ಬೌದ್ಧ ಧರ್ಮದ ತವರಾದ ಭಾರತದ ಹಲವೆಡೆ ಸ್ತೂಪಗಳು, ಬೌದ್ಧ ಬಿಕ್ಕುಗಳು ವಾಸವಾಗಿದ್ದ ನೆಲೆಗಳು ಮಣ್ಣಿನಲ್ಲಿ ಅಂತರ್ಗತವಾಗಿ ಹೋಗಿವೆ. ಅದರಲ್ಲಿ ಎಷ್ಟೋ ಅವಶೇಷಗಳು ಸಿಕ್ಕಿವೆ.. ಇನ್ನೂ ಕೆಲವು ಇಂದಿಗೂ ಸಿಗುತ್ತಲೇ ಇವೆ. ಅದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಜೆಹಾನ್‌ಪೋರಾದಲ್ಲಿ ಪತ್ತೆಯಾದ ಸಾವಿರಾರು ವರ್ಷಗಳ ಹಿಂದಿನ ಮೂರು ಬೌದ್ದ ಸ್ತೂಪಗಳು. ಹೌದು ಸುಮಾರು 2000 ವರ್ಷಗಳ ಹಿಂದಿನ ಬೌದ್ಧ ಸ್ತೂಪಗಳು ಬಾರಾಮುಲ್ಲಾದಲ್ಲಿ ಪತ್ತೆಯಾಗಿವೆ. ಇದರ ಪತ್ತೆಗೆ ಕಾರಣವಾಗಿದ್ದು ಫ್ರಾನ್ಸ್‌ನಲ್ಲಿರೋ ಫೋಟೋ ಎಂಬುದು ಅಚ್ಚರಿಯ ವಿಚಾರವಾಗಿದೆ. ಈ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಫ್ರಾನ್ಸ್‌ನಲ್ಲಿ ಪತ್ತೆಯಾದ ಫೋಟೋ
ಕಾಶ್ಮೀರದಿಂದ ಸಾವಿರಾರು ಮೈಲು ದೂರದಲ್ಲಿರುವ ಫ್ರಾನ್ಸ್‌ನ ವಸ್ತುಸಂಗ್ರಹಾಲಯದಲ್ಲಿ ಬಾರಾಮುಲ್ಲಾದಲ್ಲಿನ ಮೂರು ಬೌದ್ಧ ಸ್ತೂಪಗಳಿರುವ ಹಳೆಯ ಫೋಟೊ ಪತ್ತೆಯಾಗಿದೆ. ಇಷ್ಟು ದಿನಗಳ ಕಾಲ 10 ಎಕರೆಗಳಷ್ಟು ವಿಸ್ತಾರವಾಗಿ ಹರಡಿರುವ ಈ ದಿಬ್ಬಗಳನ್ನು ಸಾಮಾನ್ಯ ದಿಬ್ಬಗಳು ಎಂದು ಜನರು ಭಾವಿಸಿದ್ದರು. ಆದರೆ, ಪುರಾತತ್ವ ಶಾಸ್ತ್ರಜ್ಞರು ಆ ಸ್ಥಳವನ್ನು ಅಧ್ಯಯನ ಮಾಡಿದ ಬಳಿಕ ಅದು ಮಾನವ ನಿರ್ಮಿತ ರಚನೆಗಳು ಎಂದು ಗುರುತಿಸಿದ್ದಾರೆ. ಇದಕ್ಕಾಗಿ ಡ್ರೋನ್ ಮೂಲಕ ಚಿತ್ರಗಳನ್ನು ತೆಗೆಯಲಾಗಿತ್ತು.

2023 ರಲ್ಲಿ, ಫೆಲೋಶಿಪ್‌ನಲ್ಲಿ ಫ್ರಾನ್ಸ್‌ಗೆ ಭೇಟಿ ನೀಡಿದ್ದವರು ಅಲ್ಲಿನ ವಸ್ತುಸಂಗ್ರಹಾಲಯ ಒಂದಲ್ಲಿರುವ ಫೋಟೋದಲ್ಲಿ ಕಾಶ್ಮೀರದಲ್ಲಿರುವ ಈ ಸ್ಥಳವನ್ನು ಗುರುತಿಸಿದ್ದರು. ಬ್ರಿಟಿಷರು ಲಾಹೋರ್ ಮತ್ತು ಹಿಂದಿನ ತಕ್ಷಶಿಲಾ (ವಾಯುವ್ಯ ಪಾಕಿಸ್ತಾನ) ಮೂಲಕ ಕಾಶ್ಮೀರಕ್ಕೆ ಪ್ರಯಾಣಿಸುವಾಗ ಸೆರೆಹಿಡಿದ ಫೋಟೋ ಅದಾಗಿದೆ.
ಡ್ರೋನ್ ಸಮೀಕ್ಷೆ
ಡ್ರೋನ್ ಸಮೀಕ್ಷೆಗಳು ಗ್ರಾಮದಲ್ಲಿನ ದಿಬ್ಬಗಳು ನೈಸರ್ಗಿಕ ರಚನೆಗಳಲ್ಲ, ಮಾನವ ನಿರ್ಮಿತವಾದದ್ದು ಎಂದು ಬಹಿರಂಗಪಡಿಸಿವೆ. ಪುರಾತತ್ವ ಇಲಾಖೆ, ಜಮ್ಮು ಮತ್ತು ಕಾಶ್ಮೀರ ವಸ್ತು ಸಂಗ್ರಹಾಲಯ ಮತ್ತು ಕಾಶ್ಮೀರ ವಿಶ್ವವಿದ್ಯಾಲಯಗಳು ಜಂಟಿಯಾಗಿ ಉತ್ಖನನವನ್ನು ನಡೆಸಿವೆ.

ಜೆಹಾನ್‌ಪೋರಾದಲ್ಲಿ ಮರುಶೋಧನೆ ಕಾಶ್ಮೀರದ ಐತಿಹಾಸಿಕ ಸ್ಥಳದ ನಾಗರಿಕತೆಯನ್ನು ತಿಳಿಸುತ್ತದೆ. ಇದು ದೀರ್ಘಕಾಲದಿಂದ ಮುಚ್ಚಿಹೋಗಿದ್ದ ಕಾಶ್ಮೀರದ ಬೌದ್ಧ ಪರಂಪರೆಯನ್ನು ಬೆಳಕಿಗೆ ತರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಐತಿಹಾಸಿಕ ಮಹತ್ವ
ಜೆಹಾನ್‌ಪೋರಾ ಪ್ರಾಚೀನ ಕಾಶ್ಮೀರದಲ್ಲಿ ಪ್ರಮುಖ ಬೌದ್ಧ ಕೇಂದ್ರವಾಗಿತ್ತು ಎಂದು ನಂಬಲಾಗಿದೆ. ಇದು ಗಾಂಧಾರ ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ವ್ಯಾಪಾರ ಮಾರ್ಗವಾಗಿತ್ತು. ಈ ಸ್ಥೂಪಗಳು ಕುಶಾನರ ಕಾಲದ್ದಾಗಿರಬಹುದು ಎನ್ನಲಾಗಿದೆ.

ಕುಶಾನರ ಕಾಲವು ಮೌರ್ಯ ಸಾಮ್ರಾಜ್ಯದ ಪತನದ ನಂತರ ಭಾರತದಲ್ಲಿ ಸ್ಥಾಪಿತವಾದ ಒಂದು ವಿಶಾಲ ಸಾಮ್ರಾಜ್ಯವಾಗಿದೆ. ಕುಶಾನರ ಸಾಮ್ರಾಜ್ಯ ಉತ್ತರ ಭಾರತದಿಂದ ಮಧ್ಯ ಏಷ್ಯಾದವರೆಗೆ ವ್ಯಾಪಿಸಿತ್ತು. ಇವರು ಗಾಂಧಾರ ಕಲೆ ಮತ್ತು ಮಹಾಯಾನ ಬೌದ್ಧ ಧರ್ಮವನ್ನು ಬೆಳೆಸಿದರು. ಇವರ ಚರಿತ್ರೆ ತಿಳಿಯಲು ಹಲವಾರು ಶಾಸನ, ನಾಣ್ಯ ಮತ್ತು ಸಾಹಿತ್ಯ ಕೃತಿಗಳು ಲಭ್ಯವಿವೆ. ಇವರ ಕಾಲದಲ್ಲಿ ನಾಲ್ಕನೇ ಬೌದ್ಧ ಸಮ್ಮೇಳನವು ಕ್ರಿ.ಶ 100ರಲ್ಲಿ ಕಾಶ್ಮೀರದ ಕುಂಡಲವನದಲ್ಲಿ ನಡೆದಿತ್ತು.

ಬೌದ್ಧಧರ್ಮದ ವಿಕಸನ, ಹರಡುವಿಕೆಯಲ್ಲಿ ಕಾಶ್ಮೀರದ ಪಾತ್ರ
ರಾಜ ಸುರೇಂದ್ರ ಕಾಶ್ಮೀರದಲ್ಲಿ ಅನೇಕ ಸ್ತೂಪಗಳನ್ನು ನಿರ್ಮಿಸಿದ್ದಾನೆಂದು ನಂಬಲಾಗಿದೆ. ಈ ಬಗ್ಗೆ ರಾಜತರಂಗಿಣಿಯಲ್ಲಿ ಅನೇಕ ಉಲ್ಲೇಖಗಳು ಇವೆ. ಈ ಪ್ರದೇಶದಲ್ಲಿ ಇಂಡೋ-ಗ್ರೀಕ್ ಆಡಳಿತಗಾರ ಮೆನಾಂಡರ್ ಮತ್ತು ಬೌದ್ಧ ಸನ್ಯಾಸಿ ನಾಗಸೇನರ ಬೌದ್ಧಧರ್ಮದ ಕುರಿತು ಸಂವಾದವು ನಡೆದಿತ್ತು. ಇದು ಈ ಪ್ರದೇಶದಾದ್ಯಂತ ಬೌದ್ಧಧರ್ಮವನ್ನು ಮತ್ತಷ್ಟು ಬಲಪಡಿಸಿತ್ತು. ಕಾಲನಂತರ ಕಾಶ್ಮೀರದ ಮಿಷನರಿ ಸನ್ಯಾಸಿಗಳಿಂದ ಚೀನಾ ಮತ್ತು ಮಧ್ಯ ಏಷ್ಯಾದಾದ್ಯಂತ ಹರಡಿತು.
ಪ್ರಧಾನಿ ಮೋದಿ ಮಾತು
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಪುರಾತತ್ತ್ವ ಸಂಶೋಧನೆಯು ಕಾಶ್ಮೀರದ ಬೌದ್ಧ ಭೂತಕಾಲವನ್ನು ಬೆಳಕಿಗೆ ತಂದಿದೆ. ಈ ಆವಿಷ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ. ಇದು ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿ ತೋರಿಸಿದೆ. ಇದು ಎರಡು ಸಾವಿರ ವರ್ಷಗಳ ಹಿಂದಿನ ಕಾಶ್ಮೀರದ ಗತವೈಭವಕ್ಕೆ ಸಾಕ್ಷಿಯಾಗಿದೆ ಎಂದು ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

