ಮೈಸೂರು: ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದ (Mysuru Helium Cylinder Blast) ಪೊಲೀಸ್ ತನಿಖೆ ಚುರುಕುಗೊಂಡಿದ್ದು ಹಲವು ಅನುಮಾನಗಳು ಈಗ ಹುಟ್ಟಿಕೊಂಡಿವೆ.
ಸ್ಫೋಟದ ತೀವ್ರತೆಗೆ ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ಹೀಲಿಯಂ ಬಲೂನ್ ಮಾರುತ್ತಿದ್ದ ಕೋಲ್ಕತ್ತಾ ಮೂಲದ ಸಲೀಂ (40) ಮೃತಪಟ್ಟಿದ್ದು, ಮೃತದೇಹ ಛಿದ್ರ-ಛಿದ್ರವಾಗಿದೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯದ ಲಕ್ಷ್ಮಿ, ನಂಜನಗೂಡಿನ ಮಂಜುಳಾ, ಕೋಲ್ಕತ್ತಾದ ಶಮಿನಾ ಶಬಿಲ್, ರಾಣಿ ಬೆನ್ನೂರಿನ ಕೊಟ್ರೇಶ್ ಅವರಿಗೆ ಗಂಭೀರ ಗಾಯವಾಗಿದೆ. ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಅರಮನೆ ಮಂಡಳಿಯು ಕ್ರಿಸ್‌ಮಸ್ ರಜೆ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿರುವ 10 ದಿನಗಳ ‘ಮಾಗಿ ಉತ್ಸವ’– ಫಲಪುಷ್ಪ ಪ್ರದರ್ಶನ ಭಾನುವಾರ ಆರಂಭಗೊಂಡಿದ್ದು ಪ್ರತಿದಿನ ರಾತ್ರಿ ಸಂಗೀತ ಕಾರ್ಯಕ್ರಮ ಆಯೋಜನೆಗೊಂಡಿದೆ. ನಿನ್ನೆ ರಾತ್ರಿ ವಾಸುಕಿ ವೈಭವ್ ತಂಡದ ಕಾರ್ಯಕ್ರಮ ನಡೆಯುತ್ತಿರುವಾಗಲೇ ಸಿಲಿಂಡರ್ ಸ್ಫೋಟ ಸಂಭವಿಸಿತ್ತು. ಹೀಗಾಗಿ ವಾಸುಕಿ ವೈಭವ್ ಅವರ ಕಾರ್ಯಕ್ರಮವನ್ನು ಅರ್ಧದಲ್ಲೇ ನಿಲ್ಲಿಸಲಾಗಿತ್ತು.
ಅನುಮಾನ ಯಾಕೆ?
ಸೈಕಲ್‌ನಲ್ಲಿ ಹೀಲಿಯಂ ಬಲೂನ್ ಮಾರುತ್ತಿದ್ದಾಗ ರಾತ್ರಿ 8:30ರ ವೇಳೆಗೆ ಸಿಲಿಂಡರ್ ಸ್ಫೋಟವಾಗಿದೆ. ಪ್ರತ್ಯಕ್ಷದರ್ಶಿ ಅರಮನೆಯ ಗೈಡ್ ನೀಡಿದ ಮಾಹಿತಿ ಪ್ರಕಾರ ಬಲೂನ್ ಮಾರಾಟಗಾರ ಅರಮನೆ ಮುಂಭಾಗದಲ್ಲಿ ನಿಂತು ಯಾವತ್ತೂ ಬಲೂನ್ ಮಾರುತ್ತಿರಲಿಲ್ಲ. ಆತ ಬಂದ ಕೂಡಲೇ ಸ್ಫೋಟ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಗುರುವಾರವೂ ಈ ಜಾಗದಲ್ಲಿ ನಿಂತು ಬಲೂನು ಮಾರಾಟ ಮಾಡಿರಲಿಲ್ಲ. ಹಾಗಾದರೆ ಅರಮನೆ ಮುಂಭಾಗವೇ ಹೀಲಿಯಂ ಸಿಲಿಂಡರ್ ಸ್ಪೋಟ ಯಾಕಾಯ್ತು ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: Chitradurga Bus Accident | ಮೃತರ ಬೋನ್ ಸ್ಯಾಂಪಲ್ ಸಂಗ್ರಹ – ಡಿಎನ್‌ಎ ವರದಿ ಬಳಿಕ ಶವ ಹಸ್ತಾಂತರ
ಅರಮನೆ ಬಳಿ ವಸ್ತುಗಳನ್ನು ಮಾರಾಟ ಮಾಡುವವರು ಸಾಮಾನ್ಯವಾಗಿ ಮೈಸೂರಿನ ಅಸುಪಾಸಿನ ಜನರೇ ಆಗಿರುತ್ತಾರೆ. ಈಗ ಬಲೂನ್ ಮಾರುತ್ತಿದ್ದ ವ್ಯಕ್ತಿಯ ಹಿನ್ನೆಲೆ ಕೆದಕಲು ಪೊಲೀಸರು ಮುಂದಾಗಿದ್ದಾರೆ. ಕೋಲ್ಕತ್ತಾ ಮೂಲದ ಸಲೀಂ ಮೈಸೂರಿಗೆ ಬಂದಿದ್ದು ಯಾವಾಗ? ಎಷ್ಟು ಸಮಯದಿಂದ ಬಲೂನ್ ಮಾರುತ್ತಿದ್ದ? ಅರಮನೆ ಮುಂಭಾಗವೇ ಸಲೀಂ ನಿರಂತರವಾಗಿ ಬಲೂನ್ ಮಾರುತ್ತಿದ್ದನೇ ಅಥವಾ ನಿನ್ನೆ ಮೊದಲು ಬಂದಿದ್ದ ಎಂಬ ಪ್ರಶ್ನೆಗೆ ಉತ್ತರ ತಿಳಿಯಲು ತನಿಖೆ ಚುರುಕುಗೊಳಿಸಿದ್ದಾರೆ.

