ಮಂಗಳೂರು: ತಂದೆ ಹಾಗೂ ಮಗನ ಮಧ್ಯೆ ಗಲಾಟೆ ನಡೆದು ತಂದೆಗೆ ಚೂರಿಯಿಂದ ಇರಿದು ಮಗ ಬಳಿಕ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಕಡಬದಲ್ಲಿ ನಡೆದಿದೆ.
ಕಡಬದ ರಾಮಕುಂಜ ಗ್ರಾಮದ ವಸಂತ ಅಮೀನ್ ಹಾಗೂ ಅವರ ಮಗ ಮೋಕ್ಷ (15) ಇಬ್ಬರೇ ವಾಸವಾಗಿದ್ದು, ವಸಂತ್ ಅವರ ಪತ್ನಿ ಆಕೆಯ ತಾಯಿ ಮನೆಯಲ್ಲಿ ನೆಲೆಸಿದ್ದರು. ತಂದೆ ಹಾಗೂ ಮಗನಿಗೆ ಇಂದು ಗಲಾಟೆ ನಡೆದಿದ್ದು, ಈ ವೇಳೆ ಮಗ ಮೋಕ್ಷ ತಂದೆಯ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವ ಆದ ಬಳಿಕ ಮಗ ತಂದೆಯ ಪರವಾನಗಿ ಹೊಂದಿರುವ ಬಂದೂಕಿನಿಂದ ತನ್ನ ಮುಖಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗಾಯಗೊಂಡ ವಸಂತ ಅಮೀನ್ರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಡಬ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ ಪೊಲೀಸರು (Police) ಘಟನೆಯ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.

