ರಾಯಚೂರು: ಅಪಾರ ಭಕ್ತರನ್ನ ಅಗಲಿದ ರಾಯಚೂರಿನ (Raichuru) ತಿಂಥಣಿ ಬ್ರಿಡ್ಜ್ ಕನಕಗುರುಪೀಠದ ಸಿದ್ದರಾಮನಂದ ಸ್ವಾಮಿಯವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಮಠದ ಪ್ರಾಂಗಣದಲ್ಲಿ ಸ್ವಾಮೀಜಿ ಅಂತ್ಯಕ್ರಿಯೆ ನಡೆಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಸಿದ್ದರಾಮಾನಂದ ಸ್ವಾಮೀಜಿ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು. ಪೊಲೀಸ್ ಪಡೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ವಂದನೆ ಸಲ್ಲಿಸಿದರು. ಸರ್ಕಾರದ ಪರವಾಗಿ ಸಚಿವರಾದ ಬೈರತಿ ಸುರೇಶ್, ಎನ್.ಎಸ್.ಬೋಸರಾಜು ಭಾಗಿಯಾಗಿದ್ದರು. ಸಚಿವ ಬೈರತಿ ಸುರೇಶ್ ಸ್ವಾಮೀಜಿಗೆ ರಾಷ್ಟ್ರಧ್ವಜ ಸಮರ್ಪಿಸಿದರು. ಇದನ್ನೂ ಓದಿ: ಕಾಗಿನೆಲೆ ಕನಕಗುರು ಪೀಠದ ಸಿದ್ದರಾಮನಂದ ಸ್ವಾಮೀಜಿ ವಿಧಿವಶ
ಬಳಿಕ ಮಠದ ವೇದಿಕೆಯಿಂದ ಅಂತ್ಯಸಂಸ್ಕಾರ ಸ್ಥಳದವರೆಗೆ ಸ್ವಾಮೀಜಿಯವರ ಮೆರವಣಿಗೆ ಮಾಡಲಾಯಿತು. ಭಕ್ತರು ಹೆಗಲು ಕೊಟ್ಟು ಸ್ವಾಮೀಜಿಯನ್ನ ಮೆರವಣಿಗೆಯಲ್ಲಿ ಹೊತ್ತೊಯ್ದರು. ಮಠದ ಪ್ರಾಂಗಣದಲ್ಲಿ ಮಂಟಪ ನಿರ್ಮಿಸಿ, ದೀಪ ಹಚ್ಚಿ ನಂತರ ಭಂಡಾರ, ವಿಭೂತಿಯಿಂದ ಅಂತ್ಯಕ್ರಿಯೆ ಮಾಡಲಾಯಿತು. ಈ ವೇಳೆ ಸಮಾಜದ ಇತರ ಸ್ವಾಮಿಗಳು, ಮುಖಂಡರು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

