ಹೈದರಾಬಾದ್: ಹೈದರಾಬಾದ್‌ನ (Hyderabad) ನಾಂಪಲ್ಲಿ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಪೀಠೋಪಕರಣ ಅಂಗಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಇಬ್ಬರು ಮಕ್ಕಳು ಮತ್ತು ವೃದ್ಧ ಮಹಿಳೆ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.
ಶನಿವಾರ ಬೆಂಕಿ ಕಾಣಿಸಿಕೊಂಡಿತ್ತು. ಕಟ್ಟಡದ ನೆಲಮಾಳಿಗೆಯಲ್ಲಿ ಐದು ಜನರು ಸಿಲುಕಿಕೊಂಡಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಸಿ, ಇಬ್ಬರು ಮಕ್ಕಳು ಮತ್ತು ವೃದ್ಧ ಮಹಿಳೆ ಸೇರಿದಂತೆ ಐದು ಶವಗಳನ್ನು ಭಾನುವಾರ ಕಟ್ಟಡದ ನೆಲಮಾಳಿಗೆಯಿಂದ ಹೊರತೆಗೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮನಾಲಿಯಲ್ಲಿ ಭಾರೀ ಹಿಮಪಾತ – 8 ಕಿಮೀ ಟ್ರಾಫಿಕ್ ಜಾಮ್, ರಸ್ತೆಯಲ್ಲೇ ನಿಂತ ಪ್ರವಾಸಿಗರು
ಉಸಿರುಗಟ್ಟಿ ಐವರು ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಬೆಂಕಿಗೆ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ. ಪೀಠೋಪಕರಣ ಅಂಗಡಿಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಟ್ಟಡದ ಎರಡು ನೆಲಮಾಳಿಗೆಯ ಹಂತಗಳಲ್ಲಿ ಹೆಚ್ಚಿನ ಪ್ರಮಾಣದ ಪೀಠೋಪಕರಣಗಳು, ಕಚ್ಚಾ ವಸ್ತುಗಳು, ರಾಸಾಯನಿಕಗಳು, ಪ್ಲಾಸ್ಟಿಕ್‌ಗಳು, ಹಾಸಿಗೆಗಳು ಮತ್ತು ಫೋಮ್‌ಗಳನ್ನು ಸಂಗ್ರಹಿಸಲಾಗಿತ್ತು ಎಂದು ತೆಲಂಗಾಣ ಅಗ್ನಿಶಾಮಕ, ವಿಪತ್ತು ಪ್ರತಿಕ್ರಿಯೆ, ತುರ್ತು ಮತ್ತು ನಾಗರಿಕ ರಕ್ಷಣಾ ಇಲಾಖೆಯ ಮಹಾನಿರ್ದೇಶಕ ವಿಕ್ರಮ್ ಸಿಂಗ್ ಮಾನ್ ಹೇಳಿದ್ದಾರೆ.
ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದರೂ, ಕಟ್ಟಡದಿಂದ ದಟ್ಟವಾದ ಹೊಗೆ ಬರುತ್ತಿದ್ದರಿಂದ ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಯಿತು. ನೆಲಮಾಳಿಗೆಗೆ ಹೋಗುವ ರ‍್ಯಾಂಪ್ ಅನ್ನು ಸಾಮಗ್ರಿಗಳಿಂದ ಮುಚ್ಚಲಾಗಿತ್ತು. ಇದರಿಂದ ಪ್ರವೇಶ ಕಷ್ಟಕರವಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡುಗೆ ನಕಲಿ ತುಪ್ಪ ಬಳಕೆ; ನೆಲ್ಲೂರ್ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ CBI
ಮೃತಪಟ್ಟವರು ಭದ್ರತಾ ಸಿಬ್ಬಂದಿಯ ಕುಟುಂಬ ಸದಸ್ಯರು ಮತ್ತು ಇತರ ಕಾರ್ಮಿಕರು ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ತೆಲಂಗಾಣ ಸಾರಿಗೆ ಮತ್ತು ಹೈದರಾಬಾದ್ ಜಿಲ್ಲಾ ಉಸ್ತುವಾರಿ ಸಚಿವ ಪೊನ್ನಂ ಪ್ರಭಾಕರ್, ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ.

