– 45ನೇ ವಯಸ್ಸಿಗೆ ಪಕ್ಷ ಮುನ್ನಡೆಸುವ ಜವಾಬ್ದಾರಿ ಹೊತ್ತ ನಬಿನ್
ನವದೆಹಲಿ: ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ (Nitin Nabin) ಅವರಿಂದು ಅಧಿಕಾರ ಸ್ವೀಕರಿಸಿದ್ದಾರೆ. 1980ರಲ್ಲಿ ಸ್ಥಾಪನೆಯಾದ ಬಿಜೆಪಿಯ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ (BJP president) ನಬಿನ್ ಅವರು ಅಧಿಕಾರ ವಹಿಸಿಕೊಂಡಿದ್ದು, 45 ನೇ ವಯಸ್ಸಿಗೆ ಪಕ್ಷ ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ.
लाइव: निवर्तमान भाजपा राष्ट्रीय अध्यक्ष श्री @JPNadda का भारतीय जनता पार्टी संगठन पर्व पर संबोधन। https://t.co/deIjzkqNGB
— BJP (@BJP4India) January 20, 2026
ಕೇಂದ್ರ ಸಚಿವರೂ ಆಗಿರುವ ಜೆ.ಪಿ ನಡ್ಡಾ (JP Nadda) ಅವರ ಅಧಿಕಾರ ಅವಧಿ ಪೂರ್ಣಗೊಂಡ ಬೆನ್ನಲ್ಲೇ ಪಕ್ಷ ನಡೆಸಿದ ಚುನಾವಣೆಯಲ್ಲಿ ನಿತಿನ್ ಅವರು ಅವಿರೋಧವಾಗಿ ಆಯ್ಕೆಯಾದರು. ದೆಹಲಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅವರ ಸಮ್ಮುಖದಲ್ಲಿ ನಬಿನ್, ನೂತನ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಬಳಿಕ ಗಣ್ಯರು ಶುಭ ಹಾರೈಸಿದ್ದಾರೆ.
ಬಿಜೆಪಿ ಸಾಂಸ್ಥಿಕ ಚುನಾವಣೆಯ ಚುನಾವಣಾಧಿಕಾರಿ ಕೆ. ಲಕ್ಷ್ಮಣ್ ಅವರು ನಬಿನ್ ಅವರ ಆಯ್ಕೆಯನ್ನ ಘೋಷಿಸಿ, ಪ್ರಮಾಣಪತ್ರ ನೀಡಿದರು.
लाइव देखें: भारतीय जनता पार्टी संगठन पर्व। https://t.co/Oet02DapT3
— BJP (@BJP4India) January 20, 2026
ಈ ಮೊದಲು ನಬಿನ್ ಅವರನ್ನ ಪಕ್ಷದ ಕಾರ್ಯಾಧ್ಯಕ್ಷರಾಗಿ ಬಿಜೆಪಿ ನೇಮಿಸಿತ್ತು. ನೂತನ ಹುದ್ದೆಗೆ ಸ್ಪರ್ಧೆಗೂ ಮೊದಲ ಅವರು ಬಿಹಾರ ಸರ್ಕಾರದಲ್ಲಿ ಕಾನೂನು ಮತ್ತು ನ್ಯಾಯ, ವಸತಿ ಖಾತೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ನಿತಿನ್ ನಬಿನ್ ಯಾರು?
ಬಿಹಾರ ಬಿಜೆಪಿಯ ಹಿರಿಯ ನಾಯಕ, ಪಾಟ್ನಾದಿಂದ 4 ಬಾರಿ ಎಂಎಲ್ಎ ಆಗಿದ್ದ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿಂಹ ಅವರ ಮಗನಾಗಿರುವ ನಿತಿನ್, ತಂದೆಯ ನಿಧನದ ಬಳಿಕ ಬಿಹಾರದ ಬಿಜೆಪಿಯಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಆರ್ಎಸ್ಎಸ್ ಜೊತೆಗೂ ಅವಿನಾಭಾವ ಸಂಬಂಧ ಹೊಂದಿರುವ ನಬಿನ್, ಸಂಘಟನಾ ಚತುರ ಅಂತಲೇ ಗುರುತಿಸಿಕೊಂಡಿದ್ದಾರೆ.
ಪ್ರಮಾಣಕ್ಕೂ ಮುನ್ನ ಟೆಂಪಲ್ ರನ್
ಪ್ರಮಾಣವಚನಕ್ಕೂ ಮುನ್ನ ದೇವಾಲಯಗಳು ಮತ್ತು ಬಂಗಲಾ ಸಾಹಿಬ್ ಗುರುದ್ವಾರಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್ದೇವ್ ಮತ್ತು ದೆಹಲಿ ಸಚಿವರಾದ ಪರ್ವೇಶ್ ಸಾಹೀಬ್ ಸಿಂಗ್ ಮತ್ತು ಮಂಜಿಂದರ್ ಸಿಂಗ್ ಸಿರ್ಸಾ ಇದ್ದರು.
ಮೊದಲು ಜಂಡೇವಾಲ ದೇವಾಲಯದಲ್ಲಿ ನಿತಿನ್ ಅವರು ಪ್ರಾರ್ಥನೆ ಸಲ್ಲಿಸಿದರು. ನಂತರ ಮಂದಿರ್ ಮಾರ್ಗದಲ್ಲಿರುವ ವಾಲ್ಮೀಕಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಕನೌಟ್ನಲ್ಲಿರುವ ಪ್ರಾಚೀನ ಹನುಮಾನ್ ಮಂದಿರ ಹಾಗೂ ಬಾಂಗ್ಲಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ಪ್ರಾರ್ಥನೆ ಸಲ್ಲಿಸಿದರು ಎಂದು ಬಿಜೆಪಿ ಹೇಳಿದೆ.


