ಲಕ್ನೋ: ಅನುಮತಿಯಿಲ್ಲದೇ ಖಾಲಿ ಮನೆಯೊಂದರಲ್ಲಿ ನಮಾಜ್ (Namaz) ಮಾಡುತ್ತಿದ್ದ ಕಾರಣಕ್ಕೆ 12 ಮಂದಿಯನ್ನ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಭಾನುವಾರ (ಇಂದು) ಬರೇಲಿ (Bareilly) ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಕಳೆದ ಕೆಲ ದಿನಗಳಿಂದ ಖಾಲಿ ಇರುವ ಮನೆಗಳನ್ನ ತಾತ್ಕಾಲಿಕ ಮದರಸಾಗಳನ್ನಾಗಿ (Madrasa) ಬಳಸಲಾಗುತ್ತಿದೆ ಎನ್ನುವ ಆರೋಪ ಮೊಹಮ್ಮದ್ಗಂಜ್ ಗ್ರಾಮದ ಜನರಿಂದ ಕೇಳಿಬರುತ್ತಲೇ ಇತ್ತು. ಈ ಬಗ್ಗೆ ಪೊಲೀಸರು ಎಚ್ಚರಿಕೆ ವಹಿಸಿದ್ದರು. ಈ ಬೆಳವಣಿಗೆ ನಡುವೆ ಖಾಲಿಯಿದ್ದ ಮನೆಯೊಂದರಲ್ಲಿ ನಮಾಜ್ ಮಾಡುತ್ತಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅನುಮತಿಯಿಲ್ಲದೇ ನಮಾಜ್ ಮಾಡುತ್ತಿದ್ದವರನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಎಸ್ಪಿ (ದಕ್ಷಿಣ) ಅಂಶಿಕಾ ವರ್ಮಾ ತಿಳಿಸಿದ್ದಾರೆ.

ಮುಂದುವರಿದು… ಅನುಮತಿಯಿಲ್ಲದೇ ಯಾವುದೇ ರೀತಿಯ ಧಾರ್ಮಿಕ ಚಟುವಟಿಕೆಗಳನ್ನ ನಡೆಸುವುದು ಕಾನೂನಿನ ಉಲ್ಲಂಘನೆಯಾಗಿದೆ. ಅಂತಹ ಚಟುವಟಿಕೆಗಳು ಪುನರಾವರ್ತನೆಯಾದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಅಂಶಿಕಾ ವರ್ಮಾ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನೋಯ್ಡಾದಲ್ಲಿ ದಟ್ಟ ಮಂಜಿನಿಂದ ಕಂದಕಕ್ಕೆ ಉರುಳಿದ ಕಾರು – ಟೆಕ್ಕಿ ಸಾವು
ವಶಕ್ಕೆ ಪಡೆದಿದ್ದ 12 ಜನರ ವಿರುದ್ಧ ಶಾಂತಿ ಉಲ್ಲಂಘನೆಗೆ ಸಂಬಂಧಿಸಿದ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅವರನ್ನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ: ಮುಂಬೈನಲ್ಲಿ ಮತ್ತೆ ರೆಸಾರ್ಟ್ ರಾಜಕೀಯ – ಶಿಂಧೆ ಸೇನಾ ಕಾರ್ಪೊರೇಟರ್ಗಳು ಫೈವ್ ಸ್ಟಾರ್ ಹೋಟೆಲ್ಗೆ ಸ್ಥಳಾಂತರ
ಪೊಲೀಸರ ಮಾಹಿತಿ ಪ್ರಕಾರ, ಖಾಲಿಯಿದ್ದ ಮನೆ ಹನೀಫ್ ಎಂಬುವವರಿಗೆ ಸೇರಿದ್ದು, ಶುಕ್ರವಾರದ ನಮಾಜ್ಗೆ ತಾತ್ಕಾಲಿಕವಾಗಿ ಬಳಸಲಾಗುತ್ತಿತ್ತು. ಒಟ್ಟು 15 ಮಂದಿ ನಮಾಜ್ ಮಾಡುತ್ತಿದ್ದು, ಮೂವರು ತಲೆ ಮರೆಸಿಕೊಂಡಿದ್ದಾರೆ. ಅವರನ್ನ ಪತ್ತೆಹಚ್ಚಲು ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

