ಬೆಂಗಳೂರು: ಅಬಕಾರಿ ಡಿಸಿ ಲೋಕಾ ಬಲೆಗೆ ಬಿದ್ದ ಬೆನ್ನಲ್ಲೇ ಅಬಕಾರಿ ಸಚಿವರಿಗೆ ಸಂಕಷ್ಟ ಎದುರಾಗಿದೆ. ಲಂಚದ ಬಹುಪಾಲು ಹಣವನ್ನ ಮಿನಿಸ್ಟರ್‌ಗೆ ಕೊಡಬೇಕು ಎನ್ನುವ ಅಬಕಾರಿ ಡಿಸಿಯ (Excise DC) ಆಡಿಯೊ ಆಧಾರದ ಮೇಲೆ ಆರ್.ಬಿ ತಿಮ್ಮಾಪುರ್ (RB Timmapur) ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಕಳೆದ ಶನಿವಾರ 25 ಲಕ್ಷ ಲಂಚ ಸ್ವೀಕಾರ ವೇಳೆ ಬ್ಯಾಟರಾಯನಪುರದ ಅಬಕಾರಿ ಭವನದಲ್ಲೇ ರೆಡ್ ಹ್ಯಾಂಡಾಗಿ ಅಬಕಾರಿ ಡಿಸಿ ಜಗದೀಶ್ ನಾಯಕ್, ಸೂಪರಿಂಡೆಂಡ್ ತಮ್ಮಣ್ಣ, ಕಾನ್ ಸ್ಟೇಬಲ್ ಲಕ್ಕಪ್ಪ ಗಣಿ ಸಿಕ್ಕಿಬಿದಿದ್ದರು. ಲೋಕಾಯುಕ್ತ (Karnataka Lokayukta) ಅಧಿಕಾರಿಗಳು ಈ ಮೂವರನ್ನು ಟ್ರಾಪ್ ಮಾಡಿ ಜೈಲಿಗಟ್ಟಿದ್ದಾರೆ. ಇದೀಗ ಪ್ರಕರಣ ಸಂಬಂಧ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ್‌ಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಟ್ರ್ಯಾಪ್ ಪ್ರಕರಣದ ದೂರುದಾರ ಲಕ್ಷ್ಮಿ ನಾರಾಯಣ್ ಲಂಚ ಪ್ರಕರಣದಲ್ಲಿ ಸಚಿವ ಆರ್.ಬಿ ತಿಮ್ಮಾಪುರ್ ಪಾತ್ರದ ಕುರಿತು ತನಿಖೆ ನಡೆಸುವಂತೆ ಆಡಿಯೋ ಸಮೇತ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜ್‌ಗೆ ದೂರು ನೀಡಿದ್ದಾರೆ.

ದೂರು ಬಳಿಕ ʻಪಬ್ಲಿಕ್ ಟಿವಿʼ ಜೊತೆ ಮಾತಾಡಿದ ದೂರುದಾರ. ಟ್ರ‍್ಯಾಪ್ ಆದಾಗ ಮೂವರು ಅರೆಸ್ಟ್ ಆಗಿದ್ದು, ಅಬಕಾರಿ ಡಿಸಿನೇ ಮಂತ್ರಿಗೆ ಎಷ್ಟು ಕೊಡಬೇಕು ಎಂದು ಪ್ರಸ್ತಾಪಿಸಿದ್ರು. ಈ ಬಗ್ಗೆ ಆಡಿಯೋ, ದಾಖಲೆಗಳನ್ನ ಲೋಕಾಯುಕ್ತ ಎಸ್‌ಪಿಗೆ ಕೊಟ್ಟಿದ್ದೀನಿ. ಡಿಸಿನೇ ಮಂತ್ರಿಗೆ ಮೇಜರ್ ಅಮೌಂಟ್ ಕೊಡಬೇಕೆಂದು ಓಪನ್ ಆಗಿ ಮಾತಾಡಿದ್ದು, ಈ ಬಗ್ಗೆ ನನ್ನ ಬಳಿ ಎಲ್ಲಾ ದಾಖಲೆಗಳಿವೆ. ನಾನು ಸರ್ಕಾರಕ್ಕೆ ಕಟ್ಟಬೇಕಾದ ಶುಲ್ಕವನ್ನ ಕಟ್ಟಿದ್ದೀನಿ. ಆದರೂ ಲಂಚಕ್ಕೆ ಬೇಡಿಕೆ ಇಟ್ಟು ಲೈಸೆನ್ಸ್ ಕೊಟ್ಟಿರಲಿಲ್ಲ. ಟ್ರ‍್ಯಾಪ್ ಆಗುವ 5 ನಿಮಿಷ ಮುಂಚೆ ಮಾತಾಡಿರೋ ಆಡಿಯೋ ಸಮೇತ ದೂರು ಕೊಟ್ಟಿದ್ದು ಸಚಿವರ ಪಾತ್ರದ ಬಗ್ಗೆ ತನಿಖೆಯಾಗಬೇಕು ಅಂತಾ ದೂರುದಾರ ಲಕ್ಷ್ಮಿ ನಾರಾಯಣ್ ಆಗ್ರಹಿಸಿದ್ದಾರೆ.
ನನಗೂ ಪ್ರಕರಣಕ್ಕೂ ಸಂಬಂಧವೇ ಇಲ್ಲ
ಇನ್ನು ಅಬಕಾರಿ ಇಲಾಖೆ ಲಂಚ ಪ್ರಕರಣದಲ್ಲಿ ಸಚಿವರು ಭಾಗಿ ಆಗಿದ್ದಾರೆ ಎಂದು ಆರೋಪಿಸಿ ದೂರುದಾರ ಕಂಪ್ಲೆಂಟ್ ಕೊಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಆರ್.ಬಿ ತಿಮ್ಮಾಪುರ್.. ನನಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ. ಇದು ನನ್ನ ವಿರುದ್ಧದ ಕುತಂತ್ರ. ನನ್ನ ತೇಜೋವಧೆ ಮಾಡುವ ಕೆಲಸ, ನಾನು ಕಾನೂನು ಹೋರಾಟ ಮಾಡ್ತಿನಿ, ಯಾರೋ ಹೇಳಿದಾಕ್ಷಣ ನನ್ನ ಪಾತ್ರ ಇದೆ ಅಂತಾನಾ ಎಂದಿದ್ದಾರೆ.

ಇನ್ನು ಈ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಬಿಜೆಪಿಯವರು ಸುಖಾಸುಮ್ಮನೆ ಆರೋಪ ಮಾಡ್ತಾರೆ. ಹಿಟ್ ಅಂಡ್ ರನ್ ಮಾಡ್ತಾರೆ. ಸಚಿವರು ಸಹ ಆರೋಪ ಸಾಬೀತಾದ್ರೆ ರಾಜೀನಾಮೆ ಕೊಡ್ತೇನೆ ಅಂದಿದ್ದಾರೆ. ದಾಖಲೆಗಳು ಇದ್ದರೇ ಕೊಡಲಿ ಎಂದಿದ್ದಾರೆ. ಇನ್ನು ಸಚಿವ ಬೋಸರಾಜು ಪ್ರತಿಕ್ರಿಯಿಸಿ, ಬಿಜೆಪಿಯವರು ಬರೀ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡ್ತಾರೆ. ಅಭಿವೃದ್ಧಿ ಬಗ್ಗೆ ಮಾತಾಡಲ್ಲ. ತಿಮ್ಮಾಪುರ್ ಮೇಲೆ ಸುಮ್ಮನೆ ಆರೋಪ ಮಾಡ್ತಿದ್ದಾರೆ ಅಂದಿದ್ದಾರೆ. ಇನ್ನು ದೆಹಲಿಯಲ್ಲಿ ವಿಪಕ್ಷ ನಾಯಕ ಅಶೋಕ್, ಅಬಕಾರಿ ಇಲಾಖೆಯಲ್ಲಿ ಸರ್ಕಾರ ಮತ್ತು ಸಚಿವ ತಿಮ್ಮಾಪುರ್ ಲೂಟಿ ಮಾಡ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

