ನವಿ ಮುಂಬೈನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಇಂದಿನ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ (Gujarat Giants) ಯುಪಿ ವಾರಿಯರ್ಸ್ (UP Warriors) ವಿರುದ್ಧ 10 ರನ್‌ಗಳ ಗೆಲುವು ಸಾಧಿಸಿದೆ. ಯುಪಿ ವಾರಿಯರ್ಸ್ ತಂಡದ ಗೆಲುವಿಗಾಗಿ ಫೋಬೆ ಲಿಚ್‌ಫೀಲ್ಡ್ ಏಕಾಂಗಿ ಬ್ಯಾಟಿಂಗ್ ಹೋರಾಟ ನಡೆಸಿದರು. ಲಿಚ್‌ಫೀಲ್ಡ್ ಅವರ ಏಕಾಂಗಿ ಹೋರಾಟ ಹೊರತಾಗಿಯೂ ಯುಪಿ ವಾರಿಯರ್ಸ್ ಮೊದಲ ಪಂದ್ಯದಲ್ಲಿ ಸೋಲಿಗೆ ಶರಣಾಯಿತು.
ಪಂದ್ಯದಲ್ಲಿ ಯುಪಿ ವಾರಿಯರ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 207 ರನ್ ಗಳಿಸಿತು. ನಾಯಕಿ ಆಶ್ಲೇ ಗಾರ್ಡ್ನರ್ (65) ಅರ್ಧಶತಕದೊಂದಿಗೆ ಅದ್ಭುತ ಆಟವಾಡಿದರು. ಅನುಷ್ಕಾ ಶರ್ಮಾ (44 ರನ್) ಕೂಡ ಉತ್ತಮ ಪ್ರದರ್ಶನ ನೀಡಿದರು. ಸೂಫಿ ಡಿವೈನ್ 38 ರನ್ ಗಳಿಸಿದರು. ಈ ಮೂಲಕ ಗುಜರಾತ್ ಜೈಂಟ್ಸ್ ಯುಪಿ ತಂಡಕ್ಕೆ 208 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಯುಪಿ ಬೌಲರ್‌ಗಳಲ್ಲಿ ಸೂಫಿ ಎಕ್ಲೆಸ್ಟೋನ್ 2 ವಿಕೆಟ್ ಪಡೆದರು, ಡಯಾಂಡ್ರಾ ಡಾಟಿನ್ ಮತ್ತು ಶಿಖಾ ಪಾಂಡೆ ತಲಾ ಒಂದು ವಿಕೆಟ್ ಪಡೆದರು.
ಗುಜರಾತ್ ನೀಡಿದ 208 ರನ್‌ಗಳ ಗುರಿ ಬೆನ್ನಟ್ಟಿದ ಯುಪಿ ತಂಡ ಕಳಪೆ ಪ್ರದರ್ಶನ ನೀಡಿತು. ಕಿರಣ್ ನವಗಿರೆ ಕೇವಲ ಒಂದು ರನ್‌ಗೆ ಔಟಾದರು. ಆದಾಗ್ಯೂ, ನಾಯಕಿ ಮೆಗ್ ಲ್ಯಾನಿಂಗ್ 30 ರನ್‌ಗಳಿಸಿ ಫೋಬೆ ಲಿಚ್‌ಫೀಲ್ಡ್‌ಗೆ ಉತ್ತಮ ಬೆಂಬಲ ನೀಡಿದರು. ಹರ್ಲೀನ್ ಡಿಯೋಲ್ ರನ್ ಗಳಿಸಲು ವಿಫಲರಾದರು. ದೀಪ್ತಿ ಶರ್ಮಾ ಒಂದು ರನ್ ಗಳಿಸಿ ಔಟಾದರು. ಈ ಮಧ್ಯೆ, ಸೋಫಿ ಎಕ್ಲೆಸ್ಟೋನ್ 10 ಎಸೆತಗಳಲ್ಲಿ 27 ರನ್ ಗಳಿಸುವಲ್ಲಿ ಯಶಸ್ವಿಯಾದರು.
ಗುಜರಾತ್ ಬೌಲರ್ಸ್ಗೆ ಬೆವರಿಳಿಸಿದ ಲಿಚ್‌ಫೀಲ್ಡ್ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದರು. ಫೋಬೆ ಲಿಚ್‌ಫೀಲ್ಡ್ 40 ಎಸೆತಗಳಲ್ಲಿ 8 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ 78 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಭರ್ಜರಿ ಇನ್ನಿಂಗ್ಸ್ ಹೊರತಾಗಿಯೂ ಯುಪಿ ಗೆಲ್ಲಲು ವಿಫಲವಾಯಿತು. ಅಂತಿಮವಾಗಿ ಯುಪಿ ವಾರಿಯರ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳಿಗೆ 197 ರನ್ ಗಳಿಸಿ, 10 ರನ್‌ಗಳ ಸೋಲು ಕಂಡಿತು.


