-ಕೊಳೆತ ತರಕಾರಿ ನೀಡಿದ್ರೆ ರೋಗಬರದೇ ಮತ್ತೇನು ಬರುತ್ತೆ: ಶಾಸಕರ ಆಕ್ರೋಶ
ದಾವಣಗೆರೆ: ಆನಗೋಡು (Anagodu) ಕಿರು ಮೃಗಾಲಯದಲ್ಲಿ ಚುಕ್ಕಿ ಜಿಂಕೆಗಳ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮೃಗಾಲಯದಲ್ಲಿನ ಪ್ರಾಣಿಗಳಿಗೆ ಕೊಳೆತ ತರಕಾರಿ ಹಾಗೂ ಹಣ್ಣುಗಳ ಪೂರೈಕೆ ಮಾಡಿದ್ದರಿಂದ ಸಾವನ್ನಪ್ಪಿವೆ ಎಂಬ ಆರೋಪ ಕೇಳಿಬಂದಿದೆ.
ಕಳೆದ ಮೂರು ದಿನಗಳಲ್ಲಿ ನಾಲ್ಕು ಚುಕ್ಕಿ ಜಿಂಕೆ ಸಾವನ್ನಪ್ಪಿದ್ದ ಹಿನ್ನೆಲೆ ಜಿಲ್ಲೆಯ ಆನಗೋಡು ಬಳಿ ಇರುವ ಇಂದಿರಾ ಪ್ರಿಯಾದರ್ಶಿನಿ ಕಿರು ಮೃಗಾಲಯಕ್ಕಿಂದು (ಜ.23) ಶಾಸಕ ಕೆಎಸ್ ಬಸವಂತಪ್ಪ (KS Basavanthappa) ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಪ್ರಾಣಿಗಳಿಗೆ ಕೊಳೆತ ತರಕಾರಿ ಹಾಗೂ ಹಣ್ಣುಗಳನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ಕಂಡ ಶಾಸಕರು, ಸರ್ಕಾರದಿಂದ ಅನುದಾನ ಬರುತ್ತಿದೆ, ಆದರೂ ಕೂಡ ಪ್ರಾಣಿಗಳಿಗೆ ಒಳ್ಳೆಯ ಆಹಾರ ನೀಡುತ್ತಿಲ್ಲ, ಇಂತಹ ಕೊಳೆತ ತರಕಾರಿ ನೀಡಿದರೆ ರೋಗಬರದೇ ಮತ್ತೇನು ಬರುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಆನಗೋಡು ಕಿರು ಮೃಗಾಲಯದಲ್ಲಿ 4 ಚುಕ್ಕಿ ಜಿಂಕೆಗಳ ನಿಗೂಢ ಸಾವು – ಸಾಂಕ್ರಾಮಿಕ ರೋಗ ಶಂಕೆ
ಮೃಗಾಲಯದಲ್ಲಿ ಕಾಡುಕೋಳಿಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ. ಹತ್ತು ವರ್ಷದಿಂದ ಎರಡೇ ಕೋಳಿಗಳಿವೆ. ಅವುಗಳ ಮೊಟ್ಟೆ ಹಾಗೂ ಮರಿಗಳು ಮಾಯವಾಗುತ್ತಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಹಿರಿಯ ಪಶುವೈದ್ಯಾಧಿಕಾರಿ ಸತೀಶ್ ಅವರು `ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದ್ದು, ವೈದ್ಯರ ತಂಡ ಆಹಾರದ ಜೊತೆ ಔಷಧಿ ನೀಡುತ್ತಿದ್ದು, ಚುಕ್ಕೆ ಜಿಂಕೆಗಳು ವೈರಸ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿವೆ. ಹೆಮರಾಜಿಕ್ ಸೆಪ್ಟಿಸೇಮಿಯಾ ಎಂಬ ವೈರಸ್ ಸೋಂಕು ತಗುಲಿರುವುದರಿಂದ ಸಾವನ್ನಪ್ಪಿವೆ ಎಂದು ಶಂಕಿಸಲಾಗಿತ್ತು. ಸದ್ಯ ಸಾವನ್ನಪ್ಪಿದ ಜಿಂಕೆಗಳ ಕಳೇಬರಹ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಿಲಾಗಿದೆ. ಮೂರು ದಿನಗಳಲ್ಲಿ ವರದಿ ಬರುವ ನಿರೀಕ್ಷೆ ಇದೆ. ವರದಿ ಬಂದ ನಂತರ ಚುಕ್ಕಿ ಜಿಂಕೆಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಆತಂಕಪಡುವ ಅವಶ್ಯಕತೆ ಇಲ್ಲ, ಎಲ್ಲಾ ಜಿಂಕೆಗಳು ಆರೋಗ್ಯವಾಗಿವೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಮಹಿಳೆಯರು ಶಾರ್ಟ್ಸ್, ಟೈಟ್ ಪ್ಯಾಂಟ್ ಧರಿಸದೇ ಬನ್ನಿ – ಉಡುಪಿ ಶ್ರೀಕೃಷ್ಣ ಮಠದಲ್ಲಿ ಡ್ರೆಸ್‌ಕೋಡ್

