ಚಿಕ್ಕಮಗಳೂರು: ಗಂಡನ (Husband) ಮನೆಗೆ ಹೋಗಲ್ಲ ಎಂದು ಹಠ ಹಿಡಿದಿದ್ದ ಅಕ್ಕನ ಕೈಯನ್ನು ತಮ್ಮನೇ ವೇಲ್‌ನಲ್ಲಿ ಕಟ್ಟಿ ಗಂಡನ ಜೊತೆ ಕಳುಹಿಸಿದ ಘಟನೆ ಚಿಕ್ಕಮಗಳೂರು (Chikkamagaluru) ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಗಂಡನ ಜೊತೆ ಜಗಳವಾಡಿ ಬೆಂಗಳೂರಿಗೆ (Bengaluru) ಹೋಗಿದ್ದ ಅಕ್ಕನನ್ನ ತಮ್ಮನೇ ಕರೆದುಕೊಂಡು ಬಂದಿದ್ದ. ಹಾಸನಕ್ಕೆ ಬರುವವರೆಗೂ ಸುಮ್ಮನಿದ್ದ ಅಕ್ಕ ಹಾಸನ ದಾಟುತ್ತಿದ್ದಂತೆ ನಾನು ಅವನ ಮನೆಗೆ ಹೋಗುವುದಿಲ್ಲ ಎಂದು ಬಸ್ಸಿನಲ್ಲೇ ಜಗಳ ಆಡಿದ್ದಾಳೆ. ಈ ವೇಳೆ ಆಕೆಯ ವೇಲ್‌ನಲ್ಲೇ ಕೈಕಟ್ಟಿ ಹಿಡಿದುಕೊಂಡು ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಗಂಡನಿಗೆ ಒಪ್ಪಿಸಿದ್ದಾನೆ. ಇದನ್ನೂ ಓದಿ: ಪಾರ್ಕಿಂಗ್ ವಿಚಾರಕ್ಕೆ ಯಲಹಂಕ ʻಕೈʼ ಮುಖಂಡನ ಅಳಿಯ & ಸ್ಥಳೀಯರ ನಡುವೆ ಕಿರಿಕ್
ಬಸ್ಸಿನಿಂದ ಕೆಳಗಿಳಿದ ಮೇಲೂ ಬಸ್ ನಿಲ್ದಾಣದಲ್ಲಿ ಇಬ್ಬರು ಜಗಳವಾಡಿದ್ದಾರೆ. ಅಂತಿಮವಾಗಿ ಮೂವರು ಮನೆಗೆ ಹೋಗಿದ್ದಾರೆ. ಬಸ್ಸಿನಲ್ಲಿ ಅಕ್ಕ-ತಮ್ಮ ಜಗಳವಾಡುವ ದೃಶ್ಯವನ್ನ ವಿಡಿಯೋ ಮಾಡಿಕೊಂಡಿರುವ ಇತರೆ ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಬಸ್ಸಿನಲ್ಲಿ ಯುವತಿಯ ಅಸಹಾಯಕತೆ ಕಂಡು ಇತರೆ ಪ್ರಯಾಣಿಕರು ಯುವಕನ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಆದರೆ, ಬಸ್ಸಿನಿಂದ ಕೆಳಗಿಳಿದ ಮೇಲೆ ಅಕ್ಕನನ್ನ ಆ ಯುವಕ ಗಂಡನ ಮನೆಗೆ ಕಳುಹಿಸಲು ಇಷ್ಟೆಲ್ಲಾ ಹೋರಾಟ ನಡೆಸಿದ್ದು ಅರಿವಿಗೆ ಬಂದಿದೆ. ಅವರು ಎಲ್ಲಿಯವರು ಎಂದು ಸದ್ಯಕ್ಕೆ ಮಾಹಿತಿ ಇಲ್ಲ. ಚಿಕ್ಕಮಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದರಿಂದ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಬಸ್ಸಿನ ಕಂಡಕ್ಟರ್ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ: ಹೋಂ ವರ್ಕ್ ಸರಿಯಾಗಿ ಬರೆದಿಲ್ಲವೆಂದು 4 ವರ್ಷದ ಮಗಳನ್ನು ಕೊಂದ ತಂದೆ

