ಧಾರವಾಡ: ಚಿಕನ್ ಬಾರ್ಬೆಕ್ಯೂ ಮಾಡಲು ಹಚ್ಚಿದ್ದ ಒಲೆಯ ಹೊಗೆ (Smoke) ರೂಮ್ ತುಂಬಾ ಆವರಿಸಿ ಓರ್ವ ಸಾವನ್ನಪ್ಪಿ, 6 ಮಂದಿ ಅಸ್ವಸ್ಥರಾದ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ. ಅಸ್ವಸ್ಥರಾದವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಮೃತನನ್ನು ನೇಪಾಳ ಮೂಲದ ಬಿಬೇಕ್ ಎಂದು ಗುರುತಿಸಲಾಗಿದೆ. ಅಸ್ವಸ್ಥರಾದವರನ್ನು ನರೇಶ (45), ನಿತೇಶ್ (18), ಡಿಕೆಶ್ (40), ಸುಧನ್ (30), ಕುಮಾರ್ (50) ಮತ್ತು ಲಕ್ಷ್ಮಣ್ (30) ಎಂದು ಗುರುತಿಸಲಾಗಿದೆ. ಇವರೆಲ್ಲ ನೇಪಾಳ ಮೂಲದವರಾಗಿದ್ದು, ಧಾರವಾಡದ ಚಿಂಗ್ಸ್ ಚೌ ಎಂಬ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲರೂ ಧಾರವಾಡದ ಕೆಎಂಎಫ್ ಬಳಿಯ ನಂದಿನಿ ಲೇಔಟ್‌ನ ಮನೆಯೊಂದರಲ್ಲಿ ವಾಸವಿದ್ದರು. ಇದನ್ನೂ ಓದಿ: ಬೆಂಗಳೂರು | ಕುಡಿದು ಸಿನಿಮಾ ಸ್ಟೈಲ್‌ಲ್ಲಿ ಡಿವೈಡರ್ ಹಾರಿಸಿದ ಕಾರು ಚಾಲಕ – 8 ಮಂದಿ ಜಸ್ಟ್ ಮಿಸ್!
ಶುಕ್ರವಾರ (ಜ.9) ರಾತ್ರಿ ಈ ಏಳೂ ಜನ ಕೆಲಸಗಾರರು ತಾವು ವಾಸವಿದ್ದ ಮನೆಯಲ್ಲಿ ಬಾರ್ಬೆಕ್ಯೂ ಮಾಡಲು ತಂದೂರಿ ರೊಟ್ಟಿ ಮಾಡುವ ಒಲೆ ಹೊತ್ತಿಸಿದ್ದರು. ರಾತ್ರಿ ಊಟ ಮಾಡಿ ಎಲ್ಲರೂ ಮಲಗಿದ್ದರು. ಆದರೆ, ಒಲೆಯಿಂದ ಹೊಗೆ ಆವರಿಸಿ ಏಳೂ ಜನರಿಗೆ ಉಸಿರಾಟದ ತೊಂದರೆಯಾಗಿದೆ. ಬೆಳಗಿನವರೆಗೂ ಏಳೂ ಜನ ಮಲಗಿದ ಜಾಗದಲ್ಲೇ ಮಲಗಿದ್ದರು. ಬೆಳಿಗ್ಗೆ ಕೆಲಸಗಾರರು ಬರದೇ ಇದ್ದಾಗ ಮಾಲೀಕರೇ ಸ್ಥಳಕ್ಕೆ ಹೋಗಿ ನೋಡಿದಾಗ ಈ ಅವಾಂತರ ನಡೆದಿದ್ದು ಗೊತ್ತಾಗಿದೆ.
ಎಲ್ಲರನ್ನೂ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹ – 10 ತಿಂಗಳ ಮಗುವಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ತಾಯಿ

