ಇಂಫಾಲ್: ಮಣಿಪುರದಲ್ಲಿ (Manipur) ಕುಕಿ (Kuki) ಪತ್ನಿಯನ್ನು ಭೇಟಿಯಾಗಲು ಹೋದ ಮೈತೇಯಿ (Meitei) ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
28 ವರ್ಷದ ಮಾಯಂಗ್ಲಂಬಮ್ ರಿಷಿಕಾಂತ ಸಿಂಗ್ ಕೊಲೆಯಾದ ವ್ಯಕ್ತಿ. ಎಕೆ ಸಿರೀಸ್ ಅಸಾಲ್ಟ್ ರೈಫಲ್ ಬಳಸಿ ಆತನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಹಿಂದೂ ಯುವತಿ, ಮುಸ್ಲಿಂ ಯುವಕ ಪ್ರೇಮಿಗಳ ಬರ್ಬರ ಹತ್ಯೆ
ಕೊಲೆ ಆರೋಪಿಗಳು ಮೈತೇಯಿ ವ್ಯಕ್ತಿಯ ಹತ್ಯೆಯ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಬೆಟ್ಟದ ಇಳಿಜಾರಿನಲ್ಲಿರುವ ಒಂದು ಬಯಲು ಪ್ರದೇಶದಂತೆ ಕಾಣುವ ಸ್ಥಳದಲ್ಲಿ ರಾತ್ರಿ ವೇಳೆ ಈ ಕೃತ್ಯ ನಡೆದಿದೆ. ರಿಷಿಕಾಂತ್ ಮಂಡಿಯೂರಿ ಕೈಮುಗಿದು ಬೇಡಿಕೊಂಡಿದ್ದ.
ಈ ಘಟನೆ ಮಣಿಪುರದ ಚುರಚಂದ್‌ಪುರ ಜಿಲ್ಲೆಯಲ್ಲಿ ನಡೆದಿದ್ದು, ರಾಜ್ಯ ರಾಜಧಾನಿ ಇಂಫಾಲ್‌ನಿಂದ 65 ಕಿ.ಮೀ ದೂರದಲ್ಲಿದೆ. ಆತನ ಪತ್ನಿ ಸಿ ಹಾವೋಕಿಪ್ ಕುಕಿ ಸಮುದಾಯದವರು. ಕಣಿವೆಯ ಕಾಕ್ಚಿಂಗ್ ಖುನೌ ನಿವಾಸಿ ಸಿಂಗ್ ನೇಪಾಳದಲ್ಲಿ ಕೆಲಸ ಮಾಡುತ್ತಿದ್ದರು. ರಜೆಯ ಮೇಲೆ ಮನೆಗೆ ಮರಳಿದ್ದರು. ಸಿಂಗ್ ಅವರನ್ನು ಕೆಲವು ದಿನಗಳವರೆಗೆ ನೋಡಲು ಅವರ ಪತ್ನಿ ಕುಕಿ ರಾಷ್ಟ್ರೀಯ ಸಂಸ್ಥೆ (ಕೆಎನ್‌ಒ) ಮತ್ತು ಅದರ ತುಯಿಬಾಂಗ್ ಜಿಲ್ಲಾ ಕೇಂದ್ರದಿಂದ ಅನುಮತಿ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ.
ಸರ್ಕಾರ ರಚನೆಯ ಮಾತುಕತೆ ನಡೆಯುತ್ತಿರುವ ಈ ಸಮಯದಲ್ಲಿ, ಜನಾಂಗೀಯ ಆಧಾರದ ಮೇಲೆ ಸಾರ್ವಜನಿಕರನ್ನು ಪ್ರಚೋದಿಸುವುದು ಮತ್ತು ಹಿಂಸಾಚಾರ ನಡೆಸುವುದು ದಂಗೆಕೋರರ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ. ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿ ಫೆಬ್ರವರಿಗೆ ಒಂದು ವರ್ಷವನ್ನು ಪೂರ್ಣಗೊಳಿಸಲಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆ, ಭಯೋತ್ಪಾದಕರ ನಡುವೆ ತೀವ್ರ ಗುಂಡಿನ ಚಕಮಕಿ
ಚುರಚಂದಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಶವ ಪತ್ತೆಯಾಗಿದ್ದು, ಬೆಳಗಿನ ಜಾವ 1.30ಕ್ಕೆ ಸ್ಥಳೀಯ ಆಸ್ಪತ್ರೆಗೆ ತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 2023ರ ಮೇ ತಿಂಗಳಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಕುಕಿ ಮತ್ತು ಮೈತೇಯಿ ಸಮುದಾಯಗಳು ಪರಸ್ಪರರ ಪ್ರದೇಶಗಳಿಗೆ ಹೋಗಿಲ್ಲ.

