ಬೆಂಗಳೂರು: ರಾಜ್ಯದಲ್ಲಿ ಖಾಸಗಿ ಬಸ್ ಗಳ (Private Bus) ಆಟಾಟೋಪ ಹೆಚ್ಚಾಗಿದೆ. ಪ್ರಯಾಣಿಕರ ಸುರಕ್ಷತೆಯನ್ನೇ ಮರೆತು ಸಾರಿಗೆ ನಿಯಮಗಳನ್ನ ಉಲ್ಲಂಘಿಸ್ತಿದ್ದಾರೆ. ಇದೀಗ ಸಾರಿಗೆ ಸಚಿವರು ಮತ್ತಷ್ಟು ಅಲರ್ಟ್ ಆಗಿದ್ದು, ಅಧಿಕಾರಿಗಳು, ಬಸ್ ಮಾಲೀಕರ ಜೊತೆ ಇಂದು ಸಭೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಖಾಸಗಿ ಬಸ್‌ಗಳ ಆಟಾಟೋಪಕ್ಕೆ ಬ್ರೇಕ್ ಹಾಕಲು ಸಾರಿಗೆ ಇಲಾಖೆ ಅಣಿಯಾಗಿದೆ. ಅಧಿಕಾರಿಗಳು ಹಾಗೂ ಖಾಸಗಿ ಬಸ್ ಮಾಲೀಕರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. ಪ್ರಯಾಣಿಕರ ಸುರಕ್ಷತೆ ಮರೆತು ಬಸ್ ಬಾಡಿ ಬಿಲ್ಡ್ ಮಾಡಿದ ಬಸ್ ಮಾಲೀಕರಿಗೆ ಸಾರಿಗೆ ಸಚಿವರು ಚಳಿ ಬಿಡಿಸಲಿದ್ದಾರೆ. ಸಾರಿಗೆ ನಿಯಮಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಪ್ರಯಾಣಿಕರ ಸುರಕ್ಷತೆ ಮರೆತು, ಬಸ್‌ಗಳ ಬಾಡಿ ಬಿಲ್ಡ್ ಮಾಡಲಾಗಿರುತ್ತೆ. ಎಕ್ಸಿಟ್ ಎಮರ್ಜೆನ್ಸಿ ಡೋರ್‌ಗೂ ಸರಿಯಾದ ಸ್ಪೇಸ್ ಕೊಡುತ್ತಿಲ್ಲ. ಯದ್ವಾತದ್ವಾ ಸೀಟ್ ಅಳವಡಿಕೆ ಮಾಡಲಾಗುತ್ತೆ. ಹೀಗೆ ಕಾಸಿನ ಆಸೆಗೆ ಸಾರಿಗೆ ನಿಯಮಗಳನ್ನು ಗಾಳಿಗೂ ತೂರಿ, ಪ್ರಯಾಣಿಕರ ಜೀವಕ್ಕೆ ಕುತ್ತು ತರುವ ಖಾಸಗಿ ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಲಿದ್ದಾರೆ.
ಚಿತ್ರದುರ್ಗದ ಬಳಿ ಇತ್ತೀಚಿಗೆ ನಡೆದ ಬಸ್ ದುರಂತ. ಆ ಕುರಿತ ವರದಿ ಈಗಾಗ್ಲೇ ಸಜ್ಜಾಗಿದೆ. ಸಾರಿಗೆ ಇಲಾಖೆಯ ಅಧಿಕಾರಿಗಳು ಸಾರಿಗೆ ಸಚಿವ್ರಿಗೆ ರಿಪೋರ್ಟ್ ಸಲ್ಲಿಸಲಿದ್ದು, ಅಗ್ನಿ ಅವಘಡ, ರಸ್ತೆ ಅಪಘಾತಕ್ಕೆ ಬ್ರೇಕ್ ಹಾಕಬೇಕಿದೆ. ಅದಕ್ಕಾಗಿ ಒಂದಿಷ್ಟು ಹೊಸ ಸುರಕ್ಷತಾ ಕ್ರಮಗಳನ್ನು ಜಾರಿ ಮಾಡುವ ಸಾಧ್ಯತೆಯೂ ಹೆಚ್ಚಾಗಿದೆ.


