ನವದೆಹಲಿ: ದೆಹಲಿ ಗಲಭೆ ಪ್ರಕರಣದಲ್ಲಿ (2020 Delhi Communal Riots) ಆರೋಪಿಗಳಾಗಿರುವ ಉಮರ್ ಖಾಲಿದ್(Umar Khalid), ಶಾರ್ಜೀಲ್ ಇಮಾಮ್ (Sharjeel Imam) ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಡ ಪೀಠವು ಡಿಸೆಂಬರ್ 2025ರಲ್ಲಿ ದಿಲ್ಲಿ ಹೈಕೋರ್ಟ್ ಜಾಮೀನು (Bail) ನಿರಾಕರಿಸಿದ್ದ ಸೆಪ್ಟೆಂಬರ್ 2ರ ತೀರ್ಪಿನ ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು.
ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಜಾಮೀನು ನಿರಾಕರಿಸಿದರೆ ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಮೊಹಮ್ಮದ್ ಸಮೀರ್ ಖಾನ್, ಶಾದಾಬ್ ಅಹ್ಮದ್, ಶಿಫಾ ಉರ್ ರೆಹಮಾನ್ ಸುಪ್ರೀಂಕೋರ್ಟ್ 12 ಷರತ್ತು ವಿಧಿಸಿ ಜಾಮೀನು ನೀಡಿದೆ.
ಖಾಲಿದ್ ಮತ್ತು ಇಮಾಮ್ ಕ್ರಿಮಿನಲ್ ಪಿತೂರಿಯಲ್ಲಿ ಇಬ್ಬರೂ ಭಾಗಿಯಾಗಿರುವುದಕ್ಕೆ ಸೂಚಿಸುವ ಸಾಕಷ್ಟು ಪುರಾವೆಗಳನ್ನು ಪ್ರಾಸಿಕ್ಯೂಷನ್ ನೀಡಿದ್ದು ನಮಗೆ ತೃಪ್ತಿ ತಂದಿದೆ ಎಂದು ಕೋರ್ಟ್ ಹೇಳಿದೆ.
ದೆಹಲಿ ಪೊಲೀಸರ ವಾದ ಏನು?
2020 ರ ಗಲಭೆಯ ಮಾಸ್ಟರ್ ಮೈಂಡ್” ಎಂದು ಆರೋಪಿಸಿ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, 1967 (ಯುಎಪಿಎ) ಭಯೋತ್ಪಾದನಾ ವಿರೋಧಿ ಕಾನೂನು ಮತ್ತು ಹಿಂದಿನ ಭಾರತೀಯ ದಂಡ ಸಂಹಿತೆಯ (ಐಪಿಸಿ) ನಿಬಂಧನೆಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಗಲಭೆಗಳು ಸ್ವಯಂಪ್ರೇರಿತವಲ್ಲ, ಆದರೆ ಭಾರತದ ಸಾರ್ವಭೌಮತ್ವದ ಮೇಲೆ ಸಂಯೋಜಿತ, ಪೂರ್ವ ಯೋಜಿತ ಮತ್ತು ಉತ್ತಮವಾಗಿ ವಿನ್ಯಾಸಗೊಳಿಸಲಾದ ದಾಳಿ ಎಂದು ದೆಹಲಿ ಪೊಲೀಸರು ಇಬ್ಬರ ಜಾಮೀನು ಅರ್ಜಿಯನ್ನು ವಿರೋಧಿಸಿದ್ದರು. ಗಲಭೆಗೆ ಸಂಬಂಧಿಸಿದಂತೆ 757 ಎಫ್‌ಐಆರ್‌ಗಳನ್ನು ದಾಖಲಿಸಿದ್ದೇವೆ ಮತ್ತು 273 ಪ್ರಕರಣಗಳಲ್ಲಿ ತನಿಖೆ ಬಾಕಿ ಇದೆ ಮತ್ತು 250 ಪ್ರಕರಣಗಳಲ್ಲಿ ವಿಚಾರಣೆ ಬಾಕಿ ಇದೆ ಎಂದು ಅವರು ಹೈಕೋರ್ಟ್‌ಗೆ ಪೊಲೀಸರು ತಿಳಿಸಿದ್ದರು.
ಇಮಾಮ್ ತನ್ನ ಭಾಷಣದಲ್ಲಿ ಸಿಲಿಗುರಿ ಕಾರಿಡಾರ್ ಅನ್ನು ಮುಚ್ಚಿ ಅಸ್ಸಾಂ ಅನ್ನು ಭಾರತದಿಂದ ಶಾಶ್ವತ ಸಂಪರ್ಕ ಕಡಿತಗೊಳಿಸಲು ಕರೆ ನೀಡಿದ್ದನ್ನು ದೆಹಲಿ ಪೊಲೀಸರ ಪರ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದರು.
ಆರೋಪಿಗಳು ಐದು ವರ್ಷಗಳಿಗಿಂತ ಹೆಚ್ಚು ಕಾಲ ಬಂಧನದಲ್ಲಿದ್ದಾರೆ. ಸಿಎಎ ವಿರೋಧಿ ಪ್ರತಿಭಟನೆ ವೇಳೆ 2020 ಫೆ.23 ರಿಂದ ಫೆ.29 ರವರೆಗೆ ನಡೆದ ಗಲಭೆಯಲ್ಲಿ 53 ಮಂದಿ ಮೃತಪಟ್ಟಿದ್ದರು. ಈ ಗಲಭೆಗೆ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ ಪ್ರಚೋದನೆ ನೀಡಿದ್ದೇ ಕಾರಣ ಎಂದು ದೆಹಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು.

