ಶಿವಮೊಗ್ಗ: ಭದ್ರಾವತಿಯಲ್ಲಿ (Bhadravati) ವೃದ್ಧ ದೊಡ್ಡಪ್ಪ ಹಾಗೂ ದೊಡ್ಡಮ್ಮನನ್ನು ವೈದ್ಯನೊಬ್ಬ ಹೆಚ್ಚಿನ ಅನಸ್ತೇಶಿಯಾ (Anesthesia) ನೀಡಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಹತ್ಯೆ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಡಾ.ಮಲ್ಲೇಶ್ ಎಂದು ಗುರುತಿಸಲಾಗಿದೆ. ಭದ್ರಾವತಿ ಬೂತನ ಗುಡಿ ಬಳಿಯ ಮನೆಯಲ್ಲಿ ಜಯಮ್ಮ (75) ಮತ್ತು ಚಂದ್ರಣ್ಣ (78) ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಚಂದ್ರಪ್ಪ ಅವರ ತಮ್ಮನ ಮಗನೇ ಈ ಕೊಲೆಯ ರುವಾರಿ ಎಂಬುದನ್ನು ಪತ್ತೆ ಮಾಡಿದ್ದಾರೆ. ಇದನ್ನೂ ಓದಿ: ಭದ್ರಾವತಿ | ವೃದ್ಧ ದಂಪತಿ ಅನುಮಾನಾಸ್ಪದ ಸಾವು – ಒಡವೆಗಳು ನಾಪತ್ತೆ
ಆಯುರ್ವೇದಿಕ್ ವೈದ್ಯನಾಗಿದ್ದ ಮಲ್ಲೇಶ್, ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ದೊಡ್ಡಪ್ಪ ಚಂದ್ರಪ್ಪನವರ ಬಳಿ 15 ಲಕ್ಷ ರೂ. ಕೇಳಿದ್ದ. ಆದರೆ ಚಂದ್ರಪ್ಪ ಅವರು ಹಣ ಕೊಡಲು ನಿರಾಕರಿಸಿದ್ದರು. ಇದೇ ಸೇಡಿಗೆ ಚಂದ್ರಪ್ಪ ಹಾಗೂ ಜಯಮ್ಮ ಅವರಿಗೆ ಚಿಕಿತ್ಸೆ ಕೊಡುವುದಾಗಿ ಹೆಚ್ಚಿನ ಡೋಸೇಜ್ ಅನಸ್ತೇಶಿಯಾ ಕೊಟ್ಟಿದ್ದ. ಇದರಿಂದ ತಕ್ಷಣ ಬಿಪಿ ಕಡಿಮೆ ಆಗಿದೆ. ಬಳಿಕ ಇಬ್ಬರನ್ನು ಬೇರೆ ಬೇರೆ ಮಲಗಿಸಿ ಚಿನ್ನಾಭರಣ ದೋಚಿದ್ದ.
ಬಳಿಕ ಚಿನ್ನವನ್ನು ಅಡವಿಟ್ಟಿದ್ದಾನೆ. ಬಳಿಕ ಸಾಲ ತೀರಿಸಿ ಅಕೌಂಟ್‌ನಲ್ಲಿ 50,೦೦೦ ರೂ. ಉಳಿಸಿಕೊಂಡಿದ್ದಾನೆ. 80 ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕಲಬುರಗಿ | ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

