ಭಾರತ 2030ರ ವೇಳೆಗೆ ರೇಬಿಸ್ (Rabies) ನಿರ್ಮೂಲನೆ ಮಾಡುವುದಾಗಿ ಘೋಷಿಸಿದೆ. ಇದೇ ಹೊತ್ತಿಗೆ 2023 ರಿಂದ ಭಾರತದಲ್ಲಿ (India) ನಕಲಿ ರೇಬೀಸ್ ಲಸಿಕೆ (Fake Rabies Vaccine) ಓಡಾಡುತ್ತಿದೆ ಎಂದು ಆಸ್ಟ್ರೇಲಿಯಾ (Australia) ಆರೋಗ್ಯ ಇಲಾಖೆ ಹೇಳಿಕೊಂಡಿದೆ. ಅಲ್ಲದೇ ಅಭಯ್ರಬ್ ಲಸಿಕೆ ಪಡೆದ ಜನರು ಬದಲಿ ಡೋಸ್ ಅಗತ್ಯವಿದೆಯೇ ಎಂದು ಪರಿಶೀಲಿಸಲು ಭಾರತಕ್ಕೆ ಸಲಹೆ ನೀಡಿದೆ.
ಆಸ್ಟ್ರೇಲಿಯಾ ಆರೋಗ್ಯ ಇಲಾಖೆ ಹೇಳಿದ್ದೇನು?
2023 ರಿಂದ ಭಾರತದಲ್ಲಿ ನಕಲಿ ರೇಬೀಸ್ ಲಸಿಕೆ ಓಡಾಡುತ್ತಿದೆ. ಅಭಯ್ರಬ್ ಲಸಿಕೆ ಪಡೆದ ಜನರು ಬದಲಿ ಡೋಸ್ ಅಗತ್ಯವಿದೆಯೇ ಎಂಬುದನ್ನು ಭಾರತ ಪರಿಶೀಲಿಸುವ ಅಗತ್ಯವಿದೆ. ಒಬ್ಬ ವ್ಯಕ್ತಿಯು ನಿಜವಾದ ಅಥವಾ ನಕಲಿ ಲಸಿಕೆಯನ್ನು ಪಡೆದಿದ್ದಾನೆಯೇ ಎಂದು ಖಚಿತಪಡಿಸುವುದು ಕಷ್ಟ. ಮುನ್ನೆಚ್ಚರಿಕೆಯಾಗಿ, ನವೆಂಬರ್ 1, 2023 ರಿಂದ ಭಾರತದಲ್ಲಿ ಅಭಯ್ರಬ್‌ನ ಡೋಸ್ ಪಡೆದ ಜನರು ನಕಲಿ ಲಸಿಕೆಯನ್ನು ಪಡೆದಿರುವ ಸಾಧ್ಯತೆ ಇದೆ ಎಂದು ಪರಿಗಣಿಸಿ ಬದಲಿ ಡೋಸ್‌ಗಳನ್ನು ನೀಡಬೇಕು ಎಂದು ತಿಳಿಸಿದೆ. ಇದನ್ನೂ ಓದಿ: 2030ಕ್ಕೆ ರೇಬೀಸ್ ನಿರ್ಮೂಲನೆ – ಪಣ ತೊಟ್ಟ ಕೇಂದ್ರದ ಮುಂದಿರೋ ಸವಾಲುಗಳೇನು?
ತಮ್ಮ ದೇಶದ ಜನ ಇತರ ದೇಶಗಳಲ್ಲಿ ಪಡೆದ ಯಾವುದೇ ಲಸಿಕೆಯ ವಿವರ, ದಾಖಲೆಗಳನ್ನು ಜನ ಇಟ್ಟುಕೊಳ್ಳಬೇಕು. ಅಂತಹವರು ಆಸ್ಟ್ರೇಲಿಯಾಕ್ಕೆ ಹಿಂದಿರುಗಿದ ನಂತರ ವೈದ್ಯರೊಂದಿಗೆ ಪರಿಶೀಲಿಸಲು ಇದು ಸಹಕಾರಿಯಾಗಲಿದೆ. ಆಸ್ಟ್ರೇಲಿಯಾದಲ್ಲಿ ಅಭಯ್ರಬ್ ಅನ್ನು ಬಳಸದ ಕಾರಣ ಭಾರತದಲ್ಲಿ ಲಸಿಕೆ ಹಾಕಿದ ಪ್ರಯಾಣಿಕರಿಗೆ ಈ ಎಚ್ಚರಿಕೆ ನೀಡಲಾಗಿದೆ.
ಲಸಿಕೆ ತಯಾರಕ ಕಂಪನಿ ಹೇಳಿದ್ದೇನು?
ಈ ಎಚ್ಚರಿಕೆ ನಡುವೆಯೂ ಭಾರತದ ಪ್ರಮುಖ ಲಸಿಕೆ ತಯಾರಕ ಕಂಪನಿಯಲ್ಲಿ ಒಂದಾದ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ (IIL), ನಕಲಿ ಲಸಿಕೆಗಳು ಚಲಾವಣೆಯಲ್ಲಿವೆ ಎಂಬ ಆರೋಪವನ್ನು ನಿರಾಕರಿಸಿದೆ. ಆದರೆ ಆಸ್ಟ್ರೇಲಿಯಾದ ಸಲಹೆಯನ್ನು ಪರಿಷ್ಕರಿಸುವ ಬಗ್ಗೆ ಕಂಪನಿ ಈಗಾಗಲೇ ಅಲ್ಲಿನ ಆರೋಗ್ಯ ಅಧಿಕಾರಿಗಳಿಗೆ ಪತ್ರ ಬರೆದಿದೆ ಎಂದು ಸ್ಪಷ್ಟನೆ ನೀಡಿದೆ.
ನಕಲಿ ಲಸಿಕೆಯನ್ನು ಸರ್ಕಾರಿ ಅಂಗಸಂಸ್ಥೆಯಾದ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್‌ನ ಉತ್ಪನ್ನ ಎಂದು ತಪ್ಪಾಗಿ ಲೇಬಲ್ ಮಾಡಲಾಗಿದೆ ಎಂದು ಔಷಧ ನಿಯಂತ್ರಣ ಸಂಸ್ಥೆ ತಿಳಿಸಿದೆ.
ಔಷಧಿಗಳನ್ನು ವಾಪಸ್ ಪಡೆದ ಕಂಪನಿ
ಮಾರುಕಟ್ಟೆಯಲ್ಲಿ ಪ್ರಸ್ತುತ ವಿತರಿಸಲಾದ ಬ್ಯಾಚ್ ಸಂಖ್ಯೆ KA24014 ರ ಬಾಟಲ್‌ಗಳಲ್ಲಿನ ಲಸಿಕೆಯನ್ನು ಅಧಿಕಾರಿಗಳು ಗುರುತಿಸಿ, ವಾಪಸ್ ಪಡೆದಿದ್ದಾರೆ.
ನಕಲಿ ಔಷಧಿಯಿಂದ ಆಗೋ ಅಪಾಯವೇನು?
ಅಭಯ್ರಬ್ ನಿರ್ಣಾಯಕ ಲಸಿಕೆಯಾಗಿದ್ದು ಪ್ರಾಣಿಗಳಿಂದ ಕಚ್ಚಲ್ಪಟ್ಟವರಿಗೆ ನೀಡಲಾಗುತ್ತದೆ. ನಕಲಿ ಔಷಧ ರೋಗಿಗಳಿಗೆ ಮಾರಕವಾಗುವ ಸಾಧ್ಯತೆ ಇದೆ. ಇದು ಗಂಭೀರ ಅಪಾಯವನ್ನುಂಟುಮಾಡುತ್ತದೆ.
210 ಮಿಲಿಯನ್ ಡೋಸ್ ಪೂರೈಕೆ
2000ನೇ ಇಸವಿಯಿಂದ ಕಂಪನಿ ಅಭಯ್ರಾಬ್ ತಯಾರಿಸುತ್ತಿದೆ, ಭಾರತ ಮತ್ತು 40 ದೇಶಗಳಲ್ಲಿ 210 ಮಿಲಿಯನ್‌ಗಿಂತಲೂ ಹೆಚ್ಚು ಡೋಸ್‌ಗಳನ್ನು ಪೂರೈಸಲಾಗಿದೆ. ಭಾರತದಲ್ಲಿ 40% ಮಾರುಕಟ್ಟೆ ಪಾಲನ್ನು ಹೊಂದಿದೆ.
ಭಾರತದಲ್ಲಿ ತಯಾರಾಗುವ ಪ್ರತಿಯೊಂದು ಲಸಿಕೆಯನ್ನು ಮಾರಾಟವಾಗುವ ಮೊದಲು ಕೇಂದ್ರ ಔಷಧ ಪ್ರಯೋಗಾಲಯ (ಭಾರತ ಸರ್ಕಾರ) ಪರೀಕ್ಷಿಸಿ ಬಿಡುಗಡೆ ಮಾಡುತ್ತದೆ ಎಂದು IIL ಒತ್ತಿ ಹೇಳಿದೆ. ಸರ್ಕಾರಿ ಸಂಸ್ಥೆಗಳು ಮತ್ತು ಅಧಿಕೃತ ವಿತರಕರ ಮೂಲಕ ಮಾಡಲಾದ ಸರಬರಾಜುಗಳು ಸುರಕ್ಷಿತ ಮತ್ತು ಪ್ರಮಾಣಿತ ಗುಣಮಟ್ಟದ್ದಾಗಿರುತ್ತವೆ.
ಈ ಕುರಿತು ಪ್ರತಿಕ್ರಿಯಿಸಿದ ಐಐಎಲ್ ನ ಉಪಾಧ್ಯಕ್ಷ ಹಾಗೂ ಗುಣಮಟ್ಟ ನಿರ್ವಹಣಾ ಮುಖ್ಯಸ್ಥ ಸುನಿಲ್ ತಿವಾರಿ, ಸರ್ಕಾರಿ ಸಂಸ್ಥೆಗಳು ಮತ್ತು ಅಧಿಕೃತ ವಿತರಕರ ಮೂಲಕ ಸರಬರಾಜು ಮಾಡಲಾಗುವ ಎಲ್ಲ ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ. ನಿಗದಿತ ಗುಣಮಟ್ಟ ಮಾನದಂಡಗಳಿಗೆ ಅನುಗುಣವಾಗಿವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರೇಬೀಸ್ ಲಸಿಕೆ ಪಡೆದರೂ ಬದುಕಲಿಲ್ಲ 7 ವರ್ಷದ ಬಾಲಕಿ




