ಭಾರತೀಯ ಚಿತ್ರರಂಗದಲ್ಲಿ ‘ಪ್ಯಾನ್ ಇಂಡಿಯಾ’ ಸಿನಿಮಾಗಳ ಅಬ್ಬರ ಜೋರಾಗಿದೆ. ವಿಶ್ವದಾದ್ಯಂತ ಮನ್ನಣೆ ಗಳಿಸಿ ಸಿನಿಮಾಗಳು ನೂರಾರು ಕೋಟಿ ಕ್ಲಬ್ ಸೇರುತ್ತಿವೆ. ನೆಲ, ಸಂಸ್ಕೃತಿ, ಭಾಷೆ ಗಡಿಯನ್ನೂ ಮೀರಿ ಸಿನಿಮಾಗಳು ಯಶಸ್ಸು ಕಾಣುತ್ತಿವೆ. ವಿಭಿನ್ನ ಸ್ಕ್ರಿಪ್ಟ್, ಉತ್ತಮ ಸ್ಕ್ರೀನ್ ಪ್ಲೇ, ಹೊಸ ತಂತ್ರಜ್ಞಾನ, ಅದ್ಭುತ ಮೇಕಿಂಗ್ನೊಂದಿಗೆ ಸಿನಿಮಾಗಳು ಜನಮನಸ್ಸನ್ನು ಗೆಲ್ಲುತ್ತಿವೆ. ಪ್ಯಾನ್ ಇಂಡಿಯಾ ಸಿನಿಮಾಗಳು ಭಾರತ ಅಷ್ಟೇ ಅಲ್ಲ, ವಿದೇಶಗಳಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿವೆ. 2025ರ ಆರಂಭದಿಂದ ಅಂತ್ಯದವರೆಗೆ ತೆರೆ ಕಂಡು ಜನಮೆಚ್ಚುಗೆ ಗಳಿಸಿ ಬ್ಲಾಕ್ಬಸ್ಟರ್, ಸೂಪರ್ ಹಿಟ್ ಸಿನಿಮಾಗಳು ಯಾವುವು? ಗಳಿಸಿದ ಹಣ ಎಷ್ಟು? ಟಾಪ್ 10 ಸಿನಿಮಾಗಳು ಪಟ್ಟಿ ಇಲ್ಲಿವೆ.
ಧುರಂಧರ್
ನಿರ್ದೇಶಕ ಆದಿತ್ಯ ಧರ್ ಅವರ ಸ್ಪೈ ಆಕ್ಷನ್ ಥ್ರಿಲ್ಲರ್ ‘ಧುರಂಧರ್’ 2025 ರಲ್ಲಿ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿ ಹೊರಹೊಮ್ಮಿದೆ. ರಣ್ವೀರ್ ಸಿಂಗ್ ಅದ್ಭುತ ನಟನೆಯ ಧುರಂಧರ್ ಈ ವರ್ಷದ ಅತಿದೊಡ್ಡ ಭಾರತೀಯ ಬ್ಲಾಕ್ಬಸ್ಟರ್ ಸಿನಿಮಾವಾಗಿದೆ. ಅದರ ರಾಕ್-ಸಾಲಿಡ್ ಡೇ ಕಲೆಕ್ಷನ್ ಸಿನಿರಂಗವನ್ನೇ ದಿಗ್ಭ್ರಮೆಗೊಳಿಸಿದೆ. ವಿಶ್ವಾದ್ಯಂತ ಬಾಕ್ಸಾಫೀಸ್ನಲ್ಲಿ 1000+ ಕೋಟಿ ಗಳಿಕೆಯ ಮೈಲಿಗಲ್ಲಿನತ್ತ ಧುರಂಧರ್ ದಾಪುಗಾಲಿಟ್ಟಿದ್ದು, ನಿಧಾನವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇದು 2025 ರ ಟಾಪ್ ಒನ್ ಭಾರತೀಯ ಚಿತ್ರ ಮತ್ತು ಎಲೈಟ್ ಕ್ಲಬ್ಗೆ ಸೇರಿದ ಸಾರ್ವಕಾಲಿಕ ಒಂಬತ್ತನೇ ಚಿತ್ರವಾಗಿದೆ. ಸಿನಿಮಾದ ಸದ್ಯದ ಟ್ರೆಂಡ್ ಗಮನಿಸಿದರೆ, ಜಾಗತಿಕವಾಗಿ 1200 ಕೋಟಿಗೂ ಹೆಚ್ಚು ಗಳಿಕೆಯೊಂದಿಗೆ ತನ್ನ ಥಿಯೇಟ್ರಿಕಲ್ ಓಟವನ್ನು ಕೊನೆಗೊಳಿಸುವ ಸಾಧ್ಯತೆಯಿದೆ. ದೇಶಭಕ್ತಿ, ಪಾಕಿಸ್ತಾನದ ಭೂಗತ ಜಗತ್ತು, ಬೇಹುಗಾರಿಕೆ ಕಥೆಯನ್ನು ಹೊಂದಿರುವ ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಕಾಂತಾರ ಚಾಪ್ಟರ್ 1
ಈ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ರಿಷಬ್ ಶೆಟ್ಟಿ ಅವರ ‘ಕಾಂತಾರ: ಚಾಪ್ಟರ್ 1’. 2022 ರಲ್ಲಿ ರಿಲೀಸ್ ಆಗಿ ಬ್ಲಾಕ್ಬಸ್ಟರ್ ಹಿಟ್ ಕಂಡ ಕಾಂತಾರ ಚಿತ್ರದ ಪ್ರಿಕ್ವೆಲ್ ಇದಾಗಿದೆ. ಕಾಂತಾರ ಚಾಪ್ಟ್ 1 ಸಿನಿಮಾ 2025ರ ಅಕ್ಟೋಬರ್ 2 ರಂದು ರಿಲೀಸ್ ಆಗಿ ಭಾರಿ ಸಕ್ಸಸ್ ಕಂಡಿದೆ. 50 ದಿನಗಳನ್ನು ಸಹ ಪೂರೈಸಿದೆ. ಜಗತ್ತಿನಾದ್ಯಂತ 7,000ಕ್ಕೂ ಹೆಚ್ಚು ಪರದೆಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿತು. ಕನ್ನಡ ಸಂಸ್ಕೃತಿ, ಕಾಡಂಚಿನ ಬುಡಕಟ್ಟು ಜನರು ಮತ್ತು ಉಳ್ಳವರು, ಅಧಿಕಾರಿಗಳ ನಡುವಿನ ದೈವದ ಸಂಘರ್ಷವನ್ನು ಸಿನಿಮಾದಲ್ಲಿ ಅದ್ಭುತವಾಗಿ ತೆರೆದಿಡಲಾಗಿದೆ. ಜಾಗತಿಕವಾಗಿ ಸಿನಿಮಾ 850 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಛಾವಾ
ಫೆಬ್ರವರಿಯಲ್ಲಿ ಬಿಡುಗಡೆಯಾದ ವಿಕಿ ಕೌಶಲ್ ಅವರ ಐತಿಹಾಸಿಕ ಆಕ್ಷನ್ ‘ಛಾವಾ’ ಬ್ಲಾಕ್ಬಸ್ಟರ್ ಹಿಂಟ್ ಕಂಡ ಸಿನಿಮಾ. ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನ ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ. ಮರಾಠ ಸಾಮ್ರಾಜ್ಯದ ಶೌರ್ಯ, ತಂತ್ರಗಳು, ಮೊಘಲರ ದಾಳಿ.. ಹೀಗೆ ಮರಾಠರ ಯುದ್ಧ ತಂತ್ರಗಳನ್ನು ಸಿನಿಮಾದಲ್ಲಿ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅದ್ಭುತವಾಗಿ ನಟಿಸಿದ್ದಾರೆ. ಐತಿಹಾಸಿಕ ಘಟನೆ ಆಧರಿಸಿದ ಸಿನಿಮಾವು ಜಗತ್ತಿನಾದ್ಯಂತ 800 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ.
ಸೈಯಾರ
ಫೈಟ್, ಬಿಲ್ಡಪ್, ಯುದ್ಧದ ಸನ್ನಿವೇಶ, ಗ್ರಾಫಿಕ್ಸ್ನಿಂದಷ್ಟೇ ಬಾಕ್ಸಾಫೀಸ್ನಲ್ಲಿ ಸದ್ದು ಮಾಡುತ್ತಿರುವ ಸಿನಿಮಾಗಳ ಮಧ್ಯೆ ರೊಮ್ಯಾಂಟಿಕ್ ‘ಸೈಯಾರ’ ಅಚ್ಚರಿಯ ಮತ್ತು ಅಸಾಧಾರಣ ಯಶಸ್ಸು ಕಂಡಿತು. ಯಶ್ ರಾಜ್ ಫಿಲ್ಮ್ಸ್ನ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹೊಸ ಜೋಡಿಯಾಗಿ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಬಾಲಿವುಡ್ನಲ್ಲಿ ಮೋಡಿ ಮಾಡಿದರು. ಮ್ಯೂಸಿಕಲ್ ಲವ್ ಸ್ಟೋರಿ ಮೂಲಕ ಈಗಿನ ಯುವಪೀಳಿಗೆಗೆ ಕಿಕ್ ಕೊಟ್ಟ ಸಿನಿಮಾವಿದು. ಹೊಸ ನಾಯಕ ಮತ್ತು ನಾಯಕಿ ಜೋಡಿ ಸಿನಿಮಾರಂಗಕ್ಕೆ ಭರವಸೆ ಮೂಡಿಸಿದೆ. ಅದ್ಭುತ ಲವ್ ಸ್ಟೋರಿ ಮೂಲಕವೇ ಸಿನಿಮಾ ಜಗತ್ತಿನಾದ್ಯಂತ 600 ಕೋಟಿ ರೂ.ಗೂ ಹೆಚ್ಚು ಕ್ಲಬ್ ಸೇರಿತು.
ಕೂಲಿ
ಸೂಪರ್ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ಗ್ಯಾಂಗ್ಸ್ಟರ್ ಆಕ್ಷನ್ ‘ಕೂಲಿ’ ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಸಾಲಿನಲ್ಲಿದೆ. ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ರಜನಿಕಾಂತ್ ಅವರಿಗಾಗಿ ಈ ಸಿನಿಮಾ ನಿರ್ಮಿಸಲಾಗಿತ್ತು. 74ರ ಹರೆಯದಲ್ಲೂ ನಟ ಸೂಪರ್ಸ್ಟಾರ್ ಆಗಿಯೇ ಸಿನಿಮಾದಲ್ಲಿ ಮಿಂಚಿದ್ದಾರೆ. ಡ್ಯಾನ್ಸ್, ಫೈಟ್, ಡೈಲಾಗ್ಸ್, ಭಾವನಾತ್ಮಕ ದೃಶ್ಯಗಳು ರಜನಿ ಫ್ಯಾನ್ಸ್ಗೆ ಮುದ ನೀಡಿವೆ. ಆಮೀರ್ ಖಾನ್, ನಾಗಾರ್ಜುನ ಅಕ್ಕಿನೇನಿ, ಉಪೇಂದ್ರ, ಸೌಬಿನ್ ಶಾಹೀರ್, ಪೂಜಾ ಹೆಗ್ಡೆ, ಶೃತಿ ಹಾಸನ್, ರಚಿತಾ ರಾಮ್.. ಮಲ್ಟಿಸ್ಟಾರ್ಗಳು ಕೂಡ ಸಿನಿಮಾದಲ್ಲಿ ಅಬ್ಬರಿಸಿದ್ದಾರೆ. ಸಿನಿಮಾ ಬಾಕ್ಸಾಫೀಸ್ನಲ್ಲಿ 500ಕ್ಕೂ ಹೆಚ್ಚು ಕೋಟಿ ಗಳಿಸಿದೆ.
ವಾರ್ 2
ಅಯಾನ್ ಮುಖರ್ಜಿ ನಿರ್ದೇಶನದ ಸ್ಟಾರರ್ ಹೃತಿಕ್ ರೋಷನ್ ಮತ್ತು ಜೂ.ಎನ್ಟಿಆರ್ ಅಭಿನಯದ ‘ವಾರ್ 2’ ಸಿನಿಮಾ ಆ.14 ರಂದು ರಿಲೀಸ್ ಆಗಿ ಬಾಕ್ಸಾಫೀಸ್ನಲ್ಲಿ ಸದ್ದು ಮಾಡಿತು. ರಾ ಏಜೆಂಟ್ ಆಗಿ ಹೃತಿಕ್ ಸಿನಿಮಾದಲ್ಲಿ ಮೋಡಿ ಮಾಡಿದ್ದಾರೆ. ಸಿನಿಮಾಗಳಲ್ಲಿ ನಾಯಕ ನಟನಾಗಿ ಮಿಂಚಿದ್ದ ಜೂ.ಎನ್ಟಿಆರ್ ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡು ಮಿಂಚಿದ್ದಾರೆ. ಕಿಯಾರಾ ಅಡ್ವಾಣಿ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉತ್ತಮ ಸ್ಕ್ರೀನ್ಪ್ಲೇ ಹೊಂದಿದ್ದ ಚಿತ್ರ 364 ಕೋಟಿ ರೂ. ಗಳಿಸಿದೆ.
ಮಹಾವತಾರ ನರಸಿಂಹ
ಆಕ್ಷನ್, ಥ್ರಿಲ್ಲರ್, ಲವ್, ಬಿಲ್ಡಪ್ಗಳಿಂದಲೇ ಅಬ್ಬರಿಸುವ ಈಗಿನ ಕಾಲಘಟ್ಟದ ಸಿನಿಮಾಗಳಲ್ಲಿ ಪೌರಾಣಿಕ ಕಥೆಯನ್ನಾಧರಿಸಿ ಸಕ್ಸಸ್ ಕಂಡ ಚಿತ್ರ ‘ಮಹಾವತಾರ ನರಸಿಂಹ’ (ಹೊಂಬಾಳೆ ಫಿಲ್ಮ್ಸ್ ನಿರ್ಮಾಣ). ಅತೀ ಹೆಚ್ಚು ಗಳಿಕೆ ಕಂಡ ಭಾರತದ ಮೊಟ್ಟ ಮೊದಲ ಆ್ಯನಿಮೇಷನ್ ಚಿತ್ರ ಎಂಬ ಕೀರ್ತಿಗೆ ಪಾತ್ರವಾಗಿದೆ. ಭಕ್ತಿ, ಕ್ರೌರ್ಯ, ದೈವತ್ವವನ್ನು ಸಿನಿಮಾದಲ್ಲಿ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಆಧುನಿಕ ತಂತ್ರಜ್ಞಾನವನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಲಾಗಿದೆ. ರಾಜ್ಕುಮಾರ್ ಅಭಿನಯದ ‘ಭಕ್ತ ಪ್ರಹ್ಲಾದ’ ಸಿನಿಮಾವನ್ನು ನೆನಪಿಸುವಂತಿದ್ದರೂ, ‘ಮಹಾವತಾರ ನರಸಿಂಹ’ ತನ್ನದೇ ಆದ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹೊಸತಲೆಮಾರಿನವರಿಗೆ ಒಗ್ಗುವಂತೆ ಟೆಕ್ನಾಲಜಿ ಬಳಸಿಕೊಂಡು ಚಿತ್ರ ನಿರ್ಮಿಸಲಾಗಿದೆ. ಸಿನಿಮಾ 327 ಕೋಟಿ ರೂ. ಗಳಿಕೆ ಕಂಡಿದೆ.
ಲೋಕಃ ಚಾಪ್ಟರ್ 1- ಚಂದ್ರ
ಕಲ್ಯಾಣಿ ಪ್ರಿಯದರ್ಶನ್ ನಟನೆಯ ಮಲಯಾಳಂ ಸಿನಿಮಾ ‘ಲೋಕಃ ಚಾಪ್ಟರ್ 1- ಚಂದ್ರ’ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡಿದ ಚಿತ್ರಗಳಲ್ಲೊಂದು. ಮಹಿಳಾ ನಾಯಕಿ ಪ್ರಧಾನವಾಗಿ ಕಾಣಿಸಿಕೊಂಡಿರುವ ಮೊದಲ ಸಿನಿಮಾವಿದು. ಮಹಿಳಾ ಸೂಪರ್ ಹೀರೋ ಎಂಬ ಹಾಲಿವುಡ್ ಮಾದರಿಯ ಫ್ಯಾಂಟರಿಯನ್ನು ಇಲ್ಲಿಯೂ ತಂದು ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸಿನಿಮಾ ಉತ್ತಮ ಪ್ರದರ್ಶನ ಮತ್ತು ಗಳಿಕೆ ಕಂಡರೂ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿತ್ತು. ಚಿತ್ರದ ಬಹುಪಾಲು ಚಿತ್ರೀಕರಣ ಬೆಂಗಳೂರಿನಲ್ಲೇ ಆಗಿದೆ. ಬೆಂಗಳೂರು ಮತ್ತು ಕರ್ನಾಟಕದ ಮಹಿಳೆಯರನ್ನು ಕೆಟ್ಟ ಪದದಲ್ಲಿ ನಿಂದಿಸಿ ವಿವಾದಕ್ಕೆ ಕಾರಣವಾಗಿತ್ತು. ನಂತರ ಚಿತ್ರತಂಡ ಅಚಾತುರ್ಯಕ್ಕೆ ಕ್ಷಮೆಯಾಚಿಸಿತು. ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ 304 ಕೋಟಿ ಕಲೆಕ್ಷನ್ ಮಾಡಿದೆ.
ಓಜಿ
ತೆಲುಗು ಪವರ್ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ‘ಓಜಿ’ ಸಿನಿಮಾ ಚಿತ್ರರಂಗದಲ್ಲಿ ಸೂಪರ್ ಕಮ್ಬ್ಯಾಕ್ ಮಾಡಿತು. ಮಾಸ್ ಅವತಾರದಲ್ಲಿ ಪವನ್ ಕಾಣಿಸಿಕೊಂಡು ಪ್ರೇಕ್ಷಕರ ಮನಗೆದ್ದರು. ‘ಸಾಹೋ’ ಸುಜಿತ್ ಈ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡರು. ಗಳಿಕೆಯಲ್ಲೂ ಸಿನಿಮಾ ದಾಖಲೆ ಬರೆದಿತ್ತು. ರಿಲೀಸ್ ಆದ ಮೊದಲ ದಿನವೇ ಭರ್ತಿ 150 ಕೋಟಿ ರೂ. ಕಲೆಕ್ಷನ್ ಮಾಡಿ ರೆಕಾರ್ಡ್ ಬರೆದಿತ್ತು.
ಹೌಸ್ಫುಲ್ 5
ಒಂದೇ ಸಿನಿಮಾದಲ್ಲಿ ಎರಡು ಕ್ಲೈಮ್ಯಾಕ್ಸ್ ಹೊಂದಿದ್ದ ‘ಹೌಸ್ಫುಲ್-5’ ಪ್ರಯೋಗಾತ್ಮಕ ಸಿನಿಮಾಗಳ ಸಾಲಿನಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಹೌಸ್ಫುಲ್ ಸರಣಿಯ ಮೊದಲ ಸಿನಿಮಾ 2010ರಲ್ಲಿ ತೆರೆಕಂಡಿತ್ತು. ಈ ಸರಣಿಯ ಐದನೇ ಸಿನಿಮಾ 2025ರಲ್ಲಿ ರಿಲೀಸ್ ಆಯಿತು. ಕಾಮಿಡಿ ಥ್ರಿಲ್ಲರ್ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ಒಮ್ಮೆ ನೋಡಿದರೂ, ಸಿನಿಮಾದ ಹಲವು ಕುತೂಹಲಗಳನ್ನು ಅರಿತುಕೊಳ್ಳಲು ಮತ್ತೊಮ್ಮೆ ನೋಡಬೇಕೆಂಬ ಭಾವನೆ ಪ್ರೇಕ್ಷಕರಲ್ಲಿ ಮೂಡಿಸುವಂತಿದೆ ಸಿನಿಮಾ. ಇದರಲ್ಲಿ ಅಕ್ಷಯ್ ಕುಮಾರ್, ರಿತೇಶ್ ದೇಶ್ಮುಖ್, ಜಾಕ್ವೆಲಿನ್ ಫರ್ನಾಂಡಿಸ್, ಜಾಕಿ ಶ್ರಾಫ್, ಸಂಜಯ್ ದತ್, ಅಭಿಷೇಕ್ ಬಚ್ಚನ್ ದೊಡ್ಡ ತಾರಾಬಳಗವೇ ಇದೆ. ಸಿನಿಮಾ 289 ಕೋಟಿ ರೂ. ಗಳಿಸಿದೆ.










