– ದೇಶ, ವಿದೇಶಗಳ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಚರ್ಚೆ
ಬೆಂಗಳೂರು: ದೇಶದ ಆಹಾರ ಸಂಸ್ಕರಣಾ ವಲಯದಲ್ಲಿ ಕೋಕಾ ಕೋಲಾ (Coca-Cola) ಹೂಡಿಕೆ ಮಾಡಲಿರುವ 25,760 ಕೋಟಿ ರೂ. ಬಂಡವಾಳದಲ್ಲಿ ಗಮನಾರ್ಹ ಮೊತ್ತವನ್ನು ರಾಜ್ಯಕ್ಕೆ ಆಕರ್ಷಿಸಲು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ (M.B. Patil) ಅವರು ಕಂಪನಿಯ ಮನವೊಲಿಸಲು ಸರ್ವ ಪ್ರಯತ್ನ ಮಾಡಿದ್ದಾರೆ.
ದಾವೋಸ್‌ನಲ್ಲಿ (Davos) ನಡೆಯುತ್ತಿರುವ ವಿಶ್ವ ಆರ್ಥಿಕ ಸಮಾವೇಶದ (World Economic Forum) ಮೊದಲ ದಿನ ಕೋಕಾ ಕೋಲಾ ಕಂಪನಿಯ ಜಾಗತಿಕ ನೀತಿ ಹಾಗೂ ಸುಸ್ಥಿರತೆಯ ಹಿರಿಯ ಉಪಾಧ್ಯಕ್ಷ ಮೈಕಲ್ ಗೋಲ್ಟ್ಜಮನ್ ಅವರ ಜೊತೆಗಿನ ಸಭೆಯಲ್ಲಿ ಸಚಿವ ಪಾಟೀಲ್ ಅವರು, ಈ ಸಂಗತಿಯನ್ನು ಪ್ರಮುಖವಾಗಿ ಚರ್ಚಿಸಿದರು. ಕಂಪನಿಯು ಭಾರತದಲ್ಲಿ ಹೂಡಿಕೆ ಮಾಡಲಿರುವ ಬಂಡವಾಳದಲ್ಲಿ ಗಮನಾರ್ಹ ಮೊತ್ತವು ಕರ್ನಾಟಕಕ್ಕೆ ಹರಿದು ಬರಲು ಅಗತ್ಯವಾದ ಎಲ್ಲ ಸೌಲಭ್ಯ ಹಾಗೂ ಬೆಂಬಲ ನೀಡಲು ರಾಜ್ಯ ಸರ್ಕಾರ ಉತ್ಸುಕವಾಗಿರುವುದಾಗಿ ಭರವಸೆ ನೀಡಿದರು. ಇದನ್ನೂ ಓದಿ: ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ವಿಜಯಪುರ ರೈಲು ಸಂಚಾರಕ್ಕೆ ಅಸ್ತು; 3-4 ತಿಂಗಳಲ್ಲಿ ಹೊಸ ರೈಲು ಸೇವೆಗೆ ಪ್ರಯತ್ನ: ಎಂ.ಬಿ.ಪಾಟೀಲ್

ʻಕಂಪನಿಯ ಪಾನೀಯ ತಯಾರಿಕೆ ಮತ್ತು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ವಿಜಯಪುರ ಜಿಲ್ಲೆಯು ಸೂಕ್ತ ಸ್ಥಳವಾಗಿರುವುದನ್ನು ಮನವರಿಕೆ ಮಾಡಿಕೊಡಲಾಗಿದೆ. ಈ ಪ್ರದೇಶದಲ್ಲಿ ಪಾನೀಯ ತಯಾರಿಸುವ ಕೈಗಾರಿಕೆಗಳ ಬಳಕೆಗೆ ಅಗತ್ಯವಾಗಿರುವ ನೀರು ಅಪಾರ ಪ್ರಮಾಣದಲ್ಲಿ ಸುಸ್ಥಿರ ರೀತಿಯಲ್ಲಿ ಲಭ್ಯ ಇರುವುದನ್ನು ಕಂಪನಿಯ ಮುಖ್ಯಸ್ಥರ ಗಮನಕ್ಕೆ ತರಲಾಗಿದೆ. ಬಂಡವಾಳ ಹೂಡಿಕೆ ಮಾಡುವಾಗ ಈ ಜಿಲ್ಲೆಗೆ ಆದ್ಯತೆ ನೀಡಲು ಒತ್ತಾಯಿಸಲಾಗಿದೆʼ ಎಂದು ಸಚಿವ ಎಂ. ಬಿ. ಪಾಟೀಲ್ ಅವರು ತಿಳಿಸಿದ್ದಾರೆ.

ಸಚಿವರ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ದೇಶ- ವಿದೇಶಗಳ ಬಹುರಾಷ್ಟ್ರೀಯ ಕಂಪನಿಗಳ ದಿಗ್ಗಜರನ್ನು ಭೇಟಿಯಾಗಿ ರಾಜ್ಯದಲ್ಲಿ ಉದ್ಯಮ ಸ್ಥಾಪನೆ, ವಿಸ್ತರಣೆ ಹಾಗೂ ಬಂಡವಾಳ ಹೂಡಿಕೆ ಆಕರ್ಷಿಸಲು ರಾಜ್ಯ ಸರ್ಕಾರ ಕೊಡಮಾಡಲಿರುವ ಸಬ್ಸಿಡಿ, ಉತ್ತೇಜನಾ ಕ್ರಮಗಳನ್ನು ವಿವರಿಸಿತು.
ಮೆಂಜಿಸ್ ಏವಿಯೇಷನ್ನಿನ ಕಾರ್ಯನಿರ್ವಾಹಕ ಅಧ್ಯಕ್ಷ ಹ್ಯಾಸನ್ ಎಲ್. ಹೌರಿ , ಯುಪಿಎಲ್‌ನ ಅಧ್ಯಕ್ಷ ಜೈ ಶ್ರಾಫ್, ಎಬಿ ಇನ್‌ಬೆವ್‌ನ ಕಾರ್ಪೊರೇಟ್ ವ್ಯವಹಾರಗಳ ಅಧಿಕಾರಿ ಜಾನ್ ಬ್ಲಡ್, ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್, ನ್ಯಾಚುರಲ್ ಫೈಬರ್ ವೆಲ್ಡಿಂಗ್ (ಎನ್‌ಎಫ್‌ಡಬ್ಲ್ಯು ಅರ್ಥ್) ನ ಸುಹಾಸ್ ಉಪ್ಪಲಪತಿ ಅವರ ಜೊತೆ ಫಲಪ್ರದ ಮಾತುಕತೆ ನಡೆಸಿತು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗ್ರೌಂಡ್ ಹ್ಯಾಂಡ್ಲಿಂಗ್ ಉದ್ದೇಶದ ಟೆಂಡರ್ ದೊರೆತರೆ 85 ಕೋಟಿ ರೂ. ಹೂಡಿಕೆ ಮಾಡಲಿರುವುದನ್ನು ಮೆಂಜಿಸ್ ಏವಿಯೇಷನ್ ರಾಜ್ಯದ ನಿಯೋಗದ ಗಮನಕ್ಕೆ ತಂದಿತು. ತನ್ನ ಜಾಗತಿಕ ಕಾರ್ಯಾಚರಣೆಗಳಿಗೆ ಪೂರಕವಾಗಿ ರಾಜ್ಯದಲ್ಲಿ ಶ್ರೇಷ್ಠತಾ ಕೇಂದ್ರ ಹಾಗೂ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಸ್ಥಾಪಿಸುವ ಸಾಧ್ಯತೆಗಳನ್ನು ಪರಿಶೀಲಿಸುವುದಾಗಿ ನಿಯೋಗಕ್ಕೆ ತಿಳಿಸಿದೆ.
ʻಕೃಷಿ ರಾಸಾಯನಿಕ ಮತ್ತು ಬೆಳೆ ಸಂರಕ್ಷಣಾ ಕಂಪನಿ ಯುಪಿಎಲ್ ಲಿಮಿಟೆಡ್, ಕೃಷಿ ಪರಿಹಾರ ಮತ್ತು ನೀರಾವರಿ ತಂತ್ರಜ್ಞಾನಗಳಲ್ಲಿ ಕರ್ನಾಟಕದಲ್ಲಿ ತನ್ನ ವಹಿವಾಟು ವಿಸ್ತರಿಸಲು ಆಸಕ್ತಿ ವ್ಯಕ್ತಪಡಿಸಿದೆ. ರಫ್ತು ಮಾರುಕಟ್ಟೆಗಳಿಗೆ ಮೌಲ್ಯವರ್ಧಿತ ಮೆಕ್ಕೆಜೋಳ ಆಧಾರಿತ ಉತ್ಪನ್ನಗಳನ್ನು ತಯಾರಿಸುವ ಸಾಧ್ಯತೆಗಳನ್ನು ಕಂಪನಿಯು ಪ್ರಸ್ತಾಪಿಸಿದೆ. ಎಥೆನಾಲ್ ರಫ್ತು ಸಾಧ್ಯತೆ ಸೇರಿದಂತೆ ಎಥೆನಾಲ್ ಸ್ಥಾವರ ನಿರ್ಮಾಣದ ಬಗ್ಗೆ ಚರ್ಚಿಸಲಾಗಿದೆ.
ʻಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ವಿಶ್ವ ಆರ್ಥಿಕ ವೇದಿಕೆಯ ಕಾರ್ಯಕ್ರಮಗಳ ಪ್ರಾಯೋಗಿಕ ಪರೀಕ್ಷೆಗೆ ಕರ್ನಾಟಕವು ಸೂಕ್ತ ತಾಣವಾಗಿರುವುದನ್ನುʼಡಬ್ಲ್ಯುಇಎಫ್ ನಿಯೋಗದ ಗಮನಕ್ಕೆ ತರಲಾಗಿದೆ. ರಾಜ್ಯದಲ್ಲಿನ ಟಾಟಾ ಸನ್ಸ್‌ನ ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗಿದೆ. ಎಬಿ ಇನ್‌ಬೆವ್ ರಾಜ್ಯದಲ್ಲಿ ತನ್ನ ಕಾರ್ಯಾಚರಣೆಗಳನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ಸ್ಪಷ್ಟ ಇಂಗಿತ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ತನ್ನ ವಹಿವಾಟಿನ ಬಗ್ಗೆ ರಾಜ್ಯ ಸರ್ಕಾರದ ಜೊತೆ ಯೋಜನಾ ಪ್ರಸ್ತಾವ ಹಂಚಿಕೊಳ್ಳುವುದಾಗಿ ನ್ಯಾಚುರಲ್ ಫೈಬರ್ ವೆಲ್ಡಿಂಗ್ನ (ಎನ್‌ಎಫ್‌ಡಬ್ಲ್ಯು ಅರ್ಥ್) ಉನ್ನತಾಧಿಕಾರಿಗಳ ತಂಡವು ರಾಜ್ಯದ ನಿಯೋಗಕ್ಕೆ ಭರವಸೆ ನೀಡಿದೆʼ ಎಂದು ಸಚಿವ ಪಾಟೀಲ ಅವರು ತಿಳಿಸಿದ್ದಾರೆ.
ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಬಿಡಿಎ ಆಯುಕ್ತ ಮಣಿವಣ್ಣನ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕೈಗಾರಿಕಾ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಅವರು ರಾಜ್ಯದ ನಿಯೋಗದಲ್ಲಿ ಇದ್ದಾರೆ. ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಡಿಫೆನ್ಸ್ ಕಾರಿಡಾರ್‌ಗೆ ಯತ್ನ – ಎಂ.ಬಿ.ಪಾಟೀಲ್

