ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ವಾಹನ ಚಾಲಕರು ಹಾಗೂ ಟೋಲ್ ಸಿಬ್ಬಂದಿ ನಡುವೆ ಆಗುತ್ತಿರುವ ಜಗಳಗಳನ್ನ ತಪ್ಪಿಸಿ, ಹೆದ್ದಾರಿ ಪ್ರಯಾಣ ಸುಖಮಯವಾಗಿಸಲು ಕೇಂದ್ರ ಸರ್ಕಾರ ಹೊಸ ಹೊಸ ಕ್ರಮಗಳನ್ನ ಜಾರಿಗೊಳಿಸುತ್ತಲೇ ಇದೆ. ಈಗಾಗಲೇ ಏಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ (Toll Plaza) ನಗದು ಪಾವತಿ ನಿಷೇಧಿಸಲು ಸಜ್ಜಾಗಿದೆ. ಇಷ್ಟೆಲ್ಲಾ ಬದಲಾವಣೆ ತಂದಿರುವ ಕೇಂದ್ರ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.
ಟೋಲ್ ಶುಲ್ಕ ಬಾಕಿ ಉಳಿಸಿಕೊಂಡಿದ್ದರೆ, ಅಂತಹ ವಾಹನಗಳಿಗೆ ಎನ್‌ಒಸಿ ಆಗಲಿ ಅಥವಾ ಫಿಟ್‌ನೆಸ್ ಪ್ರಮಾಣ ಪತ್ರವಾಗಲಿ ನೀಡುವುದನ್ನ ನಿಷೇಧಿಸಲು ಮುಂದಾಗಿದೆ.
ಹೌದು. ಅಪ್ಪಿತಪ್ಪಿಯೂ ನೀವು ಟೋಲ್ ಶುಲ್ಕ ಬಾಕಿ ಉಳಿಸಿಕೊಂಡಿದ್ದರೆ ಅಥವಾ ಕಡಿತಗೊಂಡಿಲ್ಲದಿದ್ದರೆ, ಮುಂದಿನ ಬಾರಿ ನಿರಾಕ್ಷೇಪಣಾ ಪ್ರಮಾಣಪತ್ರ (NOC) ಫಿಟ್‌ನೆಸ್ ಪ್ರಮಾಣಪತ್ರ ಅಥವಾ ಡ್ರೈವಿಂಗ್ ಲೈಸೆನ್ಸ್ ಪಡೆಯುವುದನ್ನ ತಡೆಹಿಡಿಲಾಗುತ್ತದೆ. ಅಂದ್ರೆ ನೀವು ಹೆದ್ದಾರಿಯಲ್ಲಿ ಟೋಲ್ ಬಗ್ಗೆ ಮಾಡುವ ನಿರ್ಲಕ್ಷ್ಯವು ನಿಮ್ಮ ವಾಹನ ದಾಖಲೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಜೊತೆಗೆ ವಾಹನಕ್ಕೆ ಸಂಬಂಧಿಸಿದ ಇತರ ದಾಖಲೆಗಳನ್ನ ಪಡೆಯಬೇಕೆಂದ್ರೂ ಅದಕ್ಕೆ ತಡೆಯಾಗಲಿದೆ. ಕೇಂದ್ರ ಸರ್ಕಾರ ಈ ಕ್ರಮ ಕೈಗೊಳ್ಳಲು ಕಾರಣ ಏನು? ಇದರಿಂದ ಯಾರಿಗೆಲ್ಲಾ ಉಪಯೋಗ? ಅಪಾಯಗಳೇನು? ಎಂಬುದನ್ನ ತಿಳಿಯಲು ಮುಂದೆ ಓದಿ…
ಹೊಸ ಟೋಲ್ ನಿಯಮದ ಉದ್ದೇಶ ಏನು?
ಟೋಲ್ ಶುಲ್ಕಕ್ಕೆ ಸಂಬಂಧಿಸಿದ ನಿಯಮಗಳನ್ನ ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರ ʻಕೇಂದ್ರ ಮೋಟಾರು ವಾಹನ (ಎರಡನೇ ತಿದ್ದುಪಡಿ) ನಿಯಮಗಳು, 2026ʼ ಅಧಿಸೂಚನೆ ಹೊರಡಿಸಿದ್ದು. ಹಳೆಯ ಕೇಂದ್ರ ಮೋಟಾರು ವಾಹನ ನಿಯಮಗಳು, 1989 ರ ತಿದ್ದುಪಡಿ ಕಾನೂನು ಆಗಿದೆ. ಎಲೆಕ್ಟ್ರಾನಿಕ್ ಟೋಲ್ ಶುಲ್ಕ ವ್ಯವಸ್ಥೆಯನ್ನ ಮತ್ತಷ್ಟು ಬಲಪಡಿಸುವುದು, ಟೋಲ್ ವಂಚನೆಯನ್ನ ತಡೆಗಟ್ಟುವುದು, ಭವಿಷ್ಯದಲ್ಲಿ ತಡೆ ರಹಿತ ಟೋಲ್ ವ್ಯವಸ್ಥೆಯನ್ನ ಜಾರಿಗೆ ತರುವುದು ಇದರ ಮುಖ್ಯ ಉದ್ದೇಶವಾಗಿದೆ.
ತಿದ್ದುಪಡಿ ಮಾಡಿದ ನಿಯಮಗಳ ಅಡಿಯಲ್ಲಿ, ‘ಪಾವತಿಸದ ಬಳಕೆದಾರ ಶುಲ್ಕ’ದ ಹೊಸ ವ್ಯಾಖ್ಯಾನವನ್ನ ಪರಿಚಯಿಸಲಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಬಳಕೆಗೆ ಪಾವತಿಸಬೇಕಾದ ಬಳಕೆದಾರ ಶುಲ್ಕವನ್ನ ಸೂಚಿಸುತ್ತದೆ. ಅಲ್ಲಿ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ (ETC) ವ್ಯವಸ್ಥೆಯು ವಾಹನದ ಹಾದಿಯನ್ನ ದಾಖಲಿಸಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಕಾಯ್ದೆ, 1956 ರ ಕಾಯ್ದೆ ಅಡಿಯಲ್ಲಿ ಸೂಚಿಸಲಾದ ಟೋಲ್ ಮೊತ್ತವನ್ನ ಠೇವಣಿ ಮಾಡದಿದ್ದರೆ, ಅದನ್ನ ಬಾಕಿ ಟೋಲ್ ಎಂದು ಪರಿಗಣಿಸಲಾಗುತ್ತದೆ.
ಟೋಲ್ ಕಟ್ಟದಿದ್ರೆ ಮಾಲೀಕತ್ವ ವರ್ಗಾಯಿಸೋಕಾಗಲ್ವಾ?
ಹೊಸ ಟೋಲ್ ನಿಯಮಗಳ ಪ್ರಕಾರ, ಬಾಕಿ ಟೋಲ್ ಮೊತ್ತವನ್ನ ಪಾವತಿಸಿ, ಕ್ಲಿಯರೆಸ್ಸ್ ಪಡೆಯುವವರೆಗೆ ವಾಹನ ಮಾಲೀಕತ್ವ ವರ್ಗಾವಣೆಗೆ ಯಾವುದೇ NOC (ಎನ್‌ಒಸಿ) ಸಿಗುವುದಿಲ್ಲ. ಜೊತೆಗೆ ವಾಹನವನ್ನ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಿಸೋದಕ್ಕೂ ಅನುಮತಿ ಸಿಗಲ್ಲ. ಮುಖ್ಯವಾಗಿ ಫಿಟ್‌ನೆಸ್ ಪ್ರಮಾಣ ಪತ್ರಗಳನ್ನು ನವೀಕರಿಸಲು ಸಾಧ್ಯವಾಗುವುದಿಲ್ಲ.
ವಾಣಿಜ್ಯ ವಾಹನಗಳಿಗೆ ಏನು ಸಂಕಷ್ಟ?
ಹೊಸ ಟೋಲ್ ನಿಯಮಗಳ ಅನುಸಾರ ವಾಣಿಜ್ಯ ವಾಹನಗಳಿಗೂ ಕಠಿಣ ನಿಯಮಗಳನ್ನ ರೂಪಿಸಲಾಗಿದೆ. ವಾಹನ ಮಾಲೀಕರು ನ್ಯಾಷನಲ್ ಪರ್ಮಿಟ್‌ಗೆ ಅರ್ಜಿ ಸಲ್ಲಿಸಿದ್ರೆ, ಅವರ ವಾಹನವು ಬಾಕಿ ಟೋಲ್ ಶುಲ್ಕ ಹೊಂದಿಲ್ಲ ಎಂದು ಮುಂಚಿತವಾಗಿಯೇ ದೃಢೀಕರಿಸಬೇಕಾಗುತ್ತದೆ. ಒಂದು ವೇಳೆ ಟೋಲ್ ಬಾಕಿಯಿದ್ದಲ್ಲಿ ಪರವಾನಗಿಯನ್ನ ತಿರಸ್ಕರಿಸಲಾಗುತ್ತದೆ. ಟೋಲ್ ಪಾವತಿಸಿ ಎನ್‌ಒಸಿ ಪಡೆದ ಬಳಿಕ ಲೈಸೆನ್ಸ್ ನೀಡಲಾಗುತ್ತದೆ.
ಫಾರ್ಮ್-28 ರಲ್ಲಿ ಏನಾಗಿದೆ ಬದಲಾವಣೆ?
ಟೋಲ್ ಹೊಸ ನಿಯಮ ಅನುಷ್ಟಾನಕ್ಕೆ ಕೇಂದ್ರ ಸರ್ಕಾರ ಫಾರ್ಮ್ 28 ರಲ್ಲೂ ಅಗತ್ಯಕ್ಕನುಗುಣವಾದ ಬದಲಾವಣೆ ತಂದಿದೆ. ಅದರಂತೆ ವಾಹನ ಮಾಲೀಕರು ಬಾಕಿ ಸುಂಕ ಹೊಂದಿಲ್ಲ ಎಂಬುದನ್ನ ಮುಂಚಿತವಾಗಿಯೇ ಘೋಷಿಸಬೇಕಾಗುತ್ತದೆ. ಅದಕ್ಕೆ ಪೂರಕ ದಾಖಲೆಗಳನ್ನೂ ಒದಗಿಸಬೇಕಾಗುತ್ತದೆ. ಈ ಪ್ರಕ್ರಿಯೆ ಸರಳೀಕರಣಗೊಳಿಸೋದಕ್ಕಾಗಿಯೇ ಡಿಜಿಟಲ್ ಆಯ್ಕೆಗಳನ್ನೂ ನೀಡಲಾಗಿದೆ.
ಫಾರ್ಮ್ 28 ಎಂಬುದು ನಿರಾಪೇಕ್ಷಣಾ ಪ್ರಮಾಣಪತ್ರಕ್ಕಾಗಿ (ಎನ್‌ಒಸಿ) ಸಲ್ಲಿಸುವ ಅರ್ಜಿಯಾಗಿದ್ದು, ಇದು ವಾಹನದ ಮಾಲೀಕತ್ವವನ್ನ ಬೇರೆ ರಾಜ್ಯ ಅಥವಾ ಜಿಲ್ಲೆಗೆ ವರ್ಗಾಯಿಸಲು ಅಗತ್ಯವಿರುವ ಪ್ರಮುಖ ದಾಖಲೆಯಾಗಿದೆ. ಇದು ವಾಹನಗಳ ಮೇಲೆ ಯಾವುದೇ ಬಾಕಿ ತೆರಿಗೆ, ಚಲನ್ ಅಥವಾ ಕಾನೂನು ಪ್ರಕರಣಗಳಿಲ್ಲ ಎಂದು ದೃಢೀಕರಿಸುತ್ತದೆ. ಈ ತಿದ್ದುಪಡಿಗಳು Multi-Lane Free-Flow (MLFF) ವ್ಯವಸ್ಥೆಯ ಅನುಷ್ಠಾನದ ನಂತರ ಬಳಕೆದಾರರ ಶುಲ್ಕ ಸಂಗ್ರಹವನ್ನ ಸುಗಮಗೊಳಿಸುತ್ತದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿ ಜಾಲದಲ್ಲಿ ತಡೆರಹಿತ ಟೋಲಿಂಗ್ ವ್ಯವಸ್ಥೆಗೆ ಅನುವು ಮಾಡಿಕೊಡುತ್ತದೆ.
ಬದಲಾವಣೆ ಏಕೆ?
Multi-Lane Free-Flow ಟೋಲ್ ಪ್ಲಾಜಾಗಳಲ್ಲಿ ತಡೆ ರಹಿತ ಟೋಲ್ ಸಂಗ್ರಹಕ್ಕೆ ಅವಕಾಶ ಕಲ್ಪಿಸಲು ಮುಂದಾಗುತ್ತಿದೆ. ಇದರಿಂದ ಟೋಲ್ ಬೂತ್‌ಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಜೊತೆಗೆ ಪ್ರಯಾಣಿಕರಿಗೆ ಸಮಯ ಉಳಿತಾಯ ಮಾಡುತ್ತದೆ. ಡಿಜಿಟಲ್ ಕ್ರಾಂತಿಗೂ ಪುಷ್ಠಿ ಸಿಕ್ಕಂತಾಗುತ್ತದೆ. ಹೆದ್ದಾರಿ ಪ್ರಯಾಣವನ್ನು ಸುಗಮವಾಗಿಸುವುದರ ಜೊತೆಗೆ ಪಾರದರ್ಶಕತೆಯನ್ನೂ ತರುತ್ತದೆ. ಹಾಗಾಗಿ ಟೋಲ್ ಬಾಕಿ ಉಳಿಸಿಕೊಳ್ಳುವವರು ಎಚ್ಚರ ವಹಿಸಬೇಕಾದ ಅಗತ್ಯತೆ ಇದೆ.





