ಮೈಸೂರು/ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MUDA) ನಡೆದಿದ್ದ ಸೈಟು ಹಂಚಿಕೆ ಹಗರಣದಲ್ಲಿ ಇಡಿ ಮತ್ತೊಂದು ಭರ್ಜರಿ ಭೇಟೆ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಎಸ್.ಕೆ ಮರೀಗೌಡ (Mari Gowda) ಅವರಿಗೆ ಸೇರಿದ್ದ 20.85 ಕೋಟಿ ರೂ. ಮೌಲ್ಯದ ಆಸ್ತಿಯನ್ನ ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ.
ಮುಡಾ ಅಧ್ಯಕ್ಷರಾಗಿದ್ದ ಮರೀಗೌಡ ಅಕ್ರಮ ಮಾರ್ಗದಲ್ಲಿ ಆಗಿನ ಮುಡಾ ಆಯುಕ್ತ ಜಿ.ಟಿ ದಿನೇಶ್‌ಕುಮಾರ್ ಸಹಾಯದ ಮೂಲಕ ನಿವೇಶನಗಳನ್ನ ಪಡೆದಿದ್ದರು. ಮರೀಗೌಡ ಅವರು ದಿನೇಶ್ ಕುಮಾರ್ ಅವರಿಂದ ಅಕ್ರಮ ಲಾಭ ಪಡೆದಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಮರೀಗೌಡ ಅವರು ಮುಡಾದಿಂದ ವಾಮಮಾರ್ಗದಲ್ಲಿ ಮಂಜೂರು ಮಾಡಿಸಿಕೊಂಡಿದ್ದ 6 ನಿವೇಶನಗಳು ಹಾಗೂ 3 ವಸತಿ ಸಂಕೀರ್ಣ ಕಟ್ಟಡಗಳನ್ನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಸ್ಥಿರಾಸ್ತಿ ಮೌಲ್ಯ 20.85 ಕೋಟಿ ರೂ.ಗಳಾಗಿದೆ ಎಂದು ಇ.ಡಿ ತಿಳಿಸಿದೆ.
ವಕ್ರತುಂಡ ಲೇಔಟ್ ನಿರ್ಮಾಣದಲ್ಲಿ ಅವ್ಯವಹಾರ ನಡೆಸಿರೋದು ಇಡಿ ತನಿಖೆಯಲ್ಲಿ ಸಾಭೀತಾಗಿದೆ. ವಕ್ರತುಂಡ ಸೊಸೈಟಿ ಇರೋದು ಮರೀಗೌಡ ಪತ್ನಿ ಜಯಶ್ರೀ ಅವರ ಹೆಸರಿನಲ್ಲಿ. ಆದ್ರೆ ಇದನ್ನ ನಿಯಂತ್ರಣ ಮಾಡುತ್ತಿದ್ದದ್ದು, ಅನ್ನ ಜಯರಾಂ. ಈ ವೇಳೆ ಜಯರಾಮ್, ಸಂಬಂಧಿಕರ ಹೆಸರಲ್ಲಿ 53 ಲಕ್ಷ ಹಣ ಸಾಗಾಟ ಮಾಡಿದ್ದು ಬೆಳಕಿಗೆ ಬಂದಿದೆ. ಸೊಸೈಟಿಯಿಂದ 50 ಲಕ್ಷ ರೂ. ಮರೀಗೌಡ ಸಾಲ ಪಡೆದಿರುವುದಾಗಿ ಲೆಕ್ಕದಲ್ಲಿ ತೋರಿಸಲಾಗಿದೆ. ಜೊತೆಗೆ ಮುಡಾದಲ್ಲಿ ಅಕ್ರಮ ನಡೆಸೋ ಸಲುವಾಗಿಯೇ ಇಷ್ಟೇಲ್ಲಾ ಅವ್ಯವಹಾರ ಮಾಡಲಾಗಿದೆ ಎನ್ನೋ ಅಂಶಗಳನ್ನ ಇಡಿ ಎತ್ತಿ ತೋರಿಸಿದೆ.
ಒಟ್ಟು 460 ಕೋಟಿ ಆಸ್ತಿ ಮುಟ್ಟುಗೋಲು
ಮುಡಾ ನಿವೇಶನಗಳನ್ನ ಅಕ್ರಮ ಮಾರ್ಗದಲ್ಲಿ ಹಂಚಿಕೆ ಮಾಡಿರುವ ಪ್ರಕರಣ ಸಂಬಂಧ ಇ.ಡಿ ತನಿಖೆ ನಡೆಸುತ್ತಿದೆ. ಇದುವರೆಗೂ 460 ಕೋಟಿ ರೂ.ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಹಿಂದೆ ಜಿ.ಟಿ.ದಿನೇಶ್‌ಕುಮಾರ್ ಸೇರಿದಂತೆ ಮತ್ತಿತರರು ಅಕ್ರಮವಾಗಿ ಸಂಪಾದನೆ ಮಾಡಿದ್ದ 283 ನಿವೇಶನಗಳನ್ನ ಇ.ಡಿ ಜಪ್ತಿ ಮಾಡಿತ್ತು.
‘ಬಿ’ ರಿಪೋರ್ಟ್ ವಿಚಾರಣೆ 28ಕ್ಕೆ
ಮುಡಾ ನಿವೇಶನ ಹಂಚಿಕೆ ಅಕ್ರಮ ಆರೋಪ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ ಸೇರಿದಂತೆ 5 ಮಂದಿಗೆ ಕ್ಲೀನ್‌ಚಿಟ್ ನೀಡಿ ‘ಬಿ’ ರಿಪೋರ್ಟ್ ಆಕ್ಷೇಪಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜ.28ಕ್ಕೆ ಮುಂದೂಡಿದೆ.



