ಕಣ್ಣುಮುಚ್ಚಿ ಬಿಡುಷ್ಟರಲ್ಲಿ 2025 ಮುಗಿದೇ ಹೋಯಿತು. ಈ ವರ್ಷ ಎಲ್ಲಾ ಕ್ಷೇತ್ರಗಳಲ್ಲಿ ಬಹಳಷ್ಟು ಬೆಳವಣಿಗೆಗಳಾಗಿವೆ. ಈ ಪೈಕಿ ರಾಜಕೀಯ ಕ್ಷೇತ್ರದಲ್ಲೂ ಅನೇಕ ಮಹತ್ವದ ಬೆಳವಣಿಗೆಗಳು ನಡೆದಿವೆ. ಚುನಾವಣೆಗಳು, ಎಸ್‌ಐಆರ್, ಮತಗಳ್ಳತನ ಆರೋಪ, ಮಸೂದೆಗಳ ತಿದ್ದುಪಡಿ ಹೀಗೆ ಹತ್ತು ಹಲವು ರಾಜಕೀಯ ಘಟನೆಗಳು 2025ರಲ್ಲಿ ನಡೆದಿದೆ. ಹೊಸ ವರ್ಷ ಆರಂಭಕ್ಕೂ ಮುನ್ನ ಈ ವರ್ಷ ರಾಜಕೀಯ ವಲಯದಲ್ಲಿ ನಡೆದ ಪ್ರಮುಖ ಘಟನೆಗಳ ಒಂದು ಹಿನ್ನೋಟ ಇಲ್ಲಿದೆ.
ದೆಹಲಿ ವಿಧಾನಸಭಾ ಚುನಾವಣೆ:
70 ಸ್ಥಾನಗಳ ದೆಹಲಿ ವಿಧಾನಸಭೆಗೆ ಫೆಬ್ರವರಿ 5ರಂದು ಮತದಾನ ನಡೆಯಿತು. ಫೆಬ್ರವರಿ 8ರಂದು ಫಲಿತಾಂಶ ಪ್ರಕಟವಾದವು. ಸುಮಾರು ಮೂರು ದಶಕಗಳ ನಂತರರಾಷ್ಟ್ರ ರಾಜಧಾನಿಯಲ್ಲಿ 48 ಸ್ಥಾನಗಳನ್ನು ಗೆದ್ದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂತು. ಆಮ್ ಆದ್ಮಿ ಪಕ್ಷ (ಎಎಪಿ) 22 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ ಯಾವುದೇ ಸೀಟ್ ಗೆಲ್ಲಲು ವಿಫಲವಾಯಿತು.ಈ ಮೂಲಕ ಆಮ್ ಆದ್ಮಿ ಪಕ್ಷ ಬಲಿಷ್ಠ ಕೋಟೆ ಎನ್ನಲಾಗಿದ್ದ ದೆಹಲಿಯಲ್ಲಿ ಆ ಪಕ್ಷದ 10 ವರ್ಷಗಳ ಆಡಳಿತ ಕೊನೆಗೊಂಡಿತು. ರೇಖಾ ಗುಪ್ತಾ ಫೆಬ್ರವರಿ 20ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಬಿಹಾರ ಚುನಾವಣೆ:
ನವೆಂಬರ್‌ನಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಬಹುಮತ ಗಳಿಸಿ ಮತ್ತೆ ಅಧಿಕಾರಕ್ಕೇರಿತು. ಆಡಳಿತಾರೂಢ ಹಾಗೂ ವಿರೋಧ ಪಕ್ಷಗಳ ಪ್ರಚಾರ, ಆರೋಪ-ಪ್ರತ್ಯಾರೋಪಗಳಿಂದ ಈ ಚುನಾವಣೆ ದೇಶದ ಗಮನ ಸೆಳೆಯಿತು. 243 ಸದಸ್ಯಬಲದ ವಿಧಾನಸಭೆಯಲ್ಲಿ ಎನ್‌ಡಿಎ 202 ಸ್ಥಾನಗಳನ್ನು ಜಯಿಸಿತು. ಬಿಹಾರ ಚುನಾವಣೆಯಲ್ಲಿ ಬಿಜೆಪಿ 89 ಸ್ಥಾನಗಳನ್ನು ಗಳಿಸಿತು. ನಿತೀಶ್ ಕುಮಾರ್ ಸತತ 10ನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಸಾಮ್ರಾಟ್ ಚೌಧರಿ ಹಾಗೂ ವಿಜಯ್ ಕುಮಾರ್ ಸಿನ್ಹಾ ಉಪಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡರು. ಇದೇ ಸಂದರ್ಭ ಲಾಲೂ ಪ್ರಸಾದ್ ಯಾದವ್ ಅವರ ಕೌಟುಂಬಿಕ ಕಲಹ ಕೂಡ ಬೀದಿಗೆ ಬಂತು.
ಧನಕರ್ ದಿಢೀರ್ ರಾಜೀನಾಮೆ:
ಜುಲೈ 21ರಂದು ಜಗದೀಪ್ ಧನಕರ್ ಅನಾರೋಗ್ಯದ ಕಾರಣ ನೀಡಿ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಂವಿಧಾನದ ಪ್ರಕಾರ, ಇದಕ್ಕೆ ಅವಧಿಪೂರ್ವ ಚುನಾವಣೆ ಅಗತ್ಯವಾಗಿತ್ತು. ಸಂಸತ್ತಿನ ಉಭಯ ಸದನಗಳ ಸದಸ್ಯರು ಸೆಪ್ಟೆಂಬರ್ 9ರಂದು ಮತ ಚಲಾಯಿಸಿದರು. ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ 452 ಮತಗಳೊಂದಿಗೆ ಚುನಾವಣೆಯಲ್ಲಿ ಗೆದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿ 300 ಮತಗಳೊಂದಿಗೆ ಸೋಲನ್ನು ಅನುಭವಿಸಿದರು. ರಾಧಾಕೃಷ್ಣನ್ ಭಾರತದ 15ನೇ ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.
ಮತಗಳವು ವಿವಾದ:
ದೆಹಲಿ ವಿಧಾನಸಭೆ ಚುನಾವಣೆ ವೇಳೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ತಾವು ಸ್ಪರ್ಧಿಸಿದ ನವದೆಹಲಿ ಕ್ಷೇತ್ರದಲ್ಲಿ ಬೇರೆ ಕ್ಷೇತ್ರದ ಮತದಾರರನ್ನು ಸೇರಿಸಲಾಗಿದೆ ಮತ್ತು ತಮ್ಮ ಕ್ಷೇತ್ರದ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿದರು. ಅದಾದ ಬಳಿಕ ವಿರೋಧ ಪಕ್ಷದ ಒಬ್ಬೊಬ್ಬರೇ ನಾಯಕರು ಇಂಥ ಆರೋಪಗಳನ್ನು ಮಾಡಿದರು. ಮಹಾರಾಷ್ಟ್ರ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಮಹಾಮೋಸ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿ, ಪತ್ರಿಕೆಗಳಿಗೆ ಲೇಖನಗಳನ್ನೂ ಬರೆದರು. ಬಿಹಾರ ಚುನಾವಣೆಯಲ್ಲಿ ಚುನಾವಣಾ ಆಯೋಗ ಅಕ್ರಮ ನಡೆಸಲಿದೆ. ಜೊತೆಗೆ ಲೋಕಸಭೆ ಚುನಾವಣೆಯಲ್ಲಿ 70-100 ಸ್ಥಾನಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು. ಮತಗಳ್ಳತನದ ಸ್ವರೂಪದ ಬಗ್ಗೆ ಆಗಸ್ಟ್‌ನಿಂದ ನಾಲ್ಕು ಪಿಪಿಟಿ ಪ್ರೆಸೆಂಟೇಷನ್ ಸಹಿತ ನಾಲ್ಕು ಪತ್ರಿಕಾಗೋಷ್ಠಿ ನಡೆಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಮಾಡಿದ ಎಲ್ಲಾ ಆರೋಪಗಳನ್ನು ಚುನಾವಣಾ ಆಯೋಗ ತಳ್ಳಿಹಾಕಿತು. ಮತಗಳ್ಳತನವನ್ನು ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ, ಸಹಿ ಸಂಗ್ರಹ ಅಭಿಯಾನ ಮಾಡಿತು. ಸಂಸತ್ ಅಧಿವೇಶನದ ವೇಳೆಯೂ ಈ ಬಗ್ಗೆ ಚರ್ಚೆಗೆ ಅವಕಾಶ ಕೋರಲಾಯಿತು. ಆದರೆ ಇದಕ್ಕೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡಲಿಲ್ಲ.
ಸದ್ದು ಮಾಡಿದ ಎಸ್‌ಐಆರ್:
ಮತಗಳುವು ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿತು. ಇದನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿದವು. ನಿರ್ದಿಷ್ಟ ಮತದಾರರನ್ನು ಪಟ್ಟಿಯಿಂದ ಕೈಬಿಡುವ ತಂತ್ರವಿದು ಎಂದು ವಿರೋಧ ಪಕ್ಷಗಳು ದೂರಿದವು. ಈ ಬಳಿಕ ದೇಶಾದ್ಯಂತ ಎಸ್‌ಐಆರ್ ನಡೆಸಲು ಆಯೋಗ ಮುಂದಾಯಿತು. ಸದ್ಯ 9 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಅಸ್ಸಾಂನಲ್ಲಿ ಬೇರೆ ವಿಧಾನದಲ್ಲಿ ಎಸ್‌ಐಆರ್ ನಡೆಸಲಾಗುತ್ತಿದೆ. ಇದನ್ನೂ ಕಾಂಗ್ರೆಸ್ ವಿರೋಧಿಸಿದೆ.
ವಕ್ಫ್ ತಿದ್ದುಪಡಿ ಕಾಯ್ದೆ:
2025ರ ವಕ್ಫ್ ತಿದ್ದುಪಡಿ ಕಾಯ್ದೆ ದೇಶದ ರಾಜಕಾರಣದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿತು. ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ನಡೆಯಿತು. ಪಶ್ಚಿಮ ಬಂಗಾಳ ಸೇರಿ ದೇಶದ ಹಲವು ಭಾಗಗಳಲ್ಲಿ ಹಿಂಸಾಚಾರವೂ ನಡೆಯಿತು.
ನರೇಗಾ ಮರುನಾಮಕರಣ:
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬದಲಿಗೆ ʼವಿಕಸಿತ ಭಾರತ-ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆ 2025 ಅನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿತು. ಇದನ್ನು ವಿಪಕ್ಷಗಳು ವಿರೋಧಿಸಿತು. ಆದರೆ ವಿರೋಧದ ನಡುವೆಯೂ ಎರಡೂ ಸದನಗಳಲ್ಲಿ ಇದು ಅಂಗೀಕಾರ ಪಡೆದು ರಾಷ್ಟ್ರಪತಿ ಅಂಕಿತವನ್ನೂ ಪಡೆಯಿತು.
ಜಾತಿ ಜನಗಣತಿ:
ಅನೇಕ ರಾಜ್ಯಗಳು 2025 ರಲ್ಲಿ ಜಾತಿ ಜನಗಣತಿಯ ಬೇಡಿಕೆಯನ್ನು ತೀವ್ರಗೊಳಿಸಿವೆ. ಕೋವಿಡ್ ಕಾರಣದಿಂದಾಗಿ 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಮುಂದೂಡಲಾಯಿತು. 2027ರ ಜನಗಣತಿಗಾಗಿ ಕೇಂದ್ರ ಸಚಿವ ಸಂಪುಟವು 11,718 ಕೋಟಿ ರೂ.ಗಳ ಬಜೆಟ್ ಅನ್ನು ಅನುಮೋದಿಸಿದೆ. 2026-27 ರಲ್ಲಿ ದೇಶಾದ್ಯಂತ 2 ಹಂತಗಳಲ್ಲಿ ಜನಗಣತಿ ನಡೆಸಲಾಗುವುದು. ಈ ಜನಗಣತಿಯ ಭಾಗವಾಗಿ ಜಾತಿ ಗಣತಿಯನ್ನು ಸಹ ಮಾಡಬೇಕೆಂದು ರಾಜಕೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಈ ಹಿಂದೆ ನಿರ್ಧರಿಸಿತ್ತು. ಆದ್ದರಿಂದ ಈ ಬಾರಿ ಜಾತಿ ಡೇಟಾವನ್ನು ಸಹ ಎಲೆಕ್ಟ್ರಾನಿಕ್ ಮೂಲಕ ಸಂಗ್ರಹಿಸಲಾಗುವುದು. ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹ ಜಾತಿ ಜನಗಣತಿ ನಡೆಸಲಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಅಯೋಧ್ಯೆಯಲ್ಲಿ ಧರ್ಮಧ್ವಜ ಸ್ಥಾಪನೆ:
ದೇಶದ ಆಧ್ಯಾತ್ಮಿಕ ಶಕ್ತಿ ಕೇಂದ್ರ, ಸಮಸ್ತ ಭಾರತೀಯರ ಶ್ರದ್ಧಾ ಕೇಂದ್ರವಾಗಿರುವ ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡಿರುವ ಸಂಕೇತವಾಗಿ, ಪ್ರಧಾನಿ ಮೋದಿ ಅವರು ನ.25ರಂದು ದೇವಸ್ಥಾನದ ಗೋಪುರದ ಮೇಲೆ ಧರ್ಮ ಧ್ವಜವನ್ನು ಸ್ಥಾಪನೆ ಮಾಡಿದ್ದಾರೆ. ಈ ಐತಿಹಾಸಿಕ ಧಾರ್ಮಿಕ ಸಮಾರಂಭವು ದೇಶದ ಆಧ್ಯಾತ್ಮಿಕ ಒಗ್ಗಟ್ಟನ್ನು ಪ್ರದರ್ಶಿಸಿದೆ. ಈ ಕಾರ್ಯಕ್ರಮ ರಾಮ ಮತ್ತು ಸೀತೆಯ ವಿವಾಹ ಪಂಚಮಿಯ ಮುಹೂರ್ತ ದಿನದಂದು ನಡೆದಿರುವುದು ವಿಶೇಷ.
100 ವರ್ಷ ಪೂರೈಸಿದ ಆರ್‌ಎಸ್‌ಎಸ್:
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) 100 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಅ.1ರಂದು ದೆಹಲಿಯ ಡಾ. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಶತಮಾನೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಈ ಸಂದರ್ಭದಲ್ಲಿ ವಿಶೇಷ ಅಂಚೆ ಚೀಟಿ ಮತ್ತು 100 ರೂಪಾಯಿ ನಾಣ್ಯವನ್ನ ಬಿಡುಗಡೆ ಮಾಡಿದರು. ಇದು ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ವಿಶೇಷ ಲಾಂಛನ ಹೊಂದಿರುವ ನಾಣ್ಯವಾಗಿದೆ.











