ಬೆಂಗಳೂರು: ಹೊಸ ವರ್ಷಕ್ಕೆ (New Year) ಕೌಂಟ್‌ಡೌನ್ ಶುರುವಾಗಿದೆ. 2026ರ ಹೊಸವರ್ಷದ ವೆಲ್‌ಕಮ್‌ಗೆ ಸಿಲಿಕಾನ್ ಸಿಟಿ ಜನ ಸನ್ನದ್ಧರಾಗಿದ್ದಾರೆ. ಈಗಾಗಲೇ ನಗರದೆಲ್ಲೆಡೆ ಸಿಂಗಾರ, ಲೈಟಿಂಗ್ ಝಗಮಗಿಸುತ್ತಿದೆ. ಎಂಜಿ ರೋಡ್, ಬ್ರಿಗೇಡ್ ರೋಡ್ ಕಲರ್‌ಫುಲ್ ಲೈಟಿಂಗ್‌ನೊಂದಿಗೆ ಕಣ್ಮನ ಸೆಳೆಯುತ್ತಿದೆ. ಕೊರೆಯುವ ಚಳಿಯ ನಡುವೆಯು ಕೋರಮಂಗಲ (Koramangala) ಹಾಟ್ ಹಾಟ್ ಎನಿಸುತ್ತಿದೆ. ಅದ್ಭುತ ಲೋಕವೇ ಧರೆಗಿಳಿದಂತಿದೆ ಭಾಸವಾಗುತ್ತಿದೆ.
ಇಂದಿನ ಸೆಲೆಬ್ರೆಷನ್ ಹಾಟ್‌ಸ್ಪಾಟ್ ಅಂದ್ರೆ ಅದು ಬ್ರಿಗೇಡ್ ರೋಡ್, ಚರ್ಚ್‌ಸ್ಟ್ರೀಟ್. ಮಂಗಳವಾರದಿಂದಲೇ ಜನರು ಬ್ರಿಗೇಡ್ ರೋಡ್‌ಗೆ (Brigade Road) ವಿಸಿಟ್ ಮಾಡಿ ಸೆಲೆಬ್ರೆಷನ್ ಮೂಡ್‌ನಲ್ಲಿದ್ದಾರೆ. ಲೈಟಿಂಗ್ ರಂಗೇರಿಸಿದೆ. ಪಬ್, ಕ್ಲಬ್ ಕೈಬೀಸಿ ಕರೆಯುತ್ತಿದೆ. ಚಿಲ್ ಚಿಲ್ ಚಳಿಯ ನಡುವೆಯೂ ಮೋಜು ಮಸ್ತಿಗೆ ಏನು ಕೊರತೆ ಇಲ್ಲ.
ಬರಿ ಬ್ರಿಗೇಡ್ ರೊಡ್, ಚರ್ಚ್‌ಸ್ಟ್ರೀಟ್ (Church Street) ಅಲ್ಲದೇ ಇಂದಿರಾನಗರ, ಕೋರಮಂಗಲದಲ್ಲೂ ನ್ಯೂ ಇಯರ್‌ಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಖುದ್ದು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಎಲ್ಲಾ ಕಡೆಗಳಲ್ಲಿ ಹೋಗಿ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು.
ಹೊಸ ವರ್ಷಕ್ಕೆ ಅತಿಹೆಚ್ಚು ಜನ ಸೇರುವ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‌ಗಳಲ್ಲಿ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ, ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಎಂ ಹಾಕೆ, ಟ್ರಾಫಿಕ್ ಡಿಸಿಪಿ ಅನೂಪ್ ಶೆಟ್ಟಿ ಸ್ಥಳ ಪರಿಶೀಲನೆ ನಡೆಸಿದರು. ಹೊಸ ವರ್ಷದ ದಿನದಂದು ಯಾವುದೇ ಸಮಸ್ಯೆ ಆಗದಂತೆ ಈಗಾಗಲೇ ಸೂಕ್ತ ಬಂದೋಬಸ್ತ್ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸಿಸಿಟಿವಿಗಳು, ಮಹಿಳೆಯರ ಭದ್ರತೆಗಾಗಿಯೇ ಐಲ್ಯಾಂಡ್, ವಾಚ್ ಟವರ್, ಬ್ಯಾರಿಕೇಡ್, ಜೊತೆಗೆ ಹೊಸದಾಗಿ ಕ್ಯೂ ಆರ್ ಕೋಡ್‌ಗಳನ್ನು ರಸ್ತೆಯ ಪಕ್ಕದಲ್ಲಿ ಅಂಟಿಸಲಾಗಿದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ, ಎಲ್ಲಿ ಟ್ರಾಫಿಕ್ ಜಾಮ್ ಇದೆ, ಎಲ್ಲಿ ಪೊಲೀಸರು ಹತ್ತಿರದಲ್ಲಿ ಇದಾರೆ, ಪೊಲೀಸ್ ಠಾಣೆ ಎಲ್ಲಿದೆ, ಅಂಬುಲೆನ್ಸ್ ಎಲ್ಲಿ ಸೇರಿದಂತೆ ಅಗತ್ಯ ಮಾಹಿತಿಗಳು ಸಿಗುತ್ತವೆ. ಹೆಚ್ಚುವರಿ 360 ಸಿಸಿಟಿವಿಗಳು ಅದಕ್ಕೆ ತಾತ್ಕಾಲಿಕ ಮಾನಿಟರ್ ವ್ಯವಸ್ಥೆ ಮಾಡಲಾಗಿದ್ದು, ಬರೇ ಕೇಂದ್ರ ವಿಭಾಗ ಒಂದರಲ್ಲೇ ಬರೋಬ್ಬರಿ ಅರು ಸಾವಿರ ಸಿಸಿಟಿವಿಗಳು ಅಳವಡಿಕೆ ಮಾಡಲಾಗಿದೆ.
ಹೊಸ ವರ್ಷಾಚರಣೆಗೆ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ನತ್ತ ತೆರಳುವವರಿಗೆ ಮಾರ್ಗಸೂಚಿಗಳೇನು ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.
ನ್ಯೂಇಯರ್ ಸೆಲಬ್ರೇಷನ್‌ಗೆ ಪ್ರವೇಶ ಹೇಗೆ?
ಎಂ.ಜಿ ರಸ್ತೆ: ಎಲ್‌ಐಸಿ ಕಟ್ಟಡದ ಬಳಿ, ಅನಿಲ್ ಕುಂಬ್ಳೆ ವೃತ್ತದಿಂದ ಎಂಟ್ರಿ
ಚರ್ಚ್ ಸ್ಟ್ರೀಟ್: ಕೆ.ಸಿ.ದಾಸ್ ಬಳಿ ಪ್ರವೇಶ
ಬ್ರಿಗೇಡ್ ರಸ್ತೆ: ಕಾವೇರಿ ಜಂಕ್ಷನ್‌ನಲ್ಲಿ ಪ್ರವೇಶ
ಮೇಯೊ ಹಾಲ್ ಜಂಕ್ಷನ್: ಕಾವೇರಿ ಜಂಕ್ಷನ್‌ವರೆಗೆ ಪ್ರವೇಶಕ್ಕೆ ಅವಕಾಶ
ಕಾಮರಾಜ್ ರಸ್ತೆ: ಕಾವೇರಿ ಎಂಪೋರಿಯಂ ಕಡೆ ಪ್ರವೇಶ ನಿರ್ಬಂಧ
ನಿರ್ಗಮನ ಮಾರ್ಗಗಳು:
ಒಪೇರಾ ಜಂಕ್ಷನ್
ರೆಸಿಡೆನ್ಸಿ ರಸ್ತೆ
ಮೆಯೋ ಹಾಲ್
ಟ್ರಿನಿಟಿ ಮೆಟ್ರೋ/ ಟ್ಯಾಕ್ಸಿ ಪಾಯಿಂಟ್‌ಗಳ ಮೂಲಕ ನಿರ್ಗಮನ
ಇಂದು ರಾತ್ರಿ 8ರಿಂದ ನಾಳೆ ಬೆಳಿಗ್ಗೆ 1ರವರೆಗೆ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರಸ್ತೆಗಳಲ್ಲಿ ಪಾದಚಾರಿಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ನಿರ್ಗಮಿಸಿದ ನಂತರ ಬ್ರಿಗೇಡ್ ರಸ್ತೆಗೆ ಮರುಪ್ರವೇಶಿಸಲು ಅನುಮತಿ ಇರುವುದಿಲ್ಲ. ಕಬ್ಬನ್ ರಸ್ತೆ, ಟ್ರಿನಿಟಿ ಮೆಟ್ರೋ, ಬಿಆರ್‌ವಿ ಜಂಕ್ಷನ್, ಕ್ವೀನ್ಸ್ ರಸ್ತೆ ಮತ್ತು ರಾಜಭವನ ರಸ್ತೆಯಲ್ಲಿ ಗೊತ್ತುಪಡಿಸಿದ ಪಾಯಿಂಟ್‌ಗಳಲ್ಲಿ ಮಾತ್ರ ಪಿಕ್-ಅಪ್/ಡ್ರಾಪ್ ಮಾಡಬಹುದು. ಇನ್ನು, ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣವು ರಾತ್ರಿ 10 ಗಂಟೆಗೆ ಮುಚ್ಚುತ್ತದೆ. ಕಬ್ಬನ್ ಪಾರ್ಕ್ ಅಥವಾ ಟ್ರಿನಿಟಿ ಮೆಟ್ರೋ ನಿಲ್ದಾಣಗಳನ್ನು ಬಳಸಬೇಕು. ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸ್ಟ್ ಹೌಸ್ ರಸ್ತೆ, ಮ್ಯೂಸಿಯಂ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ. ಉಲ್ಲಂಘಿಸಿದರೆ ಟೋಯಿಂಗ್ ಮಾಡಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇನ್ನು ಸ್ಥಳದಲ್ಲಿ 400ಕ್ಕೂ ಅಧಿಕ ಕ್ಯಾಮೆರಾಗಳು ಮತ್ತು 3 ಸಾವಿರಕ್ಕೂ ಅಧಿಕ ಖಾಸಗಿ ಸಿಸಿಟಿವಿ ಫೀಡ್‌ಗಳನ್ನ ಕಮಾಂಡ್ ಸೆಂಟರ್‌ನೊಂದಿಗೆ ಸಂಯೋಜಿಸಲಾಗಿದೆ. ಅಲ್ಲಲ್ಲಿ ಕ್ಯೂಆರ್ ಕೋಡ್‌ಗಳನ್ನ ಅಳವಡಿಸಲಾಗಿದ್ದು, ಸ್ಕ್ಯಾನ್ ಮಾಡುವ ಮೂಲಕ ಸಾರ್ವಜನಿಕರು ಬೆಂಗಳೂರು ನಗರ ಪೊಲೀಸ್ ಇಲಾಖೆಯ ವೆಬ್‌ಸೈಟ್ ಪ್ರವೇಶಿಸಿ ಸಲಹೆ-ಸೂಚನೆಗಳನ್ನು ಪಡೆಯಬಹುದು.


