ಫೀನಿಕ್ಸ್ (Phoenix) ಹೆಸರೂ ಕೇಳೇ ಇರುತ್ತೀರಿ…. ಈ ವರ್ಷದ ಕೊನೆಯಲ್ಲಿ ಮತ್ತೊಮ್ಮೆ ಕೇಳಿ…! ಕಳೆದು ಹೋದ ಎಲ್ಲವನ್ನೂ ಉರಿಸಿ ಮತ್ತೆ ಎದ್ದು ಹೊಸ ಜೀವವಾಗುವುದು ಅದೆಷ್ಟು ಮುಖ್ಯ! ಹೀಗಂತ ಅವಳು ಅವನಿಗೆ ಗೈಡ್ ಮಾಡ್ತಿರೋದು ನನ್ನ ಕಿವಿಗೆ ಬಿತ್ತು.. ಪಾರ್ಕ್‌ನಲ್ಲಿ (Park) ಕುಳಿತಿದ್ದ ನಾನು.. ಆ ಕಡೆ ತಿರುಗಿದ್ರೆ.. ಗಮನಿಸ್ತಿದಿನಿ ಅಂತ ಅವರಿಗೆ ಗೊತ್ತಾಗಿ ಸುಮ್ನಾಗ್ಬಿಡ್ತಾರೆ ಅಂತ ಆ ಕಡೆ ತಿರುಗದೇ ಹೆಡ್‌ಫೋನ್ ಹಾಕಿ ಹಾಡು ಕೇಳುವವನಂತೆ ನಟಿಸುತ್ತ ಕಣ್ಮುಚ್ಚಿ ಕುಳಿತೆ!
ಆಕೆ ಸಮಾಧಾನ ಮಾಡ್ತಿದ್ದಿದ್ದು… ತನ್ನ ತಮ್ಮನಿಗೆ… ಅವನ ಹುಡುಗಿ ಕೊನೆವರೆಗೂ ಇರ್ತಿನಿ ಅಂತ ಹೇಳಿ ಮೊನ್ನೆ ಇವನಿಗಿಂತ ಸ್ವಲ್ಪ ರಿಚ್ ಆಗಿದ್ದವನನ್ನ ಮದುವೆ ಆದಳಂತೆ.. ಅದಕ್ಕೆ ಅವನು ಮಂಕಾಗಿ ಹೋಗಿದ್ದಾನೆ.. ಮಗು ತರ ಅವನಕ್ಕ ತಿಳಿ ಹೇಳ್ತಿದ್ಲು…. ಹೆಣ್ಣು ಹುಟ್ಟಿನಿಂದಲೇ ತಾಯಿ ಆಗೋದೇ ಹೀಗೆ ನೋಡಿ..! ಅವಳಿಗೆ ಅದೆಷ್ಟು ಮಮಕಾರ ಅಂದ್ರೆ… ಅವಳ ಮಾತುಗಳನ್ನ ಕೇಳಿದ್ರೆ ನಿಮಗೂ ಹೀಗೆ ಅನ್ನಿಸಬಹುದು. ಇದನ್ನೂ ಓದಿ: ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!
ಲವ್ (Love) ಅಂದ್ರೆ ವಂಚನೆ ಅಲ್ಲ… ಆದ್ರೂ ಬಿಟ್ಟು ಹೋಗಿದ್ದಾಳೆ (Breakup) ನೀನು ಬಿಟ್ಬಿಡು.. 2025 ಕಳೆದೇ ಹೋಯ್ತು… 2026ಕ್ಕೆ (New Year 2026) ವಿಶ್ವವೇ ಅಣಿಯಾಗುತ್ತಿದೆ. ನೀನ್ಯಾಕೆ 2025ರಲ್ಲೇ ಉಳಿಯಬೇಕು? ಜಸ್ಟ್ ಮೂವ್.. ಅವಳಲ್ಲಿ ಬಿಟ್ಟು ಹೋಗಿ ಖುಷಿಯಿಂದ ಬದುಕು ಕಟ್ಟಿಕೊಳ್ಳುವಾಗ ನೀನ್ಯಾಕೆ ಅದೇ ನೆನಪಿಗೆ ಅಂಟಿಕೊಂಡು ಕೊರಗಬೇಕು? ಅಣ್ಣವ್ರು (Dr.Rajkumar) ಹೇಳಿದ್ದು ನೆನಪಿಲ್ವಾ? ʻಸಣ್ಣ ಬಿರುಕು ಸಾಲದೇ.. ತುಂಬು ದೋಣಿ ತಳ ಸೇರಲುʼ ಈ ಕ್ಷುಲ್ಲಕ ನೆನಪು.. ಅವಳ ವಂಚನೆಯ ಪ್ರೇಮಕ್ಕೆ ಯಾಕಿಷ್ಟು ಪ್ರಾಮುಖ್ಯತೆಯ ನೋವು?
ಹಾಗಂತ ನೀನವಳನ್ನು ದ್ವೇಷಿಸಬೇಕು ಅಂತ ಹೇಳ್ತಿಲ್ಲ.. ಬುದ್ಧ ಹೇಳಿದ್ದ ಮಾತನ್ನ ನೀನೇ ಹೇಳ್ತಿದ್ಯಲ್ಲ.. ʻತಿರಸ್ಕಾರಕ್ಕೆ ತಿರಸ್ಕಾರವೇ ಮದ್ದಲ್ಲ.. ಪ್ರೇಮವೇ ದಿವ್ಯೌಷಧʼ ಅಂತ.. ನೆನಪು ಮಾಡ್ಕೋ.. ನಿನ್ನ ಪ್ರೀತಿ ನಿಜ ಅಷ್ಟೇ.. ಅದನ್ನ ಖುಷಿಯಿಂದ ಬದುಕು.. ಯಾರೋ ಮಾಡಿದ ವಂಚನೆಯನ್ನಲ್ಲ.. ಅದಕ್ಕೆ ಅವರ ಸಾವಿರ ಕಾರಣವಿರಲಿ ಬಿಡು.. ನಿನಗೆ ಕೊನೆ ತನಕ ಒಂದು ತೃಪ್ತಿ ಇರತ್ತೆ, ನಂಬಿಸಿ ನಾನು ಮೋಸ ಮಾಡಿಲ್ಲ ಅಂತ.. ಆ ತೃಪ್ತಿ ಬಹಳ ದೊಡ್ಡದು..! ಇಷ್ಟಕ್ಕೂ ಅವಳು ನಿನ್ನನ್ನು ಯಾಕೆ ಪ್ರೀತಿಸ್ಬೇಕು? ಈ ಪ್ರಶ್ನೆಗೆ ಉತ್ತರ ಕೂಡ ನಿನಗೆ ಕೊಡೋಕಾಗಲ್ಲ..! ಇದನ್ನೂ ಓದಿ: ಇದಕ್ಕೆಲ್ಲ ಯಾವ ಸಂಬಂಧದ ಹೆಸರಿಡ್ಬೇಡ ಪ್ಲೀಸ್!
ಇಷ್ಟಕ್ಕೂ ನಿನ್ನ ಪ್ರೀತಿ ನಿಜವೇ ಆದ್ರೆ ಅವಳ ತಿರಸ್ಕಾರ ನಿನಗೆ ಖುಷಿ ಕೊಡ್ಬೇಕು! ಅವಳ ಖುಷಿಯೇ ಮುಖ್ಯ ಅಂತ ಆದ್ರೆ ಹೋಗಲಿ ಬಿಡು.. ಚಿಟ್ಟೆಯನ್ನ ನಿನ್ನ ಮುಷ್ಠಿಯಲ್ಲಿ ಗಟ್ಟಿಯಾಗಿ ಹಿಡಿದು ಪ್ರೀತಿ ಅಂದ್ರೆ ಅದು ಮತ್ತೆ ಹಾರುತ್ತಾ? ಆ ಬಣ್ಣದ ಚಿಟ್ಟೆಗೆ ಬೇರೆ ಏನೋ ಆಯ್ಕೆ… ಬಿಡು. ಜನ ಊಟ ಮಾಡುವಾಗ ತಟ್ಟೆಯಲ್ಲಿ ಏನೋ ಸಿಕ್ರೆ ಊಟವನ್ನೇ ಬಿಟ್ಟು ಬಿಡ್ತಾರೆ.. ಹಾಗೆ ನಿನ್ನ ಪ್ರೀತಿಯಲ್ಲೂ ಅಂತಹ ಕಳಂಕ ಅವಳಿಗೆ ಯಾವುದೋ ಕಂಡಿರಬಹುದು.. ಹಾಗಂತ ಅವಳದ್ದು ತಪ್ಪು ಅನ್ನೋಕಾಗಲ್ಲ. ನಿನ್ನದೂ ತಪ್ಪು ಅಂತಿಲ್ಲ ನಾನು..! ನಿನ್ನ ನಗು ಅವಳಿಗೊಂದಷ್ಟು ಸಮಾಧಾನ ಕೊಡುವುದಾದರೆ ನೋಡು.. ಮರೆತು ನಕ್ಕು ಬಿಡು..
ಪ್ರೀತಿಸುವಾಗ ಆಯ್ಕೆಗಳು ಇರಬಾರದು.. ನಿಜ.. ನಿನಗಿಂತ ಅನುಕೂಲಸ್ಥ ಸಿಕ್ಕ ತಕ್ಷಣ ನಾನು ಬದಲಾಗ್ಬಿಡ್ತೀನಿ.. ನಿನ್ನ ಜಾತಿಯ ಲೆಕ್ಕಾಚಾರ ಹಾಕ್ತೀನಿ.. ನಿನಗಿಂತ ಸುಂದರಿ ಸಿಕ್ಕರೆ ಅವಳಕಡೆ ಜಾರಿ ಬಿಡ್ತೀನಿ.. ಯಾರೋ ಗೌರ್ಮೆಂಟ್ ಕೆಲಸದವನಂತೆ.. ಕೇಳ್ಕೊಂಡು ಬಂದಿದಾನಂತೆ ಮನೆಗೆ, ಏನೋ ಇಬ್ಬರ ನಡುವೆ ಗಲಾಟೆ ಆಯ್ತು… ಅದನ್ನೇ ದೊಡ್ಡದು ಮಾಡಿ ಅವನು / ಅವಳು.. ಇದನ್ನೇ ನೆಪ ಮಾಡಿ ದೂರ ಆಗ್ಬಿಡೋಣ ಅನ್ನೋ ವಿಷ ಒಂಚೂರೂ ಇರಬಾರದು.. ಅದಕ್ಕೆಲ್ಲ ಪ್ರೀತಿಯೇ ಮದ್ದಾಗಬೇಕು. ಹಾಗಂತ ಅವನು / ಅವಳು ಎಷ್ಟೇ ಹಿಂಸೆ ಕೊಟ್ರೂ ಜೊತೆಲೇ ಇರ್ತೀನಿ ಅನ್ನೋ ಆಲದಮರದ ನೇಣು ಆಗಬಾರದು! ಪ್ರೇಮಿಸೋ ಮುನ್ನ, ಪ್ರೀತಿಸಿದವರನ್ನ ದೂರ ಮಾಡುವ ಮುನ್ನ ನಿರ್ಧಾರ ಸರಿಯಾಗೇ ಇರಲಿ.
ಕಳದುಕೊಂಡವ್ರು ಅಂತಹ ನೆನಪಲ್ಲೇ ಕಳೆದುಹೋಗಬೇಕಿಲ್ಲ.. ಬರುತ್ತಿರುವ ಹೊಸ ವರ್ಷನಾ ಹೊಸ ಹುರುಪಿಂದಲೇ ಸ್ವಾಗತಿಸೋಣ.. ಪ್ರೀತಿ ಹೇಗೆ ಒಂದು ಜವಾಬ್ದಾರಿಯೋ, ಹಾಗೇ ಬದುಕು ಸಹ.. ಪ್ರೀತಿಗೆ ಯಾರೋ ವಂಚಿಸಿದರು ಅಂತ ಬದುಕಿಗ್ಯಾಕೆ ವಂಚಿಸಬೇಕು ಅಲ್ವಾ..? ಎಲ್ಲವನ್ನೂ ಸುಟ್ಟು ಮತ್ತೆ ಹೊಸ ಜೀವತಾಳುವ ಫೀನಿಕ್ಸ್ ಆಗುವ ಕಾಲ ಬಂದಿದೆ! ಈ ವರ್ಷ ತುಂಬಾ ಖುಷಿಯಾಗಿರಲಿ..
ಸರಿ ನನಗೆ ಸಂಜೆ ಲಂಡನ್‌ಗೆ ಫ್ಲೈಟ್ ಇದೇ ಏರ್‌ಪೋರ್ಟ್‌ಗೆ ಡ್ರಾಪ್ ಮಾಡುವಾಗ ಇದೆಲ್ಲ ನೋವಿಂದ ಹೊರಗೆ ಬಂದಿರೋ ನಿನ್ನ ಕಣ್ಣಗಳನ್ನ ನೋಡಿ ಆಗಸದಲ್ಲಿ ತೇಲ್ಬೇಕು… ಅವಳು ಕೌನ್ಸೆಲಿಂಗ್ ಮುಗಿಸಿ ಹೊರಟಾಗ ಅವಳ ತಮ್ಮನ ಮೌನ, ಹೂಂ ಎಂದು ಕೊನೆ ಆಯ್ತು! ಹೀಗೆ ಅವಳ ಕೌನ್ಸೆಲಿಂಗ್ ಒಂದಷ್ಟು ಒಡೆದ ಹೃದಯಗಳಿಗೆ ಮದ್ದಾಗಬಹುದು ಎಂದು ಇಲ್ಲಿ ಹಂಚಿಕೊಂಡಿದ್ದೇನೆ. ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
– ಗೋಪಾಲಕೃಷ್ಣ



