ಹಾಸನ: 2028ರ ವಿಧಾನಸಭಾ ಚುನಾವಣೆಯಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ (H.D Revanna) ಸ್ಪರ್ಧಿಸುವಂತೆ ಜೆಡಿಎಸ್ (JDS) ಮುಖಂಡರ ಒತ್ತಾಯ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಕೆ.ಎಂ.ಶಿವಲಿಂಗೇಗೌಡ (Shivalinge Gowda) ಪಂಥಾಹ್ವಾನ ನೀಡಿದರು.
ಅರಸೀಕೆರೆಯಲ್ಲಿ ದೇವರಾಜು ಅರಸು ಅವರ ದಾಖಲೆ ಮುರಿದ ಸಿಎಂ ಸಿದ್ದರಾಮಯ್ಯ ಅವರ ಕಟೌಟ್‍ಗೆ ಹಾಲಿನ ಅಭಿಷೇಕ ಮಾಡಿ ಅವರು ಮಾತನಾಡಿದರು. ಈ ವೇಳೆ, ನಾಲ್ಕು ಬಾರಿ ಎಂಎಲ್‍ಎ ಆಗಿದ್ದೀನಿ. ನಮ್ಮ ಅಪ್ಪ ಹೆಬ್ಬೆಟ್ಟು, ನಮ್ಮ ಅಪ್ಪ ನೀಟಾಗಿ ಹೊಲದಲ್ಲಿ ಸಾಲು ಹೊಡೆಯುತ್ತಿದ್ದರು. ಅಂತಹವನ ಹೊಟ್ಟೆಯಲ್ಲಿ ಹುಟ್ಟಿದವನು ನಾನು. ಇತಿಹಾಸ ನನಗೂ ಗೊತ್ತಿದೆ. ಅಲ್ಲಿಂದ ಬೆಳೆದು ಬಂದವನು, ಐವತ್ತು ಜನ ಹಿಂದೆ ಕರೆದುಕೊಂಡು ಅರಸೀಕೆರೆಗೆ ಬಂದಿದ್ದೀರಾ, ಅರಸೀಕೆರೆಯಲ್ಲಿ ಇದು ನಡೆಯೋದಿಲ್ಲ. ಅರಸೀಕೆರೆ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳ ಪಟ್ಟಿ, ಪುಸ್ತಕ ಬಿಡುಗಡೆ ಮಾಡ್ತಿನಿ ಎಂದರು.
ಅರಸೀಕೆರೆಗೆ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಸಿಕೊಂಡು ಬಂದರೆ ಮಾರನೇ ದಿನ ಮೊಸಳೆಹೊಸಳ್ಳಿಗೆ ತೆಗೆದುಕೊಂಡು ಹೋದ್ರಿ, ಅಂದಿನ ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣಗೌಡರ ಬಳಿ ಮನವಿ ಮಾಡಿದಾಗ ಮಂಜೂರು ಮಾಡಿಕೊಟ್ಟರು. ಅರಸೀಕೆರೆಗೆ ಏನು ಮಾಡಿದ್ದೀರಿ? ಇಲ್ಲಿ ನಿಮ್ಮದು ನೆಲೆ ಎಲ್ಲಿದೆ? ಬನ್ನಿ ನಿಂತ್ಕೊಳಿ, ಅರಸೀಕೆರೆ ಜನ ತೋರಿಸುತ್ತಾರೆ. ಸುಮ್ಮಸುಮ್ಮನೆ ಭಾಷಣ ಮಾಡಬೇಡಿ. ಅರಸೀಕೆರೆ ನೆಮ್ಮದಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಕಾಂಗ್ರೆಸ್‍ಗೆ ಕದ್ದುಮುಚ್ಚಿ ಹೋಗಿಲ್ಲ. ನೀವು, ಬರೀ ನಿಮ್ಮ ಮನೆ, ನಿಮ್ಮ ಮನೆತನ, ನೀವೇ ರಾಜಕೀಯ ಮಾಡಿಕೊಂಡು ಹೋದ್ರಿ. ಹಾಸನ ಜಿಲ್ಲೆಯಲ್ಲಿ ಬೇರೆ ಯಾರು ಬೆಳೆಯೋದು ಬೇಡವೇ? ನಾನು ಬಂದು ಅರಸೀಕೆರೆ ಶಾಸಕನಾದಾಗ ಜೆಡಿಎಸ್ ಪಕ್ಷಕ್ಕೆ 85 ಸಾವಿರ ಮತಗಳನ್ನು ಹಾಕಿಸಿದ್ದೇನೆ. ನೀವು ಅರಸೀಕರೆಗೆ ಏನು ಮಾಡಿದ್ದೀರಿ ಎಂಬುದು ಜನರಿಗೆ ಗೊತ್ತಿದೆ. ಏನು ನಿಮ್ಮಿಂದ ಜೆಡಿಎಸ್‍ಗೆ ಮತಗಳು ಬಂದ್ವಾ? ನನ್ನಿಂದ ನಿಮ್ಮ ಪಕ್ಷಕ್ಕೆ ಬಂದಿವೆ. ಪುಣ್ಯಾತ್ಮರೇ ನೀವು ಬಂದು ಇಲ್ಲಿ ಸಭೆ ಮಾಡಿ. ನನ್ನ ಹೆಸರು ಹೇಳಬೇಡಿ ನನಗೂ ಏನಾದರೂ ಆಗಿ ಬಿಡುತ್ತೆ, ಹಾಗಾಗಿ ನನ್ನ ಹೆಸರು ಹೇಳಬೇಡಿ ಎಂದು ಟಾಂಗ್ ನೀಡಿದರು.
ನಾವು ಹೆಂಡತಿ, ಮಕ್ಕಳನ್ನು ಕಟ್ಕಂಡು ರಾಜಕಾರಣ ಮಾಡಲ್ಲ. ಅರಸೀಕೆರೆಯಲ್ಲಿ ಬದುಕುತ್ತೀನಿ, ಇಲ್ಲೇ ಸಾಯ್ತಿನಿ. ಈ ಜನುಮದಲ್ಲಿ ನಾನು ಇರುವವರೆಗೂ ನಿಮಗೆ ಇಲ್ಲಿ ಗೆಲ್ಲಲು ಸಾಧ್ಯವಿಲ್ಲ. ನಿಮಗೆ ಆಶೀರ್ವಾದ ಮಾಡುವ ಜಯಾಮಾನವೂ ನಮ್ಮದಲ್ಲ. ಈ ಅರಸೀಕೆರೆ ಕನಸಿನಲ್ಲಿ ಇಟ್ಟು ಕರೆದುಕೊಂಡು ಬಂದಿದ್ದೀರಲ್ಲಾ ಪುಣ್ಯಾತ್ಮರೇ, ನಾವು ಏನು ಅಂಥ ತೋರಿಸುತ್ತೇನೆ ಎಂದು ಸವಾಲು ಹಾಕಿದರು. ಒಕ್ಕಲಿಗರು ದೇವೇಗೌಡರನ್ನ ಬಿಟ್ಟು ಮತ ಹಾಕಲ್ಲ ಅಂತಿದ್ದರು, ನನಗೆ ಏಕೆ ಮತ ಹಾಕಿದ್ರು? ನೋಡೋಣ ಇದು ರಣರಂಗ, ಮಹಾಭಾರತ ಇವತ್ತೇ ಘೋಷಣೆ ಮಾಡಿದ್ದೀನಿ, ತಾಕತ್ ಇದ್ದರೆ ಬರಲಿ ಎಂದು ಚುನಾವಣೆಗೆ ಸ್ಪರ್ಧಿಸುವಂತೆ ಸವಾಲೆಸೆದರು.

