ಮಂಗಳೂರು: ಪೊಲೀಸರ ನಿರ್ಬಂಧದ ನಡುವೆಯೂ ಕೋಳಿ ಅಂಕ ಮಾಡಿಸಿದ ಪುತ್ತೂರು ಶಾಸಕ ಅಶೋಕ್ ರೈ ಸೇರಿದಂತೆ 17 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಕೇಪು ಎಂಬಲ್ಲಿ ಘಟನೆ ನಡೆದಿದೆ. ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ (Ashok Rai) ಸೇರಿದಂತೆ 17 ಜನರ ಮೇಲೆ ವಿಟ್ಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಕೋಳಿ ಅಂಕ ನಿಲ್ಲಬಾರದು – ಅರೆಸ್ಟ್ ಮಾಡೋದಾದ್ರೆ ಮೊದಲು ನನ್ನನ್ನೇ ಬಂಧಿಸಿ: ಶಾಸಕ ಅಶೋಕ್ ರೈ
ಕಾನೂನು ಬಾಹಿರ ಕೃತ್ಯವನ್ನು ನಡೆಸಲು ಪ್ರಚೋದನೆ ಮತ್ತು ದುಷ್ಪ್ರೇರಣೆಯನ್ನು ನೀಡಿದ ಆರೋಪದ ಮೇಲೆ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪ್ರಕರಣ ದಾಖಲಾಗಿದೆ. ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿ 16 ಜನರ ವಿರುದ್ಧ ಪೊಲೀಸರು ಕೇಸ್ ಹಾಕಿದ್ದಾರೆ. ಕೋಳಿ ಅಂಕಕ್ಕೆ ತಂದಿದ್ದ 22 ಹುಂಜ ಹಾಗೂ ಕೋಳಿ ಅಂಕಕ್ಕೆ ಬಳಸುವ ಬಾಳು (ಕತ್ತಿ)ವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಟ್ವಾಳ ತಾಲೂಕಿನ ವಿಟ್ಲದ ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಜಂಬು ಜಾತ್ರೋತ್ಸವದಲ್ಲಿ ಪ್ರತಿ ವರ್ಷ ನಡೆಯುವಂತೆ ಈ ಬಾರಿ ಊರಿನವರು ಕೋಳಿ ಅಂಕವನ್ನು ಆಯೋಜಿಸಿದ್ದರು. ಕೋಳಿ ಅಂಕ ಆಯೋಜನೆ ಮಾಡಿದ ವಿಚಾರ ತಿಳಿದ ವಿಟ್ಲ ಠಾಣೆಯ ಸಬ್ ಇನ್ಸ್‌ಪೆಕ್ಟರ್, ಇಲ್ಲಿ ಕೋಳಿ ಅಂಕ ಮಾಡುವಂತಿಲ್ಲ. ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ತನ್ನ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಿದ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಅಶೋಕ್ ರೈ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ನಿಮ್ಮನ್ನು ನಾವು ದೂರುವುದಿಲ್ಲ. ಮೇಲಾಧಿಕಾರಿಗಳು ಹೇಳಿದಂತೆ ನೀವು ಮಾಡುತ್ತಿರಬಹುದು. ಆದರೆ ಇಲ್ಲಿ ಜಾತ್ರೆಯ ವೇಳೆ ನಡೆಯುವ ಕೋಳಿ ಅಂಕ ನಡೆದುಕೊಂಡೇ ಬಂದಿದೆ. ಇವರು ಯಾರೂ ಹಣಕಟ್ಟಿ ಜೂಜು ಮಾಡುತ್ತಿಲ್ಲ. ಕುದುರೆ, ಕ್ರಿಕೆಟ್ ಬೆಟ್ಟಿಂಗ್‌ನಂತೆ ಇಲ್ಲಿ ಯಾವುದು ನಡೆಯುವುದಿಲ್ಲ. ಈ ಕೋಳಿ ಅಂಕ ಆಯೋಜನೆಗೆ ಅನುಮತಿ ನೀಡಬೇಕು ಎಂದು ಹೇಳಿದ್ದರು.


