ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ವ್ಯಾಪ್ತಿಗೆ ಬರುವ ಗೋಕರ್ಣಕ್ಕೆ ಸಂಪರ್ಕಿಸುವ ಗಂಗಾವಳಿ ನದಿಗೆ ಕಟ್ಟಿರುವ ಮಂಜುಗುಣಿ-ಗಂಗಾವಳಿ ಸೇತುವೆ ಏಳೂವರೆ ವರ್ಷದ ನಂತರ ಅನೇಕ ಅಡ್ಡಿ ಆತಂಕ ಎದುರಿಸಿ ಕೊನೆಗೂ ಪೂರ್ಣಗೊಂಡಿದೆ. ಈ ಪೂರ್ಣಗೊಂಡ ಸೇತುವೆ ಮೇಲೆ ಸಂಚರಿಸಲು ಎಲ್ಲಾ ವಾಹನಗಳಿಗೆ ಅವಕಾಶ ನೀಡಲಾಗಿದೆ. ಆದರೆ, ಸರ್ಕಾರಿ ಬಸ್‌ಗೆ ಮಾತ್ರ ತೆರಳಲು ನಿರ್ಬಂಧವಿದೆ.
ವಾಯುವ್ಯ ರಸ್ತೆ ಸಾರಿಗೆ ವಾಹನಗಳಿಗೆ ಈ ಭಾಗದಲ್ಲಿ ಸಂಚರಿಸಲು ಅನುಮತಿ ನೀಡಿಲ್ಲ. ಇದು ಏಕೆ ಎಂಬ ಪ್ರಶ್ನೆಗೆ ಅಧಿಕಾರಿಗಳ ಬಳಿ ಸೂಕ್ತ ಉತ್ತರವೇ ಇಲ್ಲ. ಸೇತುವೆ ಉದ್ಘಾಟನೆ ಆದ ನಂತರ ಬಿಡಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. ಈ ಸೇತುವೆಯನ್ನ ಕಳೆದ ತಿಂಗಳು ಅಂದರೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿಗಳೇ ಉದ್ಘಾಟನೆ ಮಾಡಬೇಕಿತ್ತು. ಆದರೆ, ಅದು ಆಗಲಿಲ್ಲ. ಹೀಗಾಗಿ, ಉದ್ಘಾಟನೆ ಕಾಣದಿದ್ದಕ್ಕೆ ಈವರೆಗೂ ಸರ್ಕಾರಿ ಬಸ್‌ಗಳ ಸಂಚಾರ ಪ್ರಾರಂಭ ಮಾಡಲಿಲ್ಲ.
ವಿದ್ಯಾರ್ಥಿಗಳು ಹಾಗೂ ಜನರಿಗೆ ಸಂಕಷ್ಟ
ಜನರ ಉಪಯೋಗಕ್ಕೆ ಎಂದು 2018 ರಲ್ಲಿ 28.71 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾರ್ಯ ಪ್ರಾರಂಭಿಸಿ ಏಳೂವರೆ ವರ್ಷದ ನಂತರ ಅಂಕೋಲದಿಂದ ಗೋಕರ್ಣಕ್ಕೆ ಸಂಪರ್ಕಿಸುವ ಗಂಗಾವಳಿ-ಮಂಜುಗುಣಿ ಸಂಪರ್ಕಿಸುವ ಸೇತುವೆಯನ್ನು ಪೂರ್ಣಗೊಳಿಸಲಾಯಿತು. ಈ ಭಾಗದ ಊರಿನವರು ಬಹಳ ಖುಷಿಯಲ್ಲಿ ಇದ್ದರು. ಆದರೆ, ಎಲ್ಲಿ ಅಂಕೋಲದಿಂದ ಗಂಗಾವಳಿ ಮೂಲಕ ಗೋಕರ್ಣಕ್ಕೆ ಸಂಚರಿಸಬೇಕಾದ ಬಸ್ ಸಂಚರಿಸದೇ ಸೇತುವೆ ವರೆಗೆ ಬಂದು ಜನರನ್ನು ಬಿಟ್ಟು ಮರಳಲು ಶರುವಾಯಿತೋ ಜನ ಇದೀಗ ಹಿಡಿ ಶಾಪ ಹಾಕುತಿದ್ದಾರೆ.
ಪ್ರತಿ ದಿನ ಅಂಕೋಲ ಭಾಗಕ್ಕೆ ನೂರಾರು ವಿದ್ಯಾರ್ಥಿಗಳು, ಗ್ರಾಮದ ಜನರು ತೆರಳುತ್ತಾರೆ. ಬಸ್ ಸೇತುವೆ ಬಳಿಗೆ ಮಾತ್ರ ಬರುತ್ತಿರುವುದರಿಂದ ಎರಡೂ ಭಾಗದ ಗ್ರಾಮದ ಜನ ಪ್ರತಿದಿನ ಸೇತುವೆ ಮೇಲೆ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ನಡೆದೇ ಹೋಗಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಮನವಿ ಮಾಡಿ ಸುಸ್ತಾಗಿರುವ ಜನ ಸೇತುವೆ ಇರದಿದ್ದರೆ ಹಿಂದಿನಂತೆ ಲಾಂಚ್‌ನಲ್ಲೇ ತೆರಳಬಹುದಿತ್ತು. ಆದರೆ, ಸೇತುವೆ ಆಗಿದೆ. ಆದರೂ ನಮ್ಮ ಸಮಸ್ಯೆ ಬಗೆಹರಿಯಲಿಲ್ಲ ಎಂದು ನೋವಿನ ನುಡಿಯನ್ನಾಡುತ್ತಾರೆ.
ಹಲವು ದಶಕದಿಂದ ಗಂಗಾವಳಿ-ಮಂಜುಗುಣಿಯ ಜನರು ಸೇತುವೆ ನಿರ್ಮಾಣಕ್ಕಾಗಿ ಹೋರಾಟ ಮಾಡಿದರು. ಇದೀಗ ಏಳೂವರೆ ವರ್ಷದ ನಂತರ ಸೇತುವೆ ನಿರ್ಮಾಣ ಕಂಡಿದೆ. ಆದರೆ, ಸೇತುವೆ ಉದ್ಘಾಟನೆ ಕಾಣಲಿಲ್ಲ ಎಂದು ಇದೀಗ ಈ ಊರಿಗೆ ಸೇತುವೆ ಮೇಲೆ ಸರ್ಕಾರಿ ಬಸ್ ತೆರಳಲು ನಿರ್ಬಂಧ ವಿಧಿಸಿ ಜನರು, ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.

