– ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಪೈಲಟ್
ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Delhi Airport) ಟರ್ಮಿನಲ್-1 ರಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ಪೈಲಟ್ ಒಬ್ಬರು ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯ ಬಳಿಕ ವಿಮಾನಯಾನ ಸಂಸ್ಥೆ ತಕ್ಷಣವೇ ಹಲ್ಲೆ ನಟೆಸಿದ ಪೈಲಟ್ ಅನ್ನು ಅಮಾನತುಗೊಳಿಸಿದೆ.
ಪ್ರಯಾಣಿಕ ಅಂಕಿತ್ ದೇವನ್ ಎಂಬುವವರು ತಮ್ಮ ಕುಟುಂಬದೊಂದಿಗೆ (4 ತಿಂಗಳ ಶಿಶು ಮತ್ತು 7 ವರ್ಷದ ಮಗಳೊಂದಿಗೆ) ಸ್ಪೈಸ್‌ಜೆಟ್ (SpiceJet) ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ವಿಮಾನ ನಿಲ್ದಾಣ ಸಿಬ್ಬಂದಿ ಅವರನ್ನ ಆದ್ಯತೆಯ ಸುರಕ್ಷತಾ ಲೇನ್ (ಸಿಬ್ಬಂದಿ ಮತ್ತು ಸಹಾಯ ಅಗತ್ಯವಿರುವ ಪ್ರಯಾಣಿಕರಿಗೆ ಮೀಸಲಾದ ಲೇನ್) ಬಳಸುವಂತೆ ಸಲಹೆ ನೀಡಿದ್ದರು. ಆದರೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕ್ಯಾಪ್ಟನ್ ವೀರೇಂದರ್ ಸೆಜ್ವಾಲ್ ಅವರು ಸಾಲಿನ ಮುಂದೆ ಬಂದು ನಿಲ್ಲಲು ಪ್ರಯತ್ನಿಸಿದ್ದಾರೆ ಎಂದು ದೇವನ್ ಆರೋಪಿಸಿದ್ದಾರೆ. ಇದಕ್ಕೆ ದೇವನ್ ಆಕ್ಷೇಪ ವ್ಯಕ್ತಪಡಿಸಿದಾಗ ವಾಗ್ವಾದ ಉಂಟಾಗಿ, ಪೈಲಟ್ (Pilot) ಅವರು ಅವಮಾನಕರ ಭಾಷೆ ಬಳಸಿ ನಂತರ ದೈಹಿಕವಾಗಿ ದಾಳಿ ಮಾಡಿದ್ದಾರೆ ಎಂದು ದೇವನ್ ಆರೋಪಿಸಿದ್ದಾರೆ.
ಈ ದಾಳಿಯಿಂದ ಗಾಯಗೊಂಡ ದೇವನ್ ವೈದ್ಯಕೀಯ ಸಹಾಯ ಪಡೆದಿದ್ದಾರೆ. ಘಟನೆ ಬಳಿಕ ದೇವನ್ ಅವರು ಈ ಘಟನೆಯ ವಿವರಗಳನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಹಲ್ಲೆ ನಡೆಸಿದ ಪೈಲಟ್ ಹೆಸರು ಮತ್ತು ಭಾವಚಿತ್ರವನ್ನೂ ಬಿಡುಗಡೆ ಮಾಡಿದ್ದಾರೆ. ವಿಮಾನ ಹಾರಿಸದ ಸಮಯದಲ್ಲಿ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಪೈಲಟ್ ಈ ಘಟನೆಯ ಬಳಿಕವೂ ಪ್ರಯಾಣ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕೇಂದ್ರದ ಪೂರ್ವಾನುಮತಿ ಇಲ್ಲದೆ ಅರಣ್ಯಭೂಮಿ ಗುತ್ತಿಗೆ ನೀಡಲು ಸಾಧ್ಯವಿಲ್ಲ: ಸುಪ್ರೀಂ
ಘಟನೆಯ ಬಳಿಕ ದೇವನ್, ತಮಗೆ ದೂರು ದಾಖಲಿಸದಂತೆ ಒತ್ತಡ ಹೇರಿ ಒಂದು ಹೇಳಿಕೆಗೆ ಸಹಿ ಹಾಕಿಸಲಾಗಿದೆ ಎಂದು ಕೂಡ ಆರೋಪಿಸಿದ್ದಾರೆ. ವಿಮಾನ ತಪ್ಪಿಸಿಕೊಂಡರೆ ರಜಾದಿನದ ಬುಕಿಂಗ್‌ಗಳು ವೃಥಾ ಆಗುತ್ತಿದ್ದವು ಎಂಬ ಕಾರಣಕ್ಕೆ ಒತ್ತಡಕ್ಕೆ ಮಣಿದಿದ್ದೇನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಂಸತ್ತಿನ ಮೇಲ್ಮನೆಯಲ್ಲಿ ಮಧ್ಯರಾತ್ರಿ ಜಿ ರಾಮ್ ಜಿ ಮಸೂದೆ ಅಂಗೀಕಾರ; ವಿಪಕ್ಷಗಳ ಸಭಾತ್ಯಾಗ
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆ, ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದೆ. ಪ್ರಯಾಣಿಕನ ಮೇಲಿನ ಹಲ್ಲೆಗೆ ಕ್ಷಮೆಯಾಚಿಸುತ್ತೇವೆ. ಇಂತಹ ಅಸಭ್ಯ ನಡವಳಿಕೆಯನ್ನ ನಾವು ಖಂಡಿಸುತ್ತೇವೆ. ಸಂಬಂಧಿತ ಉದ್ಯೋಗಿಯನ್ನ ತಕ್ಷಣವೇ ಕರ್ತವ್ಯದಿಂದ ಅಮಾನತುಗೊಳಿಸಿದೆ. ಆಂತರಿಕ ತನಿಖೆಯ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ರಾಜಧಾನಿ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು 8 ಆನೆಗಳ ದಾರುಣ ಸಾವು – ಹಳಿ ತಪ್ಪಿದ ಬೋಗಿಗಳು


