ಉಡುಪಿ: ಮಲ್ಪೆ ಕಡಲ ತೀರದಲ್ಲಿ (Malpe Beach) ಶ್ರೀಕೃಷ್ಣನ (Krishna) ವಿಗ್ರಹ ತೇಲಿ ಬಂದಿದೆ ಇದೊಂದು ದೊಡ್ಡ ಪವಾಡ ಎಂದು ಸಾವಿರಾರು ಜನ ಸಂಭ್ರಮಿಸುತ್ತಿದ್ದಾರೆ, ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ.
ಉಡುಪಿಯ ಮಲ್ಪೆಯಲ್ಲಿ ಪವಾಡ ಸಂಭವಿಸಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಭಾನುವಾರ ಉಡುಪಿ ಕೃಷ್ಣಮಠದಲ್ಲಿ ಇಸ್ಕಾನ್ (ISKCON) ಸಂಸ್ಥೆಯ ಧಾರ್ಮಿಕ ಕಾರ್ಯಕ್ರಮ ಇತ್ತು. ಸಾವಿರಾರು ಜನ ಇಸ್ಕಾನ್ ಅನುಯಾಯಿಗಳು ಮಠಕ್ಕೆ ಬಂದಿದ್ದರು, ಸಂಜೆ ಮಲ್ಪೆ ಸಮುದ್ರ ತೀರಕ್ಕೆ ತೆರಳಿದ್ದರು. ಈ ವೇಳೆ ಕಡಲಲ್ಲಿ ತೇಲಿ ಬಂದು ದಡದಲ್ಲಿ ಸಿಕ್ಕ ವಿಗ್ರಹವೊಂದು ಎಲ್ಲರ ಗಮನ ಸೆಳೆಯಿತು. ಅಲ್ಲಿ ಸೇರಿದ್ದ ಸಾವಿರಾರು ಮಂದಿ ಆ ವಿಗ್ರಹವನ್ನು ಮೇಲಕ್ಕೆ ತೆಗೆದು ಸಂಭ್ರಮಿಸಿದರು.
ಉಡುಪಿಯ (Udupi) ಶ್ರೀಕೃಷ್ಣ ದೇವರು ಕೂಡ ಕಡಲಲ್ಲೇ ಲಭ್ಯವಾದ ಕಾರಣ, ಇಸ್ಕಾನ್ ಭಕ್ತರು ಅದೇ ಪವಾಡ ಮತ್ತೊಮ್ಮೆ ಸಂಭವಿಸಿದೆ ಎಂದು ಕುಣಿದು ಕುಪ್ಪಳಿಸಿದರು. ಅಲ್ಲಿ ಸೇರಿದ್ದ ಸಾವಿರಾರು ಇಸ್ಕಾನ್ ಭಕ್ತರು ಆ ವಿಗ್ರಹವನ್ನು ಕೃಷ್ಣನೆಂದೇ ಭಾವಿಸಿ ಇಲ್ಲಿಂದ ಬೆಂಗಳೂರಿಗೆ ಕೊಂಡೊಯ್ಯುತ್ತಿದ್ದಾರೆ. ಇದನ್ನೂ ಓದಿ: ಹಣ ಹೂಡಿ ಅಧಿಕ ಲಾಭಗಳಿಸಿ – ಆಸೆಗೆ ಬಿದ್ದು 76 ಲಕ್ಷ ಪಂಗನಾಮ ಹಾಕಿಸಿಕೊಂಡ ವ್ಯಕ್ತಿ!
ಹೊಸ ದೈವಸ್ಥಾನ, ದೇವಸ್ಥಾನಗಳ ಪುನರ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಹಳೆಯ ಮೂರ್ತಿಗಳನ್ನು ಕೆತ್ತನೆಗಳನ್ನು ಶೈಲಿಗಳನ್ನು ಬದಲು ಮಾಡುತ್ತಾರೆ. ಧಾರ್ಮಿಕ ಆಚರಣೆಯ ಪ್ರಕಾರ ಅದನ್ನು ನದಿಗೋ ಸಮುದ್ರಕ್ಕೂ ವಿಸರ್ಜನೆ ಮಾಡಲು ಸೂಚನೆ ಕೊಡಲಾಗುತ್ತದೆ. ಮಲ್ಪೆಯಲ್ಲಿ ಸಿಕ್ಕ ಮೂರ್ತಿ ಕೂಡ ಇಂಥದ್ದೇ ಆಗಿರಬಹುದು. ದೇವಸ್ಥಾನದ ದ್ವಾರಪಾಲಕರ ರೀತಿ ಈ ಮೂರ್ತಿ ಗೋಚರಿಸುತ್ತದೆ ಎಂದು ಸ್ಥಳೀಯ ಸೂರಜ್ ಸಾಲಿಯಾನ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

