ಚಂಡೀಗಢ: ದೇಶದ ಮೊದಲ ಹೈಡ್ರೋಜನ್ ರೈಲು (Hydrogen Train) ಜೀಂದ್‌ಗೆ ಆಗಮಿಸಿದ್ದು, ಇತಿಹಾಸದಲ್ಲಿ ಹೊಸ ಅಧ್ಯಾಯ ರಚಿಸುವತ್ತ ಸಿದ್ಧವಾಗಿದೆ. ಈ ರೈಲು ಜನವರಿ 20ರ ನಂತರ ಸೋನಿಪತ್ ಮಾರ್ಗದಲ್ಲಿ ಚಾಲನೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಹೈಡ್ರೋಜನ್ ರೈಲು ಆರಂಭವಾದರೆ ಜೀಂದ್ ಹೊಸ ತಂತ್ರಜ್ಞಾನ ಅಳವಡಿಸಿಕೊಂಡ ನಗರಗಳ ಸಾಲಿನಲ್ಲಿ ಸೇರ್ಪಡೆಯಾಗಲಿದೆ.
ಲಖನೌದ ಆರ್‌ಡಿಎಸ್‌ಓ (ಅನುಸಂಧಾನ ಮತ್ತು ಅಭಿವೃದ್ಧಿ ಸಂಸ್ಥೆ)ಯ ಎರಡು ತಂಡಗಳು ಜೀಂದ್‌ಗೆ ಆಗಮಿಸಿ, ರೈಲು ಮತ್ತು ಹೈಡ್ರೋಜನ್ ಘಟಕದ ಪರೀಕ್ಷೆ ನಡೆಸುತ್ತಿವೆ. ಪರೀಕ್ಷೆ ಪೂರ್ಣಗೊಂಡ ನಂತರ ರೈಲಿಗೆ ಹಸಿರು ನಿಶಾನೆ ನೀಡಲಾಗುವುದು. ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್ – 14 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ
ಸ್ವದೇಶಿ ತಂತ್ರಜ್ಞಾನದ ಮೇರುಕೃತಿ ಈ ರೈಲನ್ನು ಸಂಪೂರ್ಣವಾಗಿ ಭಾರತದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಬ್ರಾಡ್ ಗೇಜ್ ಮಾರ್ಗದಲ್ಲಿ ಚಲಿಸುವ ಇದು ವಿಶ್ವದ ಅತಿ ಉದ್ದದ (10 ಬೋಗಿಗಳು) ಮತ್ತು ಅತಿ ಶಕ್ತಿಶಾಲಿ (2400 ಕಿಲೋವಾಟ್) ಹೈಡ್ರೋಜನ್ ರೈಲಾಗಿದೆ. ಒಂದು ಬಾರಿಗೆ 2,500 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಈ ರೈಲು ಗರಿಷ್ಠ 140 ಕಿಮೀ ವೇಗದಲ್ಲಿ ಚಲಿಸಲಿದೆ. 360 ಕೆಜಿ ಹೈಡ್ರೋಜನ್‌ನಿಂದ 180 ಕಿಮೀ ದೂರ ಪ್ರಯಾಣಿಸಬಲ್ಲದು. ಇದರ ವೆಚ್ಚ ಸುಮಾರು 82 ಕೋಟಿ ರೂಪಾಯಿ. ಚೆನ್ನೈಯ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಬೋಗಿಗಳನ್ನು ತಯಾರಿಸಲಾಗಿದೆ.
ಜರ್ಮನಿ, ಜಪಾನ್, ದಕ್ಷಿಣ ಕೊರಿಯಾ, ಕೆನಡಾ, ಫ್ರಾನ್ಸ್, ಸ್ವೀಡನ್ ನಂತರ ಭಾರತ ಹೈಡ್ರೋಜನ್ ರೈಲು ಹೊಂದಿದ ಎಂಟನೇ ದೇಶವಾಗಲಿದೆ. ಪರಿಸರ ಸ್ನೇಹಿ ಮತ್ತು ಆಧುನಿಕ ಸೌಲಭ್ಯಗಳು ಈ ರೈಲು ಶೂನ್ಯ ಕಾರ್ಬನ್ ಡೈಆಕ್ಸೈಡ್ ಹೊರಸೂಸುತ್ತದೆ. ಕೇವಲ ನೀರು ಮತ್ತು ಆವಿಯನ್ನು ಮಾತ್ರ ಹೊರಹಾಕುತ್ತದೆ. ಮೆಟ್ರೋ ಶೈಲಿಯ ಬಾಗಿಲುಗಳು, ಶಬ್ದರಹಿತ ಚಲನೆ, ಎಸಿ, ಫ್ಯಾನ್, ಲೈಟ್ ಸೌಲಭ್ಯಗಳು, ಪ್ರತಿ ಬೋಗಿಯಲ್ಲಿ ಡಿಸ್‌ಪ್ಲೇ ಮೂಲಕ ಮುಂದಿನ ನಿಲ್ದಾಣ ಮಾಹಿತಿ – ಇವೆಲ್ಲವೂ ಪ್ರಯಾಣಿಕರಿಗೆ ಹೊಸ ಅನುಭವ ನೀಡಲಿವೆ.
ಡೀಸಲ್ ರೈಲುಗಳಿಗೆ ಹೋಲಿಸಿದರೆ ಇದು ಪರಿಸರಕ್ಕೆ ಸ್ನೇಹಿ ಮತ್ತು ಇಂಧನ ವೆಚ್ಚದಲ್ಲಿ ಉಳಿತಾಯ ಮಾಡಲಿದೆ. ಡೀಸಲ್ ರೈಲು 1 ಕಿಮೀಗೆ 4.5 ಲೀಟರ್ ಡೀಸಲ್ ಬಳಸುತ್ತದೆಯಾದರೆ, ಈ ರೈಲು 2 ಕೆಜಿ ಹೈಡ್ರೋಜನ್‌ನಲ್ಲಿ ಅದೇ ದೂರ ಕ್ರಮಿಸಲಿದೆ. ಜೀಂದ್‌ನ ಮೂರು ಮತ್ತು ದೆಹಲಿಯ ಇಬ್ಬರು ಲೋಕೋ ಪೈಲಟ್‌ಗಳಿಗೆ ಚೆನ್ನೈಯಲ್ಲಿ ತರಬೇತಿ ನೀಡಲಾಗಿದೆ. ನಂತರ ಜಲಂಧರ್‌ನಲ್ಲಿ ಹೆಚ್ಚಿನ ತರಬೇತಿ ನೀಡಲಾಗಿದೆ. ಇದನ್ನೂ ಓದಿ: ಹೊಸ ವರ್ಷದ ಮುನ್ನಾದಿನ ಅಮೆರಿಕದಲ್ಲಿ ಐಸಿಸ್ ಪ್ರೇರಿತ ದಾಳಿ ವಿಫಲ – ಅಪ್ರಾಪ್ತ ವಶಕ್ಕೆ
ಈ ಬಗ್ಗೆ ಮಾತನಾಡಿದ ರೈಲ್ವೆ ಅಧಿಕಾರಿ ಅಜಯ್ ಮೈಕಲ್, ರೈಲು ನಮ್ಮ ರೈಲು ನಿಲ್ದಾಣಕ್ಕೆ ಆಗಮಿಸಿದೆ. ಟ್ರ್ಯಾಕ್‌ನಲ್ಲಿ ಟ್ರಯಲ್ ನಂತರ ಚಾಲನೆ ಆರಂಭವಾಗಲಿದೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದರು. ಹೈಡ್ರೋಜನ್ ಘಟಕ ಮ್ಯಾನೇಜರ್ ಸಂಜಯ್ ಮಾತಮಾಡಿ, ನಮ್ಮ ತಯಾರಿ ಪೂರ್ಣವಾಗುತ್ತಿದೆ. ರೈಲ್ವೆಯಿಂದ ದಿನಾಂಕ ನಿಗದಿಯಾಗಬೇಕು. ಈ ಹೈಡ್ರೋಜನ್ ರೈಲು ಭಾರತದ ಸ್ವಚ್ಛ ಇಂಧನ ಕ್ರಾಂತಿಯಲ್ಲಿ ಮೈಲುಗಲ್ಲಾಗಲಿದೆ. ಪ್ರದೂಷಣರಹಿತ ಪ್ರಯಾಣದ ಹೊಸ ಯುಗಕ್ಕೆ ಜೀಂದ್ ಸಾಕ್ಷಿಯಾಗಲಿದೆ ಎಂದರು.

