲೆಂಟ್ ಬರ್ಡ್ಸ್, ಭಾರತೀಯ ತಳಿಯ ಸೇನಾ ನಾಯಿಗಳು (ಮುಧೋಳ ಹೌಂಡ್, ರಾಂಪುರ್ ಹೌಂಡ್, ಚಿಪ್ಪಿಪರೈ, ಕೊಂಬೈ ಮತ್ತು ರಾಜಪಾಳಯಂ), ಜೊತೆಗೆ ಈಗಾಗಲೇ ಸೇವೆಯಲ್ಲಿರುವ ಸಾಂಪ್ರದಾಯಿಕ ಮಿಲಿಟರಿ ಶ್ವಾನಗಳನ್ನ ಪ್ರದರ್ಶಿಸಲಾಯಿತು.

ಜೊತೆಗೆ ಬುಲೆಟ್ ಪ್ರೂಫ್ ಜಾಕೆಟ್‌ಗಳು, ಅತ್ಯಾಧುನಿಕ ಕ್ಯಾಮೆರಾ, ಜಿಪಿಎಸ್, ರೇಡಿಯೋಗಳು ಮತ್ತು ಸುಧಾರಿತ ಕಣ್ಗಾವಲು ವ್ಯವಸ್ಥೆ ಹೊಂದಿರುವ ಭಾರತೀಯ ರಕ್ಷಣಾ ಪಡೆಗಳ ಹಿಮ ಯೋಧರ ಪಡೆ, ವಾಹನದಲ್ಲಿ ಅಳವಡಿಸಲಾದ ಗ್ಲೇಸಿಯರ್ ಎಟಿವಿ ಕೂಡ ಪ್ರದರ್ಶಿಸಲಾಯಿತು. ಇದನ್ನೂ ಓದಿ: ಈ ಹಬ್ಬ ನಿಮ್ಮೆಲ್ಲರ ಜೀವನದಲ್ಲಿ ಹೊಸ ಶಕ್ತಿ, ಉತ್ಸಾಹ ತುಂಬಲಿ – 77ನೇ ಗಣರಾಜ್ಯೋತ್ಸವಕ್ಕೆ ಮೋದಿ ಶುಭಾಶಯ
ಬ್ಯಾಕ್ಟ್ರಿಯನ್ ಒಂಟೆಗಳ ವಿಶೇಷತೆ ಏನು?
ಬ್ಯಾಕ್ಟ್ರಿಯನ್ ಒಂಟೆಗಳು (Camelus bactrianus) ಎರಡು ಗೂನುಗಳನ್ನ (humps) ಹೊಂದಿರುವ ವಿಶಿಷ್ಟ ತಳಿಯ ಪ್ರಾಣಿ. ಇವು ಪ್ರಮುಖವಾಗಿ ಗೋಬಿ ಮರುಭೂಮಿಯಂತಹ ಅತಿ ಶೀತ ಮತ್ತು ಬಿಸಿ ವಾತಾವರಣದಲ್ಲಿ ಬದುಕುತ್ತವೆ. ತನ್ನ ದೇಹದಲ್ಲಿನ ಕೊಬ್ಬನ್ನ ಶಕ್ತಿಯನ್ನಾಗಿ ಬಳಸಿಕೊಳ್ಳುವ ಈ ಒಂಟೆಗಳು, ಚಳಿಗಾಲದಲ್ಲಿ ದಪ್ಪನೆಯ ತುಪ್ಪಳವನ್ನ ಹೊಂದಿರುತ್ತವೆ. ಇವುಗಳನ್ನು ಹೆಚ್ಚಾಗಿ ಸಾರಿಗೆ, ಹಾಲು ಮತ್ತು ಉಣ್ಣೆಗಾಗಿ ಸಾಕುಪ್ರಾಣಿಗಳಾಗಿ ಸಾಕಲಾಗುತ್ತದೆ.
ಶಿಕಾರಿ ಪಕ್ಷಿ ಬ್ಲ್ಯಾಕ್ ಕೈಟ್ ವಿಶೇಷತೆ ಏನು?
ಬ್ಲ್ಯಾಕ್ ಕೈಟ್ (Black Kite – Milvus migrans) ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ, ಸುಮಾರು 58-66 ಸೆಂ.ಮೀ ಉದ್ದದ ಮಧ್ಯಮ ಗಾತ್ರದ ಬೇಟೆಯಾಡುವ ಪಕ್ಷಿ. ಗಾಢ ಕಂದು ಬಣ್ಣದ ಪುಕ್ಕ, ಹಳದಿ ಕಾಲುಗಳು ಮತ್ತು ಕವಲೊಡೆದ ಬಾಲ (forked tail) ಇದರ ಮುಖ್ಯ ಗುರುತು. ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಇವು, ಅವಕಾಶವಾದಿ ಬೇಟೆಗಾರರು ಅಂತಲೇ ಗುರುತಿಸಿಕೊಂಡಿದೆ. ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸೇನೆಯಲ್ಲಿ ಇವುಗಳನ್ನ ಬಳಸಿಕೊಳ್ಳಲಾಗಿದೆ.

