ಬೆಂಗಳೂರು: ರಥಸಪ್ತಮಿಯ ನಂತರ ಬಿಸಿಲು ಹೆಚ್ಚಾಗಿ ಕಾಡ್ಗಿಚ್ಚಿನ (Wildfire) ಅಪಾಯವೂ ಹೆಚ್ಚುವ ಕಾರಣ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಅರಣ್ಯಾಧಿಕಾರಿಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ (Eshwar Khandre) ಸೂಚನೆ ನೀಡಿದ್ದಾರೆ.
ವೀಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಅರಣ್ಯ ಮತ್ತು ವನ್ಯಜೀವಿ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಾಡಿನ ಬೆಂಕಿಗೆ ಅರಣ್ಯ ಸಂಪತ್ತು ನಾಶವಾಗದ ರೀತಿಯಲ್ಲಿ ಕಟ್ಟೆಚ್ಚರ ವಹಿಸಬೇಕು. ಡ್ರೋನ್ ಸೌಲಭ್ಯ ಇರುವ ಕಡೆ ಕ್ಯಾಮೆರಾ ಮೂಲಕ ನಿಗಾ ಇಡಬೇಕು. ಗಸ್ತು ಹೆಚ್ಚಿಸಿ, ಸೂಕ್ಷ್ಮ ಪ್ರದೇಶಗಳಲ್ಲಿ ಸಿಬ್ಬಂದಿ ಎಚ್ಚರದಿಂದ ಇರಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಬೈದಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ – ಮುಖ್ಯ ಶಿಕ್ಷಕ ಸೇರಿ 6 ಜನರ ವಿರುದ್ಧ FIR
ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ಕಾಡಿನಲ್ಲಿ ಮೇವು ಮತ್ತು ಕುಡಿಯುವ ನೀರಿನ ಕೊರತೆ ಆಗದಂತೆಯೂ ಎಚ್ಚರ ವಹಿಸಲು, ಜಲಗುಂಡಿಗಳಿಗೆ ಸೌರ ಪಂಪ್‌ಗಳ ಮೂಲಕ ಕೊಳವೆ ಬಾವಿಯಿಂದ ನೀರು ಹರಿಸಲೂ ಸೂಚಿಸಿದರು. ಇದನ್ನೂ ಓದಿ: Gold, Silver ಪ್ರಿಯರಿಗೆ ಶಾಕ್; 10 ಗ್ರಾಂ ಚಿನ್ನಕ್ಕೆ 5,400 ರೂ, ಕೆಜಿ ಬೆಳ್ಳಿಗೆ 15,000 ರೂ. ಏರಿಕೆ
ಮಲೆ ಮಹದೇಶ್ವರ ಬೆಟ್ಟದಲ್ಲಿ ಡ್ರೋನ್ ಕ್ಯಾಮರಾ ನಿಗಾಕ್ಕೆ ಸೂಚನೆ:
ಪ್ರತಿ ವರ್ಷ ಶಿವರಾತ್ರಿ, ಯುಗಾದಿ ಮತ್ತು ದೀಪಾವಳಿಯ ಸಂದರ್ಭದಲ್ಲಿ ಮಾದಪ್ಪನ ಭಕ್ತರು ಅರಣ್ಯಮಾರ್ಗವಾಗಿ ಪಾದಯಾತ್ರೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವುದು ಹಿಂದಿನಿಂದ ನಡೆದುಕೊಂಡು ಬಂದಿದೆ. ಭಕ್ತರು ಕಾಲುದಾರಿಯಲ್ಲಿ ಮೆಟ್ಟಿಲೇರಿ ಬರುವ ಮಾರ್ಗದಲ್ಲಿ ಡ್ರೋನ್ ಕ್ಯಾಮೆರಾ ಅಳವಡಿಸಿ ಸತತ ನಿಗಾ ಇಡುವಂತೆ ತಿಳಿಸಿದರು. ಇದನ್ನೂ ಓದಿ: ಶಬರಿಮಲೆ ಪ್ರವಾಸಕ್ಕೆ ತೆರಳಿದ್ದ ಕೋಲಾರ ಮೂಲದ ವ್ಯಕ್ತಿ ತಮಿಳುನಾಡಿನಲ್ಲಿ ನಾಪತ್ತೆ
ಕಾಲುದಾರಿ, ಮೆಟ್ಟಿಲು ಇರುವ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ, ಹೋಂಗಾರ್ಡ್ಸ್ ಮತ್ತು ಸ್ಥಳೀಯ ಸಿಬ್ಬಂದಿಯ ತಂಡ ರಚಿಸಿ ಭಕ್ತರಿಗೆ ನೆರವಾಗುವ ಅಗತ್ಯವಿದ್ದು, ಇದಕ್ಕೆ ತಗಲುವ ವೆಚ್ಚವನ್ನು ಭರಿಸುವಂತೆ ಮಲೆ ಮಹದೇಶ್ವರಸ್ವಾಮಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಪತ್ರ ಬರೆಯುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ಜನಗಣತಿಯ ಮೊದಲ ಹಂತಕ್ಕೆ ತಯಾರಿ; 33 ಪ್ರಶ್ನೆಗಳನ್ನು ಸಿದ್ಧಪಡಿಸಿದ ಕೇಂದ್ರ ಸರ್ಕಾರ
ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು ಕಾವೇರಿ ನದಿ ದಾಟಿ, ಹನೂರು ತಾಲೂಕಿನ ಬಸವನಕಣಕ್ಕೆ ಬಂದು ಅಲ್ಲಿಂದ ಕಾಡಿನಲ್ಲಿಯೇ ನಡೆದುಕೊಂಡು ಶಾಗ್ಯ, ಡಿಎಂ ಸಮುದ್ರ, ಎಲ್ಲೆಮಾಳ, ಮಲ್ಲಯ್ಯನಪುರ, ಕೌದಳ್ಳಿ, ವಡಕೆಹಳ್ಳ, ಕೋಣನಕೆರೆ, ತಾಳುಬೆಟ್ಟ ಮಾರ್ಗವಾಗಿ ಬೆಟ್ಟಕ್ಕೆ ಬರುತ್ತಾರೆ ಎನ್ನಲಾಗಿದೆ. ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಪಾದಯಾತ್ರೆ ಅಪಾಯಕಾರಿಯಾಗಿದೆ. ಹೀಗಾಗಿ ಭಕ್ತರ ಭಾವನೆಗೆ ಧಕ್ಕೆಯಾಗದಂತೆ ಅವರ ಮನವೊಲಿಸಲು ಹೇಳಿದರು. ಇದನ್ನೂ ಓದಿ: ದಾವಣಗೆರೆ ದಕ್ಷಿಣ ಉಪಚುನಾವಣೆ ಕಾವು – ಟಿಕೆಟ್‌ಗಾಗಿ ಕಮಲ ಪಾಳಯದಲ್ಲಿ ಫೈಟ್
ರಾತ್ರಿಯ ವೇಳೆ ಕಾಡಿನ ಅಂಚಿನಲ್ಲಿ, ಕಾಡಿನೊಳಗಿರುವ ವಸತಿ ಪ್ರದೇಶದಲ್ಲಿ ಮಲಗುವುದೂ ಅಪಾಯಕಾರಿಯಾಗಿದೆ. ಕಳೆದ ಬುಧವಾರ ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಪ್ರವೀಣ್ ಎಂಬ ಯುವಕ ಚಿರತೆ ದಾಳಿಯಿಂದ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಹೀಗಾಗಿ ಬಸ್, ಕಾರುಗಳಲ್ಲಿ ತೆರಳಿ ಮಾದಪ್ಪನ ದರ್ಶನ ಪಡೆಯುವಂತೆ ಭಕ್ತರ ಮನವೊಲಿಸಲು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಒಳಗೊಂಡ ತಂಡ ರಚಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಯವರಿಗೆ ಟಿಪ್ಪಣಿ ಕಳಿಸಿರುವುದಾಗಿ ತಿಳಿಸಿದರು. ಇದನ್ನೂ ಓದಿ: ಕಲಬುರಗಿ| ಪ್ರೀತಿಸಿ ಮದುವೆಯಾದ ಎರಡೇ ತಿಂಗಳಲ್ಲಿ ನವವಿವಾಹಿತೆ ಆತ್ಮಹತ್ಯೆ
ಸಭೆಯಲ್ಲಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿಸಿರೇ ಮತ್ತಿತರರು ಭಾಗಿಯಾಗಿದ್ದರು. ಇದನ್ನೂ ಓದಿ: ಕೆಕೆಆರ್‌ಟಿಸಿ ಬಸ್ ಹರಿದು 4 ವರ್ಷದ ಕಂದಮ್ಮ ಸಾವು

