ಭೋಪಾಲ್: ಇಂದೋರ್‌ನಲ್ಲಿ (Indore Water Contamination) ಇತ್ತೀಚೆಗೆ ಕಲುಷಿತ ನೀರು ಸೇವಿಸಿ ಹಲವು ಮಂದಿ ಸಾವನ್ನಪ್ಪಿದ ಪ್ರಕರಣ ಮರುಕಳಿಸದಂತೆ ತಡೆಯಲು ಮಧ್ಯಪ್ರದೇಶದೆಲ್ಲೆಡೆ (Madhya Pradesh) ಕೈಗೊಂಡ ಕ್ರಮಗಳನ್ನು ವಿವರಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ಆದೇಶಿಸಿದೆ.
ತೊಂದರೆಗೀಡಾದ ಪ್ರದೇಶದ ಸಂತ್ರಸ್ತರಿಗೆ ತುರ್ತು ಪರಿಹಾರ ಕ್ರಮ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮ, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಹೊಣೆಗಾರಿಕೆ ನಿಗದಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಹಾಗೂ ದಂಡನಾತ್ಮಕ ಕ್ರಮ, ಸಂತ್ರಸ್ತರಿಗೆ ಸೂಕ್ತ ಪರಿಹಾರ, ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವ ಸಂಬಂಧ ಕೈಗೊಂಡ ಕ್ರಮಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿವರಿಸುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ನ್ಯಾ. ವಿಜಯ್ ಕುಮಾರ್ ಶುಕ್ಲಾ ಮತ್ತು ಅಲೋಕ್ ಅವಸ್ಥಿ ಅವರಿದ್ದ ಪೀಠ ಸೂಚಿಸಿದೆ. ಇದನ್ನೂ ಓದಿ: ಕಲುಷಿತ ನೀರು ಸೇವನೆಯಿಂದ ಸಾವಿನ ಸಂಖ್ಯೆ 14ಕ್ಕೆ ಏರಿಕೆ – 200 ಮಂದಿ ಆಸ್ಪತ್ರೆಗೆ ದಾಖಲು
ಮುಂದಿನ ವಿಚಾರಣಾ ದಿನಾಂಕದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನಾವು ನಿರ್ದೇಶಿಸುತ್ತಿದ್ದೇವೆ. ಇಡೀ ರಾಜ್ಯದಲ್ಲಿ ನೀರು ಕಲುಷಿತಗೊಳ್ಳದಂತೆ ತಡೆಯಲು ಹಾಗೂ ಉಳಿದ ಸ್ಥಳಗಳಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ರಾಜ್ಯಮಟ್ಟದಲ್ಲಿ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದನ್ನು ಅವರು ಈ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಪೀಠ ಹೇಳಿದೆ.
ಅಲ್ಲದೇ, ನೀರು ದೊರೆಯದ ಪ್ರದೇಶಗಳಿಗೆ ಸರ್ಕಾರದ ವೆಚ್ಚದಲ್ಲಿ ಟ್ಯಾಂಕರ್‌ಗಳ ಮೂಲಕ ಅಥವಾ ಪ್ಯಾಕೇಜ್ ಕುಡಿಯುವ ನೀರನ್ನು ತಕ್ಷಣ ಪೂರೈಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ. ಮಾಲಿನ್ಯಗೊಂಡ ಪೈಪ್‌ಲೈನ್‌ಗಳು, ಮೇಲ್ಮಟ್ಟದ ಟ್ಯಾಂಕ್‌ಗಳು, ಬೋರ್‌ವೆಲ್‌ಗಳು ಹಾಗೂ ನದಿಗಳಂತಹ ನೀರಿನ ಮೂಲಗಳ ಬಳಕೆಯನ್ನು ನಿಲ್ಲಿಸುವಂತೆ ಆದೇಶಿಸಿರುವ ಅದು ಬಾಧಿತ ಪ್ರದೇಶದ ನಿವಾಸಿಗಳ ಆರೋಗ್ಯ ತಪಾಸಣೆಗೆ ಶಿಬಿರಗಳನ್ನು ನಡೆಸಬೇಕು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕಲುಷಿತ ನೀರು ಸೇವಿಸಿದವರಿಗೆ ಉಚಿತ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದೆ.
ಎನ್‌ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಶಾಲೆಗಳ ಮೂಲಕ ಹಲವು ಸ್ಥಳಗಳಲ್ಲಿ ನೀರಿನ ಗುಣಮಟ್ಟ ಪರೀಕ್ಷೆ ನಡೆಸಬೇಕು. ಮಲಿನಜಲ ಮತ್ತು ನೀರು ಪೈಪ್‌ಲೈನ್‌ಗಳು ಸಮಾನಾಂ0ತರವಾಗಿ ಸಾಗುವ ಸ್ಥಳಗಳಲ್ಲಿ ಪೈಪ್‌ಲೈನ್‌ಗಳ ದುರಸ್ತಿ ಹಾಗೂ ಬದಲಾವಣೆ ಮಾಡಲು, ಆನ್‌ಲೈನ್ ನೀರಿನ ಗುಣಮಟ್ಟ ಮೇಲ್ವಿಚಾರಣಾ ವ್ಯವಸ್ಥೆ ಜಾರಿಗೆ ತರಬೇಕು. ಕ್ಲೋರಿನೇಷನ್ ಮತ್ತು ನಿಷ್ಕ್ರಿಯೀಕರಣ ಕ್ರಮಗಳನ್ನು ಜಾರಿಗೆ ತರಲು ಹಾಗೂ ಇಂದೋರ್ ನಗರಕ್ಕಾಗಿ ದೀರ್ಘಕಾಲೀನ ನೀರಿನ ಸುರಕ್ಷತಾ ಯೋಜನೆ ರೂಪಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಇದನ್ನೂ ಓದಿ: 10 ವರ್ಷದ ಪ್ರಾರ್ಥನೆ ಬಳಿಕ ಹುಟ್ಟಿದ 6 ತಿಂಗಳ ಮಗು ಕಲುಷಿತ ನೀರು ಸೇವನೆಯಿಂದ ಸಾವು
ಭಗೀರಥಪುರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಕಲುಷಿತ ನೀರು ಸೇವನೆ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಮಾಲಿನ್ಯಗೊಂಡ ನೀರಿನಿಂದ ಏಳು ಮಂದಿ ಸಾವನ್ನಪ್ಪಿ ಹಲವರಿಗೆ ಅತಿಸಾರ ಸೇರಿದಂತೆ ಹಲವು ಕಾಯಿಲೆಗಳು ಕಾಣಿಸಿಕೊಂಡಿವೆ ಎಂಬುದನ್ನು ಗಮನಿಸಿದ ಕೋರ್ಟ್, ಸ್ವಚ್ಛ ಕುಡಿಯುವ ನೀರು ಜೀವಿಸುವ ಹಕ್ಕಿನ ಅವಿಭಾಜ್ಯ ಭಾಗ. ಇಂತಹ ಘಟನೆಗಳು ಸಾರ್ವಜನಿಕ ಆರೋಗ್ಯದ ತುರ್ತು ಪರಿಸ್ಥಿತಿಯನ್ನು ಹೇಳುತ್ತವೆ ಎಂದಿತು.
ಇದು ಇಂದೋರ್ ಮಾತ್ರವಲ್ಲದೆ ಇಡೀ ರಾಜ್ಯದ ಸಮಸ್ಯೆಯಾಗಿದೆ ಎಂದ ಪೀಠ ಮುಂದಿನ ವಿಚಾರಣೆಗೂ ಮುನ್ನವೇ ತಾನು ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿತು. ಹೊಸ ಕುಡಿಯುವ ನೀರಿನ ಪೈಪ್‌ಲೈನ್‌ಗಳ ಟೆಂಡರ್ ಸಂಬಂಧಿತ ಕಡತಗಳು ಹಾಗೂ 2017–18ರ ಮಾದರಿ ಪರೀಕ್ಷೆಗಳ ಕುರಿತು ಮಧ್ಯಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಸಲ್ಲಿಸಬೇಕು ಎಂದು ಆದೇಶಿಸಿತು.

