ಹಾವೇರಿ: ರಾಜ್ಯದಲ್ಲಿಯ ಜನರು ಮತ್ತೊಮ್ಮೆ ಮಾನವೀಯತೆ ಮರೆತಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಾಮನಹಳ್ಳಿ ಕ್ರಾಸ್ ಬಳಿ ನಡೆದಿದೆ.
ಇಂದು ಬೆಳಗ್ಗೆ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಬಂದ ಸಫಾರಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವನಿಗೆ ಗಂಭೀರ ಗಾಯವಾಗಿದ್ದು, ಮೂವರಿಗೆ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಟ್ರ್ಯಾಕ್ಟರ್ ಚಾಲಕ ಅಭಿಷೇಕ್ (35) ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಅಭಿಷೇಕ್ ಬಾಯಿಯಿಂದ ಹಾಗು ಮೂಗಿನಿಂದ ರಕ್ತ ಸುರಿಯುತ್ತಿತ್ತು.
ತೀವ್ರವಾಗಿ ಗಾಯಗೊಂಡಿದ್ದ ಅಭಿಷೇಕ್ ನೀರು ನೀರು ಎಂದು ಕೇಳಿದ್ದರೂ, ಸ್ಥಳದಲ್ಲಿದ್ದ ಒಬ್ಬರೂ ನೀರು ಕೊಡದೇ ಮಾನವೀಯತೆಯನ್ನು ಮರೆತಿದ್ದಾರೆ. ನೀರು ಸಿಗದೇ ಇರುವ ವಿಚಾರ ತಿಳಿದು ಕೆಲ ನಿಮಿಷದ ಬಳಿಕ ಅಲ್ಲಿಗೆ ಆಗಮಿಸಿದ ವ್ಯಕ್ತಿಯೊಬ್ಬರು ನೀರು ನೀಡಿದ್ದಾರೆ.
ಅರ್ಧ ಗಂಟೆಯ ನಂತರ ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಬೆಂಗಳೂರು ಕಡೆಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.
ಈ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ನಡೆದ ಬಳಿಕದ ದೃಶ್ಯವನ್ನು ಸ್ಥಳೀಯರೊಬ್ಬರು ವಿಡಿಯೋ ಮಾಡಿ ಪಬ್ಲಿಕ್ ಟಿವಿಗೆ ನೀಡಿದ್ದಾರೆ.