– ಭಾನುವಾರ ಯಲ್ಲಾಪುರ ಬಂದ್‌ಗೆ ಹಿಂದೂಪರ ಸಂಘಟನೆ ಕರೆ
ಕಾರವಾರ: ಅಕ್ರಮ ಸಂಬಂಧದಲ್ಲಿದ್ದ ವಿಚ್ಛೇದಿತ ಮಹಿಳೆ ಮದುವೆ ಒಪ್ಪದಿದ್ದಕ್ಕೆ ಪ್ರಿಯಕರ ಚೂರಿಯಿಂದ ಕುತ್ತಿಗೆ ಇರಿದು ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ (Yellapur) ನಡೆದಿದೆ.
ಮೃತಳನ್ನು ಯಲ್ಲಾಪುರ ಪಟ್ಟಣ ಕಾಳಮ್ಮನಗರದ ರಂಜಿತಾ ಮಲ್ಲಪ್ಪ ಬನ್ಸೋಡೆ (30), ಕೊಲೆ ಆರೋಪಿ ಯಲ್ಲಾಪುರ ನಿವಾಸಿ ಆರೋಪಿ ರಫೀಕ್ ಎಂದು ಗುರುತಿಸಲಾಗಿದೆ. 10 ವರ್ಷಗಳ ಹಿಂದೆ ರಂಜಿತಾ ವಿಚ್ಛೇದನ ಪಡೆದು ತಂದೆ-ತಾಯಿ ಹಾಗೂ ಅಣ್ಣನೊಂದಿಗೆ ಯಲ್ಲಾಪುರದಲ್ಲಿ 5 ವರ್ಷದ ಮಗುವಿನೊಂದಿಗೆ ವಾಸವಾಗಿದ್ದಳು ಎನ್ನಲಾಗಿದೆ.
ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ರಂಜಿತಾಳಿಗೆ ರಫೀಕ್‌ನ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ, ಇಬ್ಬರು ಅಕ್ರಮ ಸಂಬಂಧದಲ್ಲಿದ್ದರು. ಇಬ್ಬರ ಕುಟುಂಬಗಳ ನಡುವೆ ಸಹ ಒಳ್ಳೆಯ ಬಾಂಧವ್ಯ ಇದ್ದ ಕಾರಣ ರಫೀಕ್ ಆಗಾಗ ರಂಜಿತಾಳ ಮನೆಗೆ ಬಂದು ಹೋಗುತ್ತಿದ್ದ. ಈ ಮಧ್ಯೆ ರಫೀಕ್ ಮದುವೆಯಾಗುವಂತೆ ರಂಜಿತಾಳನ್ನ ಒತ್ತಾಯಿಸುತ್ತಿದ್ದ. ಅದಕ್ಕೆ ರಂಜಿತಾ ವಿರೋಧ ವ್ಯಕ್ತಪಡಿಸಿದ್ದಳು. ನಮ್ಮ ಸಂಬಂಧ ಹೀಗೆ ಇರಲಿ, ಮದುವೆ ಮಾತ್ರ ಬೇಡ ಅಂತ ಹೇಳಿದ್ದಳಂತೆ.
ರಂಜಿತಾಳ ಮಾತಿನಿಂದ ಕೋಪಗೊಂಡಿದ್ದ ರಫಿಕ್ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ರಂಜಿತಾಳನ್ನ ಅಡ್ಡಗಟ್ಟಿ ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ರಂಜಿತಾ ಕೋಪದಿಂದ ಮದುವೆಗೆ ನಿರಾಕರಿಸಿದ ಹಿನ್ನೆಲೆ ರಫೀಕ್ ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಪ್ರಕರಣ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ರಫೀಕ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಯಲ್ಲಾಪುರ ಬಂದ್‌ಗೆ ಹಿಂದೂಪರ ಸಂಘಟನೆ ಕರೆ
ಘಟನೆ ತಿಳಿಯುತ್ತಿದ್ದಂತೆ ಯಲ್ಲಾಪುರ ಪೊಲೀಸ್ ಠಾಣೆ ಮುಂದೆ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದಾರೆ. ಎಸ್ಪಿ ಹಾಗೂ ಎಎಸ್ಪಿಯನ್ನ ತೆರಾಟೆಗೆ ತೆಗೆದುಕೊಂಢಿದ್ದಾರೆ. ಕೊಲೆ ಮಾಡಿ 3 ಗಂಟೆ ಕಳೆದಿದ್ದರೂ ಸಂಬಂಧಿಕರನ್ನ ಯಾಕೆ ವಿಚಾರಣೆ ಮಾಡಿಲ್ಲ. ಆರೋಪಿಯನ್ನೂ ಬಂಧಿಸಿಲ್ಲ. ಯಾಕೆ ತಡ ಮಾಡಲಾಗ್ತಿದೆ? ಎಂದು ಪ್ರಶ್ನೆ ಮಾಡಿದ್ರು. ಅಲ್ಲದೇ ರಫೀಕ್ ಕುಟುಂಬಸ್ಥರನ್ನ ಠಾಣೆಗೆ ಕರೆತಂದು ವಿಚಾರಣೆ ನಡೆಸುವಂತೆ ಪಟ್ಟು ಹಿಡಿದರು.
ಈ ಬೆನ್ನಲ್ಲೇ ಭಾನುವಾರ (ಜ.4) ಯಲ್ಲಾಪುರ ಪಟ್ಟಣ ಬಂದ್‌ಗೆ ಕರೆ ನೀಡಲು ಹಿಂದೂ ಸಂಘಟನೆ ಸಿದ್ಧತೆ ನಡೆಸಿದೆ. ಇನ್ನೂ ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಘಟನೆಯನ್ನ ಖಂಡಿಸಿದ್ದಾರೆ.


