ಚೆನ್ನೈ: ಕರೂರು ಕಾಲ್ತುಳಿತ (Karur Stampede) ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿಕೆ ಪಕ್ಷದ ಅಧ್ಯಕ್ಷ, ನಟ ವಿಜಯ ದಳಪತಿ (Vijay Thalapathy) ಅವರನ್ನು ಸಿಬಿಐ (CBI) ಮತ್ತೆ ವಿಚಾರಣೆಗೆ ಕರೆದಿದ್ದು, ಎರಡನೇ ಬಾರಿಗೆ ಸಮನ್ಸ್ ಜಾರಿಮಾಡಿದೆ.
ನಾಳೆ (ಜ.19) ಮತ್ತೊಮ್ಮೆ ದೆಹಲಿಗೆ ಆಗಮಿಸಿ, ವಿಚಾರಣೆ ಹಾಜರಾಗುವಂತೆ ಕೇಂದ್ರ ತನಿಖಾ ದಳ ವಿಜಯ್ ದಳಪತಿ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಇದನ್ನೂ ಓದಿ: ಕರೂರು ಕಾಲ್ತುಳಿತ ಪ್ರಕರಣ – 7 ಗಂಟೆಗೂ ಹೆಚ್ಚು ಕಾಲ ನಟ ವಿಜಯ್‌ಗೆ CBI ಗ್ರಿಲ್
ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ಸಮಿತಿಯು ಕೇಂದ್ರ ತನಿಖಾ ದಳದ ತನಿಖೆಯನ್ನು ಮೇಲ್ವಿಚಾರಣೆ ನಡೆಸುತ್ತಿದೆ. ವಿಚಾರಣೆಯ ಭಾಗವಾಗಿ, ಈಗಾಗಲೇ ಸಿಬಿಐ ಹಲವಾರು ಹಿರಿಯ ಟಿವಿಕೆ ಕಾರ್ಯಕರ್ತರನ್ನು ಪ್ರಶ್ನಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಬುಸ್ಸಿ ಆನಂದ್, ಚುನಾವಣಾ ನಿರ್ವಹಣಾ ವಿಭಾಗದ ಪ್ರಧಾನ ಕಾರ್ಯದರ್ಶಿ ಅಧವ್ ಅರ್ಜುನ, ಜಂಟಿ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಕುಮಾರ್ ಮತ್ತು ಕರೂರ್ ಜಿಲ್ಲಾ ಕಾರ್ಯದರ್ಶಿ ಮತಿಯಜಗನ್ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಿದೆ.
ಇನ್ನೂ ಜ.12ರಂದು ಸಿಬಿಐ ವಿಜಯ್ ದಳಪತಿ ಅವರನ್ನು 7 ಗಂಟೆಗೂ ಅಧಿಕ ಕಾಲ ವಿಚಾರಣೆ ನಡೆಸಿತ್ತು. ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಪ್ರಶ್ನೆಗಳನ್ನು ಕೇಳಿದ್ದರು. ಸುಮಾರು ಏಳು ತಾಸಿಗೂ ಅಧಿಕ ಕಾಲ ನಿರಂತರವಾಗಿ ಪ್ರಶ್ನೆ ಮಾಡಿದ್ದರು. ಈ ವೇಳೆ ವಿಜಯ್ ಕಾಲ್ತುಳಿತಕ್ಕೆ ತಮ್ಮ ಪಕ್ಷ ಹಾಗೂ ಪಕ್ಷದ ಕಾರ್ಯಕರ್ತರು ಕಾರಣರಲ್ಲ. ಜೊತೆಗೆ ಕಾಲ್ತುಳಿತದ ಬಳಿಕವೂ ನಾನು ಅಲ್ಲೇ ಇರುವುದು ಇನ್ನಷ್ಟು ಜನರಿಗೆ ತೊಂದರೆಯಾಗಬಹುದು ಅಥವಾ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂಬ ಕಾರಣಕ್ಕೆ ನಾನು ಅಲ್ಲಿಂದ ತೆರಳಿದ್ದೆ ಎಂದು ಹೇಳಿದ್ದರು ಎನ್ನಲಾಗಿದೆ. ಇದೇ ವೇಳೆ ವಿಜಯ್ ಕೊಟ್ಟ ಹೇಳಿಕೆಯನ್ನು ಸಿಬಿಐ ಅಧಿಕಾರಿಗಳು ದಾಖಲಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರಿನಲ್ಲಿ ಟಿವಿಕೆ ಪಕ್ಷದಿಂದ ಆಯೋಜಿಸಿದ್ದ ರ‍್ಯಾಲಿಯಲ್ಲಿ 41 ಮಂದಿ ಸಾವನ್ನಪ್ಪಿದ್ದರು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸುಪ್ರೀಂಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಆದೇಶ ಹೊರಡಿಸಿತ್ತು. ಈ ಮಧ್ಯೆ, ಜನನಾಯಗನ್ ಸಿನಿಮಾ ಬಿಡುಗಡೆ ಕೋರಿ ಚಿತ್ರದ ನಿರ್ಮಾಪಕರು ಕೋರ್ಟ್ ಮೊರೆ ಹೋಗಿದ್ದಾರೆ. ಮದ್ರಾಸ್ ಹೈಕೋರ್ಟ್ ನೀಡಿರುವ ಆದೇಶದ ಬಗ್ಗೆ ತುರ್ತು ವಿಚಾರಣೆ ಕೈಗೊಳ್ಳುವಂತೆ ಅರ್ಜಿ ಸಲ್ಲಿಕೆ ಮಾಡಲಾಗಿದೆ.ಇದನ್ನೂ ಓದಿ: ಕರೂರು ಕಾಲ್ತುಳಿತ ಕೇಸಲ್ಲಿ ವಿಜಯ್‌ಗೆ ಶಾಕ್; ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್

