ಚಿಕ್ಕಮಗಳೂರು: ಹೊಸ ವರ್ಷದ (New Year) ಆಚರಣೆಗೆ ಕಾಫಿನಾಡಿನ (Chikkamagaluru) ರೆಸಾರ್ಟ್ ಹಾಗೂ ಹೋಂ ಸ್ಟೇಗಳು ನವ ವಧುವಿನಂತೆ ಸಿಂಗಾರಗೊಂಡಿವೆ. ಅದರೆ, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಎತ್ತಿನಭುಜ, ದೇವರಮನೆಗುಡ್ಡ ಹಾಗೂ ಜಲಪಾತಗಳು ಸೇರಿದಂತೆ 22 ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ (Tourist) ತಾತ್ಕಾಲಿಕವಾಗಿ ನಿರ್ಬಂಧ ಹೇರಿದೆ.
ಇದೇ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಿಗ್ಗೆ 6 ಗಂಟೆಯವರೆಗೆ 22 ಪ್ರವಾಸಿ ತಾಣಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆಯವರ ಮನವಿ ಮೇರೆಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿ ಆದೇಶಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಹೊಸ ವರ್ಷಾಚರಣೆಗಾಗಿ ಕಾಫಿನಾಡಿಗೆ ಲಗ್ಗೆ ಇಡುತ್ತಿರೋ ಪ್ರವಾಸಿಗರ ದಂಡು
ಈ ಆದೇಶದನ್ವಯ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ, ಝರಿ ಫಾಲ್ಸ್, ಹೊನ್ನಮ್ಮನಹಳ್ಳ, ಗಾಳಿಕೆರೆ, ಹಿರೇಕೊಳಲೆ ಕೆರೆ, ಡೈಮಂಡ್ ಫಾಲ್ಸ್, ಎತ್ತಿನಭುಜ, ದೇವರಮನೆ, ರಾಣಿಝರಿ, ಬಳ್ಳಾಳರಾಯನ ದುರ್ಗ, ಕೆಮ್ಮಣ್ಣುಗುಂಡಿ, ಕಲ್ಲತ್ತಿಗರಿ, ಬಂಡಾಜೆ ಫಾಲ್ಸ್, ಕೂಡಿಗೆ ಫಾಲ್ಸ್, ಕ್ಯಾತನಮಕ್ಕಿ, ರುದ್ರಪಾದ, ತೂಗು ಸೇತುವೆ, ಅಬ್ಬುಗುಡಿಗೆ ಫಾಲ್ಸ್, ಅಯ್ಯನಕೆರೆ, ಮದಗದಕೆರೆ ಹಾಗೂ ಹೆಬ್ಬೆ ಜಲಪಾತಕ್ಕೂ ಪ್ರವಾಸಿಗರನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಹೊಸ ವರ್ಷದ ಸಂದರ್ಭದಲ್ಲಿ ಈಗಾಗಲೇ ಆನ್‌ಲೈನ್ ಮೂಲಕ ಹೋಂ ಸ್ಟೇ ಅಥವಾ ರೆಸಾರ್ಟ್‌ಗಳನ್ನು ಕಾಯ್ದಿರಿಸಿದ ಪ್ರವಾಸಿಗರಿಗೆ ಮಾತ್ರ ಆಯಾ ಸ್ಥಳಗಳಿಗೆ ಹೋಗಲು ಅವಕಾಶವಿರುತ್ತದೆ. ಉಳಿದಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಜಾವರೈನ್ ಚೆಕ್ ಪೋಸ್ಟ್‌ನಿಂದ ಗಿರಿಯ ಮೇಲ್ಭಾಗಕ್ಕೆ ಪ್ರವಾಸಿಗರು ತೆರಳುವುದನ್ನು ನಿರ್ಬಂಧಿಸಲಾಗಿದೆ. ಪ್ರವಾಸಿಗರು ಕುಡಿದ ಮತ್ತಿನಲ್ಲಿ ಹೊಸ ವರ್ಷದ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸಬಾರದೆಂದು ಜಿಲ್ಲಾಡಳಿತ ಈ ನಿರ್ಧಾರಕ್ಕೆ ಮುಂದಾಗಿದೆ. ಇದನ್ನೂ ಓದಿ: ಕೃಷ್ಣಮೃಗ ಬೇಟೆ ಪ್ರಕರಣ – 7 ದಿನದೊಳಗೆ ವರದಿ ಸಲ್ಲಿಸುವಂತೆ ಸಚಿವ ಖಂಡ್ರೆ ಸೂಚನೆ


