ಪ್ರತಿಯೊಂದು ದೇವಾಲಯ ಅದರದ್ದೇ ಆದ ಇತಿಹಾಸ, ಮಹತ್ವ ಹಾಗೂ ಶಕ್ತಿಯನ್ನು ಹೊಂದಿರುತ್ತದೆ. ಇಂತಹ ಸುಮಾರು ಕಾರ್ಣಿಕವುಳ್ಳ ದೇವಾಲಯಗಳು ನಮ್ಮ ಭಾರತದಲ್ಲಿವೆ. ಇಂಥದ್ದೇ ಒಂದು ಕೃಷ್ಣನ ದೇವಾಲಯ ಹಿಮಾಚಲ ಪ್ರದೇಶದಲ್ಲಿದೆ. ಇದು ವಿಶ್ವದ ಅತ್ಯಂತ ಎತ್ತರದ ಶ್ರೀಕೃಷ್ಣನ ದೇವಾಲಯ ಎಂಬ ಖ್ಯಾತಿಯನ್ನು ಹೊಂದಿದೆ. ಹಾಗಿದ್ರೆ ಈ ದೇವಾಲಯದ ವಿಶೇಷತೆ ಏನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ದೇವಾಲಯ ಎಲ್ಲಿದೆ?
ಹಿಮಾಚಲ ಪ್ರದೇಶವನ್ನು ದೇವತೆಗಳ ನಾಡು ಎಂದು ಕರೆಯಲಾಗುತ್ತದೆ. ಇಲ್ಲಿ ನೂರಾರು ದೇವಾಲಯಗಳಿವೆ. ಕಾಂಗ್ರಾದಿಂದ ಕಿನ್ನೌರ್‌ವರೆಗೆ, ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಹಲವಾರು ಶಕ್ತಿಪೀಠಗಳಿವೆ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಯುಲ್ಲಾ ಕಾಂಡದ ಸರೋವರದ ಮಧ್ಯದಲ್ಲಿ ಶ್ರೀಕೃಷ್ಣನ ಒಂದು ಸಣ್ಣ ದೇವಾಲಯವಿದೆ. ಇದನ್ನು ಯುಲ್ಲಾ ಕಾಂಡ್ ಶ್ರೀಕೃಷ್ಣನ ದೇವಾಲಯ ಎಂದು ಸಹ ಕರೆಯುತ್ತಾರೆ. ಪುರಾಣಗಳ ಪ್ರಕಾರ, ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಸರೋವರದ ಮಧ್ಯದಲ್ಲಿ ಈ ದೇವಾಲಯವನ್ನು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಇದನ್ನು ಭಾರತದ ಹಾಗೂ ಪ್ರಪಂಚದ ಅತಿ ಎತ್ತರದ ಶ್ರೀಕೃಷ್ಣನ ದೇವಾಲಯ ಎಂದು ಗುರುತಿಸಲಾಗಿದೆ.
ಸಮುದ್ರ ಮಟ್ಟದಿಂದ 12,000 ಅಡಿ ಎತ್ತರ:
ಅಂದಹಾಗೆ, ಶ್ರೀಕೃಷ್ಣನ ಅತಿ ಎತ್ತರದಲ್ಲಿರುವ ಈ ದೇವಾಲಯವು, ಸಮುದ್ರಮಟ್ಟದಿಂದ ಸುಮಾರು 12,000 ಅಡಿ ಎತ್ತರದಲ್ಲಿದೆ. ಇದೊಂದು ಪ್ರಾಚೀನ ಆಲಯವಾಗಿದ್ದು, ಅಲ್ಲಿಗೆ ತಲುಪಲು 14 ಕಿ.ಮೀ ದೂರ ಕಾಲ್ನಡಿಗೆಯ ಮೂಲಕ ಹೋಗಬೇಕಾಗುತ್ತದೆ. ಒಬ್ಬರು ದೇವಾಲಯಕ್ಕೆ ತಲುಪಲು ಬಹಳ ಕಷ್ಟಪಡಬೇಕು. ಆದರೆ ಶ್ರೀಕೃಷ್ಣನ ಮೇಲಿರುವ ನಂಬಿಕೆ ಹಾಗೂ ಭಕ್ತಿಯು ಮಾರ್ಗವನ್ನು ಸುಲಭಗೊಳಿಸುತ್ತದೆ ಎಂದು ಭಕ್ತರು ನಂಬುತ್ತಾರೆ.
ಕೃಷ್ಣ ಜನ್ಮಾಷ್ಟಮಿಯಂದು ಸಾವಿರಾರು ಭಕ್ತರು ಈ ಒಂದು ಸಣ್ಣ ದೇವಾಲಯಕ್ಕೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ದೇವಾಲಯದ ಸಮಿತಿಯು ಭಕ್ತರಿಗಾಗಿ ಆಹಾರ, ವಾಸ್ತವ್ಯವನ್ನು ಕಲ್ಪಿಸುತ್ತಾರೆ. ಕೃಷ್ಣ ಜನ್ಮಾಷ್ಟಮಿಯ ಹಿಂದಿನ ದಿನವೇ ಭಕ್ತರು ಜಾನಪದ ಗೀತೆಗಳು ಮತ್ತು ಮಂತ್ರಗಳನ್ನು ಪಠಿಸುತ್ತಾ 15 ಕಿಲೋಮೀಟರ್ ನಡೆದು ಸರಾಯ್ ಭವನವನ್ನು ತಲುಪುತ್ತಾರೆ. ನಂತರ ಅವರು ಮರುದಿನ ಪೂಜೆ ಸಲ್ಲಿಸುತ್ತಾರೆ.
ಇಲ್ಲಿ ಯುಲ್ಲಾ ಕಾಂಡದ ಜನ್ಮಾಷ್ಟಮಿ ಬಹಳ ಪ್ರಸಿದ್ಧ. ಈ ಜನ್ಮಾಷ್ಟಮಿ ಹಬ್ಬದ ಇತಿಹಾಸವು ಬುಷಾರ್ ರಾಜಪ್ರಭುತ್ವದ ರಾಜ್ಯದ ಜೊತೆ ತಳುಕು ಹಾಕಿಕೊಂಡಿದೆ. ಈ ಯುಲ್ಲಾ ಕಾಂಡದ ಜನ್ಮಾಷ್ಟಮಿಯು ರಾಜ ಕೆಹರಿ ಸಿಂಗ್ ಕಾಲದಲ್ಲಿ ಪ್ರಾರಂಭವಾಯಿತು. ಇಲ್ಲಿ ನಡೆಯುವ ಜಾತ್ರೆಯನ್ನು ನೋಡಲು ಹಾಗೂ ಪಾಲ್ಗೊಳ್ಳಲು ಸುತ್ತಮುತ್ತಲಿನ ಗ್ರಾಮಗಳಿಂದ ಮತ್ತು ಹೊರಗಿನಿಂದ ಜನರು ಸೇರುತ್ತಾರೆ.
ಟೋಪಿ ಭವಿಷ್ಯ:
ಕೃಷ್ಣ ಜನ್ಮಾಷ್ಟಮಿಯ ದಿನದಂದು, ಕಿನ್ನೌರಿ ಟೋಪಿಯನ್ನು ಕೃಷ್ಣ ದೇವಾಲಯದ ಉದ್ದಕ್ಕೂ ಹರಿಯುವ ಸರೋವರದಲ್ಲಿ ತಲೆಕೆಳಗಾಗಿ ಎಸೆಯಲಾಗುತ್ತದೆ. ಟೋಪಿ ತೇಲುತ್ತಾ ಹೋಗಿ ಮುಳುಗದೆ ಇನ್ನೊಂದು ತುದಿಯನ್ನು ತಲುಪಿದರೆ, ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ ಎಂಬ ಅರ್ಥವನ್ನು ಸೂಚಿಸುತ್ತದೆ. ನೀವು ಅಂದುಕೊಂಡ ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ ಎಂಬುದರ ಸಂಕೇತ ಇದಾಗಿದೆ. ಒಂದು ವೇಳೆ ಟೋಪಿ ಇನ್ನೊಂದು ತುದಿಯನ್ನು ತಲುಪುವ ಮುನ್ನ ಮುಳುಗಿದರೆ, ಕೆಟ್ಟದು ಸಂಭವಿಸಲಿದೆ ಎಂದು ನಂಬಲಾಗಿದೆ.
ಈ ಟೋಪಿಯ ಭವಿಷ್ಯ ಇಲ್ಲಿ ಬಹಳ ಪ್ರಸಿದ್ಧವಾಗಿದ್ದು, ಕಿನ್ನೌರ್ ಮಾತ್ರವಲ್ಲದೆ ಶಿಮ್ಲಾ ಮತ್ತು ಇತರ ಜಿಲ್ಲೆಗಳ ಜನರು ಸಹ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಇಲ್ಲಿಗೆ ಬರುತ್ತಾರೆ.
ಪುರಾಣಗಳ ಪ್ರಕಾರ, ಪಾಂಡವರು ವನವಾಸದ ಸಮಯದಲ್ಲಿ ಕಿನ್ನೌರ್ ಪರ್ವತದ ಮೇಲೆ ಒಂದು ರಾತ್ರಿ ವಿಶ್ರಾಂತಿ ಪಡೆದರು ಎಂದು ನಂಬಲಾಗಿದೆ. ಈ ವೇಳೆ ಯುಧಿಷ್ಠಿರನು ಈ ಪರ್ವತದ ಮೇಲೆ ಶ್ರೀ ಕೃಷ್ಣನನ್ನು ಧ್ಯಾನಿಸಿದನೆಂದು ನಂಬಲಾಗಿದೆ. ಚಾರಣ ಪ್ರಿಯರಿಗೆ ಈ ಸ್ಥಳ ಉತ್ತಮ ಆಯ್ಕೆ.
ದೇವಾಲಯದ ಭೇಟಿಗೆ ಉತ್ತಮ ಸಮಯ:
ಮೇನಿಂದ ಅಕ್ಟೋಬರ್‌ವರೆಗೆ ಯುಲ್ಲಾ ಕಾಂಡ ಚಾರಣವನ್ನು ಕೈಗೊಳ್ಳಲು ಉತ್ತಮ ಸಮಯ. ಈ ಸಮಯದಲ್ಲಿ ಹಿಮ ಕಡಿಮೆಯಾಗಿ ಹಾದಿಗಳು ಸ್ಪಷ್ಟವಾಗಿ ಗೋಚರಿಸುವುದರಿಂದ ಯಾವುದೇ ಅಡೆತಡೆಯಿಲ್ಲದೆ ಚಾರಣ ಮಾಡಬಹುದು. ಅಲ್ಲದೇ ಈ ಸಮಯದಲ್ಲಿ ತಾಪಮಾನವು ಆಹ್ಲಾದಕರವಾಗಿರುತ್ತದೆ, ಆಕಾಶ ಮತ್ತು ಸರೋವರವು ಸಂಪೂರ್ಣವಾಗಿ ಗೋಚರಿಸುತ್ತದೆ. ಇನ್ನು ಈ ಪ್ರದೇಶದಲ್ಲಿ ಆಲ್ಪೈನ್ ಸಸ್ಯವರ್ಗ ಸಂಪೂರ್ಣವಾಗಿ ಅರಳಿರುತ್ತದೆ. ಇದು ನಿಮ್ಮ ಟ್ರೆಕ್ಕಿಂಗ್‌ಗೆ ಮತ್ತಷ್ಟು ಹುರುಪು, ಸಂತೋಷವನ್ನು ನೀಡಿ ಮನಸ್ಸಿಗೆ ಮುದನೀಡುತ್ತದೆ.
ಈ ದೇವಾಲಯದಕ್ಕೆ ಸ್ಥಳೀಯ ಮಾರ್ಗದರ್ಶಿಯೊಂದಿಗೆ ಪ್ರಯಾಣಿಸುವುದು ಉತ್ತಮ. ಅಲ್ಲದೇ ಚಾರಣದ ವೇಳೆ ಬೆಚ್ಚಗಿನ ಬಟ್ಟೆ, , ಗಟ್ಟಿಮುಟ್ಟಾದ ಚಾರಣ ಬೂಟುಗಳು ಮತ್ತು ಪ್ರಯಾಣಕ್ಕೆ ಸಾಕಷ್ಟು ಆಹಾರ ಸಾಮಗ್ರಿಗಳಂತಹ ಅಗತ್ಯ ವಸ್ತುಗಳನ್ನು ಒಯ್ಯಿರಿ. ಈ ದೇವಾಲಯ ಎತ್ತರದಲ್ಲಿ ಇರುವ ಕಾರಣದಿಂದಾಗಿ,ಅಲ್ಲಿಗೆ ಒಗ್ಗಿಕೊಳ್ಳುವುದು ಸ್ವಲ್ಪ ಕಷ್ಟವೆನಿಸಬಹುದು. ದೇವಾಲಯಕ್ಕೆ ತೆರಳುವ ಮೊದಲು ಯುಲ್ಲಾ ಖಾಸ್‌ನಲ್ಲಿ ಒಂದು ದಿನ ಕಳೆಯಬಹುದು. ನವೆಂಬರ್‌ನಿಂದ ಏಪ್ರಿಲ್‌ವರೆಗೆ ಹೆಚ್ಚಿನ ಹಿಮಪಾತವಿರುವುದರಿಂದ ಈ ಸಮಯದಲ್ಲಿ ಚಾರಣ ಹಾಗೂ ದೇವಾಲಯದ ಭೇಟಿಯನ್ನು ತಪ್ಪಿಸಿದರೆ ಒಳ್ಳೆಯದು.
ಯುಲ್ಲಾ ಕಾಂಡಾ ಮಂದಿರಕ್ಕೆ ಹೇಗೆ ತಲುಪುವುದು?
-ಹತ್ತಿರದ ಪ್ರಮುಖ ನಗರ: ರೇಕಾಂಗ್ ಪಿಯೋ
-ಶಿಮ್ಲಾದಿಂದ ಸುಮಾರು 230 ಕಿ.ಮೀ.ದೂರ
-ರೇಕಾಂಗ್ ಪಿಯೋದಿಂದ ಯುಲ್ಲಾ ಗ್ರಾಮಕ್ಕೆ 25-30 ಕಿ.ಮೀ.
-ಹತ್ತಿರದ ರೈಲು ನಿಲ್ದಾಣ: ಶಿಮ್ಲಾ ಅಥವಾ ಕಾಲ್ಕಾ.
– ಕಾಲ್ಕಾದಿಂದ ಶಿಮ್ಲಾಕ್ಕೆ ಟಾಯ್ ಟ್ರೈನ್ ಸಹ ತೆಗೆದುಕೊಳ್ಳಬಹುದು.
-ಹತ್ತಿರದ ವಿಮಾನ ನಿಲ್ದಾಣ: ಶಿಮ್ಲಾ ವಿಮಾನ ನಿಲ್ದಾಣ (ಜುಬ್ಬರ್‌ಹಟ್ಟಿ).
-ಇಲ್ಲಿಂದ ಟ್ಯಾಕ್ಸಿ ಅಥವಾ ಬಸ್ ಮೂಲಕ ರೇಕಾಂಗ್ ಪಿಯೋ ತಲುಪಬಹುದು.
-ಬಸ್/ಟ್ಯಾಕ್ಸಿ ಮೂಲಕ-ಶಿಮ್ಲಾದಿಂದ ರೇಕಾಂಗ್ ಪಿಯೋಗೆ ಹಿಮಾಚಲ ಸಾರಿಗೆಯ ಬಸ್‌ಗಳು ಲಭ್ಯವಿದೆ.
-ರೇಕಾಂಗ್ ಪಿಯೋದಿಂದ ಟ್ಯಾಕ್ಸಿ ಅಥವಾ ಸ್ಥಳೀಯ ವಾಹನದ ಮೂಲಕ ಯುಲ್ಲಾ ತಲುಪಬೇಕು.
-ಟ್ರೆಕ್ಕಿಂಗ್ ಮೂಲಕ-ಯುಲ್ಲಾ ಗ್ರಾಮದಿಂದ 4-5 ಗಂಟೆಗಳ ಟ್ರೆಕ್ಕಿಂಗ್ ಮಾಡಬೇಕು.






